ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಷ್ಟೇ ಹಾನಿಯಾಗಿದ್ದರೂ 2 ಹೆಕ್ಟೇರ್‌ಗಷ್ಟೇ ಪರಿಹಾರ

ಎನ್‌ಡಿಆರ್‌ಎಫ್‌ ಮಾರ್ಗಸೂಚಿಗೆ ಸಂತ್ರಸ್ತರ ಅಸಮಾಧಾನ
Last Updated 12 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ನೆರೆ ಮತ್ತು ಅತಿವೃಷ್ಟಿಯಿಂದ ಹಾನಿಗೊಳಗಾದ ಬೆಳೆಯಲ್ಲಿ ತಲಾ 2 ಹೆಕ್ಟೇರ್‌ಗಳಿಗಷ್ಟೇ ಪರಿಹಾರ ನೀಡುತ್ತಿರುವುದು ಸಂತ್ರಸ್ತ ರೈತರ ಅಸಮಾಧಾನಕ್ಕೆ ಕಾರಣವಾಗಿದೆ.

ಎಲ್ಲ ಬೆಳೆಯನ್ನೂ ಪರಿಹಾರಕ್ಕೆ ಪರಿಗಣಿಸಲು ಎನ್‌ಡಿಆರ್‌ಎಫ್‌ (ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ) ಮಾರ್ಗಸೂಚಿಗಳ ಪ್ರಕಾರ ಅವಕಾಶ ಇಲ್ಲದಂತಾಗಿದೆ.

ಇಲ್ಲಿ ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಸೇರಿ ಒಟ್ಟು 2,21,428 ಹೆಕ್ಟೇರ್‌ ಬೆಳೆ ಹಾಳಾಗಿದ್ದು, ಇದರಿಂದ ₹3,229 ಕೋಟಿ ಹಾನಿಯಾಗಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ. ಆದರೆ, ಬೆಳೆ ಕಳೆದುಕೊಂಡ ಪ್ರತಿ ರೈತರಿಗೆ 2 ಹೆಕ್ಟೇರ್‌ಗಳಿಗೆ ಮಾತ್ರವೇ ಅಂದರೆ 5 ಎಕರೆಗಳಿಗಷ್ಟೇ ಪರಿಹಾರ ದೊರೆಯಲಿದೆ. ಇದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ ಎನ್ನುವುದು ಬೆಳೆಗಾರರ ಅತೃಪ್ತಿಯಾಗಿದೆ.

ಹೆಕ್ಟೇರ್‌ಗಟ್ಟಲೆ ಇದ್ದವರಿಗೆ ನಷ್ಟ:

ಭತ್ತ, ಜೋಳ, ಗೋವಿನಜೋಳ, ಸಜ್ಜೆ, ಹೆಸರು, ಉದ್ದು, ತೊಗರಿ, ಶೇಂಗಾ, ಸೋಯಾಅವರೆ, ಸೂರ್ಯಕಾಂತಿ, ಕಬ್ಬು, ಹತ್ತಿ ಮೊದಲಾದ ಬೆಳೆಗಳು ಹಾಳಾಗಿವೆ. ಕೇಂದ್ರ ಸರ್ಕಾರದಿಂದ ನೀಡುವ ಪರಿಹಾರದೊಂದಿಗೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ₹ 10ಸಾವಿರ ಪರಿಹಾರ ಘೋಷಿಸಿದೆ. ಈ ಪ್ರಕಾರ, ಮಳೆಯಾಶ್ರಿತ ಬೆಳೆಗೆ ಹೆಕ್ಟೇರ್‌ಗೆ ₹ 16,800, ನೀರಾವರಿಗೆ ₹ 23,500 ಹಾಗೂ ಬಹುವಾರ್ಷಿಕ ಬೆಳೆಗಳಿಗೆ ₹28ಸಾವಿರ ಪರಿಹಾರ ನಿಗದಿಪಡಿಸಲಾಗಿದೆ. ಇದರಿಂದ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಅನುಕೂಲವಾಗುತ್ತದೆ. ಆದರೆ, ಹೆಕ್ಟೇರ್‌ಗಟ್ಟಲೆ ಕೃಷಿ ಮಾಡುವವರಿಗೆ ಸರ್ಕಾರದಿಂದ ನೀಡುವ ಆರ್ಥಿಕ ನೆರವು ಅತ್ಯಂತ ಕಡಿಮೆ ಪ್ರಮಾಣದ್ದಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಬೆಳೆ ಕೈಗೆ ಬಂದರೆ ಲಕ್ಷಾಂತರ ರೂಪಾಯಿ ಆದಾಯ ಕಾಣಬಹುದು ಎಂಬ ನಿರೀಕ್ಷೆಯಲ್ಲಿದ್ದ ಸಂತ್ರಸ್ತ ರೈತರು ಗರಿಷ್ಠ ₹ 28ಸಾವಿರಕ್ಕಷ್ಟೇ ತೃಪ್ತಿಪಡಬೇಕಾದ ಸ್ಥಿತಿ ಎದುರಾಗಿದೆ.

ಕೆಲವರಿಗಷ್ಟೇ ಪರಿಹಾರ:

ಸಮೀಕ್ಷೆ ಪ್ರಕಾರ, ಜಿಲ್ಲೆಯಲ್ಲಿ 2,12,940 ರೈತರು ಬೆಳೆ ಹಾಳಾಗಿದ್ದರಿಂದ ಹಾನಿ ಅನುಭವಿಸಿದ್ದಾರೆ. ನೆರೆ ಬಂದು ಮೂರು ತಿಂಗಳುಗಳೇ ಕಳೆದಿವೆ. ಈವರೆಗೆ 4ಸಾವಿರ ಮಂದಿಗಷ್ಟೇ ಪರಿಹಾರ ಜಮಾ ಮಾಡಲಾಗಿದೆ. ಕೊಡುತ್ತಿರುವ ಮೂರು ಕಾಸಿನ ಪರಿಹಾರವನ್ನೂ ತ್ವರಿತವಾಗಿ ನೀಡುತ್ತಿಲ್ಲದಿರುವುದರಿಂದ ರೈತರು ಸಂಕಷ್ಟದಿಂದ ಪಾರಾಗಲು ಸಾಧ್ಯವಾಗಿಲ್ಲ. ಈ ಹಣವು ಹಾಳಾದ ಬೆಳೆ ತೆಗೆದು, ಜಮೀನು ಹದಗೊಳಿಸಿ, ಪರಿಕರಗಳನ್ನು ಖರೀದಿಸಿ ಹಿಂಗಾರು ಕೃಷಿ ಕೈಗೊಳ್ಳುವುದಕ್ಕೆ ಸಾಲುವುದಿಲ್ಲ ಎನ್ನುವುದು ರೈತರ ನೋವಾಗಿದೆ.

‘ಹಿಂದೆಂದೂ ಕಂಡು ಕೇಳರಿಯದ ರೀತಿ ನೆರೆ ಬಂದು ರೈತರ ಬದುಕು ಕೊಚ್ಚಿ ಹೋಗಿದೆ. ಇದೆಲ್ಲ ಗೊತ್ತಿದ್ದರೂ ಹಳೆಯ ಮಾರ್ಗಸೂಚಿಗಳ ಪ್ರಕಾರ ಅತ್ಯಲ್ಪ ಪರಿಹಾರ ಕೊಡುತ್ತಿರುವುದು ಸರಿಯಲ್ಲ. ಹಾಳಾದ ಎಲ್ಲ ಬೆಳೆಗೂ ಪರಿಹಾರ ನೀಡಬೇಕು. ಈ ಮೂಲಕ ಅವರು ಹೊಸ ಬದುಕು ಕಟ್ಟಿಕೊಳ್ಳಲು ಸರ್ಕಾರ ನೆರವಾಗಬೇಕು’ ಎಂದು ರೈತ ಮುಖಂಡ ಚೂನಪ್ಪ ಪೂಜಾರಿ ಆಗ್ರಹಿಸಿದರು.

‘ಎನ್‌ಡಿಆರ್‌ಎಫ್‌ ಮಾರ್ಗಸೂಚಿಗಳ ಪ್ರಕಾರ ನೀಡುವ ಪರಿಹಾರ ಸಾಲುವುದಿಲ್ಲ ಎನ್ನುವುದು ರೈತರ ಆಗ್ರಹವಾಗಿದೆ. ಹೀಗಾಗಿ, ಮಾರ್ಗಸೂಚಿ ಪರಿಷ್ಕರಣೆಗೆ ಕೇಂದ್ರ ಸರ್ಕಾರವನ್ನು ಕೋರಲಾಗಿದೆ’ ಎಂದು ಮುಖ್ಯಮಂತ್ರಿ ಇಲ್ಲಿ ತಿಳಿಸಿದ್ದರು. ಇದಕ್ಕೆ ಕೇಂದ್ರದಿಂದ ಸ್ಪಂದನೆ ದೊರೆತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT