ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಂಕುಶ ಪ್ರಭುತ್ವದ ಮಾನಸಿಕತೆ ಬದಲಾಗಲಿ: ನೀನಾಸಂ ಮುಖ್ಯಸ್ಥ ಕೆ.ವಿ.ಅಕ್ಷರ

Last Updated 14 ಅಕ್ಟೋಬರ್ 2018, 15:11 IST
ಅಕ್ಷರ ಗಾತ್ರ

ಶಿರಸಿ: ‘ಎಡ ಹಾಗೂ ಬಲ ಪಂಥೀಯ ವಿಚಾರಗಳನ್ನು ಸಂಯುಕ್ತವಾಗಿ ಗ್ರಹಿಸುವಲ್ಲಿ ಎಡವಿರುವ ಕಾರಣ ಸಮಾಜದಲ್ಲಿ ವಿಕೃತಿಗಳು ಹೆಚ್ಚುತ್ತಿವೆ. ಏಕ ದೃಷ್ಟಿಯಿಂದ ನೋಡುವ ನಿರಂಕುಶ ಪ್ರಭುತ್ವದ ಮಾನಸಿಕತೆ ಬದಲಾಗದಿದ್ದರೆ, ಈ ಕಾಲಘಟ್ಟದಲ್ಲಿ ಮಹತ್ವದ ಕವಿಗಳು ಹುಟ್ಟಲು ಸಾಧ್ಯವಿಲ್ಲ’ ಎಂದು ಹೆಗ್ಗೋಡು ನೀನಾಸಂ ಮುಖ್ಯಸ್ಥ ಕೆ.ವಿ.ಅಕ್ಷರ ಅಭಿಪ್ರಾಯಪಟ್ಟರು.

ವಿಶ್ವಶಾಂತಿ ಸೇವಾ ಟ್ರಸ್ಟ್‌ ಆಶ್ರಯದಲ್ಲಿ ಭಾನುವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಕ್ಷರ ಪ್ರಕಾಶನ ಪ್ರಕಟಿಸಿದ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎ.ಹೆಗಡೆ ದಂಟ್ಕಲ್ ಕನ್ನಡಕ್ಕೆ ಅನುವಾದಿಸಿದ, ಸಂಸ್ಕೃತ ಕವಿ ರಾಜಶೇಖರ ಅವರು 1100 ವರ್ಷಗಳ ಹಿಂದೆ ಬರೆದಿದ್ದ ‘ಬಾಲ ರಾಮಾಯಣ’ ಕೃತಿ ಬಿಡುಗಡೆಗೊಳಿಸಿ, ಅವರು ಮಾತನಾಡಿದರು.

‘ಎಡ ಪಂಥ, ಬಲ ಪಂಥ ಎನ್ನುವುದು ಮನಸಿನ ವಿಕಲ್ಪ. ನಿಜವಾದ ಜಗತ್ತಿನಲ್ಲಿ ಎಡ– ಬಲ ಪಂಥಗಳು ಇಲ್ಲ. ಎರಡೂ ಪಂಥೀಯರಿಗೆ ಪರಸ್ಪರ ವಿಚಾರ ತಿಳಿದುಕೊಳ್ಳುವುದು ಬೇಡವಾಗಿದೆ. ಹೀಗಾಗಿ, ಈ ಎರಡೂ ಕಣ್ಣುಗಳಿಗೂ ದೃಷ್ಟಿಮಾಂದ್ಯ ಉಂಟಾಗಿದೆ’ ಎಂದರು.

ಒಂದು ಕಣ್ಣಿಗೆ ಕಾಣುವ ಸತ್ಯವೇ ನಿಜವೆಂದುಕೊಳ್ಳುವ ಅಹಂಕಾರವು ಚಾಕು, ಚೂರಿ ತೆಗೆದುಕೊಂಡು ಹೋರಾಡುವ ಹಂತಕ್ಕೆ ತಲುಪಿಸುತ್ತಿದೆ. ಇಬ್ಬಗೆಯ ವಿಚಾರವನ್ನು ತಿಳಿದು, ಜ್ಞಾನವೆಂಬ ಮೂರನೇ ಕಣ್ಣಿನಿಂದ ಯೋಚಿಸುವ ಧೀಮಂತರಿಗೆ ಸತ್ಯ ಕಾಣಿಸುತ್ತಿದೆ. ಆದರೆ, ಮೂರನೇ ಕಣ್ಣಿನಿಂದ ನೋಡುವವರನ್ನು ಅಪಾಯಕಾರಿ ಮನುಷ್ಯರೆಂದು ಭಾವಿಸುವ ಕ್ಲಿಷ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಾಜದ ಈ ಸ್ಥಿತಿಯನ್ನು ಬದಲಿಸಲು ಸಾಧ್ಯವೇ ಎಂಬ ಕುರಿತು ಗಂಭೀರವಾಗಿ ಯೋಚಿಸಬೇಕಾಗಿದೆ ಎಂದು ಅಕ್ಷರ ಸಲಹೆ ಮಾಡಿದರು.

ದೇಶದ ಬುದ್ಧಿಜೀವಿಗಳು ನೋಡುತ್ತಿರುವ ಸತ್ಯ ಬೇರೆಯಾದರೆ, ಸಾಮಾನ್ಯ ಜನರು ನೋಡುತ್ತಿರುವ ಸತ್ಯವೇ ಬೇರೆಯಾಗಿದೆ. ಇವೆರಡೂ ವರ್ಗ ನೋಡುವ ದೃಷ್ಟಿ ಬದಲಾಗಬೇಕಿದೆ. ಆಗ ನಿಜವಾದ ಸತ್ಯ ಗೋಚರಿಸುತ್ತದೆ ಎಂದು ಹೇಳಿದರು.

ಲೇಖಕ ಮಾಧವ ಚಿಪ್ಪಳಿ ಕೃತಿ ಪರಿಚಯಿಸಿದರು. ರಾಘವೇಂದ್ರ ಬೆಟ್ಟಕೊಪ್ಪ ಸ್ವಾಗತಿಸಿದರು. ರಮೇಶ ಹಳೆಕಾನಗೋಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಿರಿಧರ ಕಬ್ನಳ್ಳಿ ನಿರೂಪಿಸಿದರು. ಗಾಯತ್ರಿ ರಾಘವೇಂದ್ರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT