ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದಾಖಲೆ ಬರೆದ ಆಸ್ಟ್ರೇಲಿಯಾ

ಈಜು: 4X100 ಮೀ. ಫ್ರೀಸ್ಟೈಲ್‌ ರಿಲೇ ವಿಭಾಗದಲ್ಲಿ ಆತಿಥೇಯರ ಪಾರಮ್ಯ
Last Updated 5 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಗೋಲ್ಡ್‌ ಕೋಸ್ಟ್‌: ಕಾಮನ್‌ವೆಲ್ತ್‌ ಕ್ರೀಡಾಕೂಟದ ಈಜು ವಿಭಾಗದಲ್ಲಿ ಗುರುವಾರ ಆಸ್ಟ್ರೇಲಿಯಾದ ಈಜುಪಟುಗಳು ಪಾರಮ್ಯ ಸಾಧಿಸಿದರು.

ಮಹಿಳೆಯರ 4X100 ಮೀಟರ್ಸ್‌ ಫ್ರೀಸ್ಟೈಲ್ ರಿಲೇ ಸ್ಪರ್ಧೆಯಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿಶ್ವದಾಖಲೆಯೊಂದಿಗೆ ಚಿನ್ನ ಗೆದ್ದಿತು.

ಆಪ್ಟಸ್‌ ಈಜು ಕೇಂದ್ರದಲ್ಲಿ ನಡೆದ ಸ್ಪರ್ಧೆಯಲ್ಲಿ ಶಯನಾ ಜ್ಯಾಕ್‌, ಬ್ರೊಂಟೆ ಕ್ಯಾಂಪ್‌ಬೆಲ್‌, ಎಮ್ಮಾ ಮೆಕಿಯೊನ್‌ ಮತ್ತು ಕೇಟ್‌ ಕ್ಯಾಂಪ್‌ಬೆಲ್‌ ಅವರಿದ್ದ ಕಾಂಗರೂಗಳ ನಾಡಿನ ತಂಡ 3 ನಿಮಿಷ 30.05 ಸೆಕೆಂಡುಗಳಲ್ಲಿ ಗುರಿ ಮುಟ್ಟಿತು.

ಈ ಮೂಲಕ ಆಸ್ಟ್ರೇಲಿಯಾ ತನ್ನದೇ ಹೆಸರಿನಲ್ಲಿದ್ದ ದಾಖಲೆ ಮೀರಿ ನಿಂತಿತು. 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಈ ತಂಡ 3:30.65 ಸೆಕೆಂಡುಗಳಲ್ಲಿ ಗುರಿ ಸೇರಿತ್ತು.

ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಜ್ಯಾಕ್‌ 54.03 ಸೆಕೆಂಡುಗಳಲ್ಲಿ ನಿಗದಿತ ದೂರ ಕ್ರಮಿಸಿದರು. ಕ್ಯಾಂಪ್‌ಬೆಲ್‌ (52.03ಸೆ.), ಮೆಕಿಯೊನ್‌ (52.99ಸೆ.) ಮತ್ತು ಕೇಟ್‌ (51.00ಸೆ.) ಕೂಡ ಶ್ರೇಷ್ಠ ಸಾಮರ್ಥ್ಯ ತೋರಿದರು.

ಕೆನಡಾ ತಂಡ ಈ ವಿಭಾಗದ ಬೆಳ್ಳಿ ತನ್ನದಾಗಿಸಿಕೊಂಡಿತು. ಅಲೆಕ್ಸಾ ಜೆವಿನಿಕ್‌, ಕೇಲಿ ಸ್ಯಾಂಚೆಜ್‌, ಪೆನ್ನಿ ಒಲೆಕ್ಸಿಯಕ್‌ ಮತ್ತು ಟೇಲರ್‌ ರುಕ್‌  ಅವರಿದ್ದ ತಂಡ 3:33.92 ಸೆಕೆಂಡುಗಳಲ್ಲಿ ಗುರಿ ಸೇರಿತು.

ಇಂಗ್ಲೆಂಡ್‌ ತಂಡದ ಸ್ಲೊಬಾನ್‌ ಮೇರಿ ಕಾನರ್‌, ಫ್ರೆಯಾ ಆ್ಯಂಡರ್‌ಸನ್‌, ಅನಾ ಹಾಪ್‌ಕಿನ್‌ ಮತ್ತು ಎಲೀನರ್‌ ಫಾಕ್ನರ್‌ ಅವರು 3:38.40 ಸೆಕೆಂಡುಗಳಲ್ಲಿ ಅಂತಿಮ ರೇಖೆ ಮುಟ್ಟಿ ಕಂಚು ತಮ್ಮದಾಗಿಸಿಕೊಂಡರು.

ಮಹಿಳೆಯರ 400 ಮೀಟರ್ಸ್‌ ವೈಯಕ್ತಿಕ ಮೆಡ್ಲೆ ವಿಭಾಗದಲ್ಲಿ ಇಂಗ್ಲೆಂಡ್‌ನ ಆ್ಯಮಿ ವಿಲ್‌ಮೊಟ್‌ ಚಿನ್ನಕ್ಕೆ ಮುತ್ತಿಕ್ಕಿದರು.

ಆ್ಯಮಿ 4 ನಿಮಿಷ 34.90 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿದರು.

ಸ್ಕಾಟ್ಲೆಂಡ್‌ನ ಹನ್ನಾ ಮಿಲೆ (4:35.16ಸೆ.) ಬೆಳ್ಳಿ ಗೆದ್ದರೆ, ಆಸ್ಟ್ರೇಲಿಯಾದ ಬ್ಲೇರ್‌ ಇವಾನ್ಸ್‌ (4:38.23ಸೆ.) ಕಂಚಿಗೆ ತೃಪ್ತಿಪಟ್ಟರು.

ಟೇಲರ್‌ ಕೂಟ ದಾಖಲೆ: ಮಹಿಳೆಯರ 200 ಮೀಟರ್ಸ್‌ ಫ್ರೀಸ್ಟೈಲ್‌ನಲ್ಲಿ ಕೆನಡಾದ ಟೇಲರ್‌ ರಕ್‌ ಕೂಟ ದಾಖಲೆಯೊಂದಿಗೆ ಚಿನ್ನ ಜಯಿಸಿದರು.

ಟೇಲರ್‌ ಅವರು ಒಂದು ನಿಮಿಷ 54.81 ಸೆಕೆಂಡುಗಳನ್ನು ಗುರಿ ತಲುಪಿದರು.

ಆಸ್ಟ್ರೇಲಿಯಾದ ಅರಿಯಾರ್ನ್‌ ಟಿಟಮಸ್‌ (1:54.85ಸೆ.) ಮತ್ತು ಎಮ್ಮಾ ಮೆಕ್‌ಕಿಯೊನ್‌ (1:56.26ಸೆ.) ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು.

ಮ್ಯಾಕ್‌ ಹೊರ್ಟನ್‌ಗೆ ಚಿನ್ನ: ಪುರುಷರ 400 ಮೀಟರ್ಸ್‌ ಫ್ರೀಸ್ಟೈಲ್ ವಿಭಾಗದ ಚಿನ್ನ ಆಸ್ಟ್ರೇಲಿಯಾದ ಮಾರ್ಕ್‌ ಹೊರ್ಟನ್‌ ಅವರ ಪಾಲಾಯಿತು.

ಹೊರ್ಟನ್‌ ನಿಗದಿತ ದೂರ ಕ್ರಮಿಸಲು 3 ನಿಮಿಷ 43.76 ಸೆಕೆಂಡು ತೆಗೆದುಕೊಂಡರು. ಇಯಾನ್ ಥೋರ್ಪ್‌ ನಂತರ ಕಾಮನ್‌ವೆಲ್ತ್‌ ಕೂಟದ 400 ಮೀಟರ್ಸ್‌ ಫ್ರೀಸ್ಟೈಲ್‌ನಲ್ಲಿ ಚಿನ್ನ ಗೆದ್ದ ಆಸ್ಟ್ರೇಲಿಯಾದ ಈಜುಪಟು ಎಂಬ ಹಿರಿಮೆಯನ್ನು ಹೊರ್ಟನ್‌ ತಮ್ಮದಾಗಿಸಿಕೊಂಡರು.

ಆಸ್ಟ್ರೇಲಿಯಾದ ಜ್ಯಾಕ್‌ ಮೆಕ್‌ಲಾಲಿನ್‌ (3:45.21ಸೆ.) ಮತ್ತು ಇಂಗ್ಲೆಂಡ್‌ನ ಜೇಮ್ಸ್‌ ಗಯ್‌ (3:45.32ಸೆ.) ಅವರು ಕ್ರಮವಾಗಿ ಬೆಳ್ಳಿ ಮತ್ತು ಕಂಚು ಜಯಿಸಿದರು.

ಪುರುಷರ ವಿಭಾಗದ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಇಂಗ್ಲೆಂಡ್‌ನ ಜೇಮ್ಸ್‌ ವಿಲ್ಬಿ ಚಿನ್ನದ ಸಾಧನೆ ಮಾಡಿದರು.

ಜೇಮ್ಸ್‌ ಅವರು ನಿಗದಿತ ದೂರ ಕ್ರಮಿಸಲು ಎರಡು ನಿಮಿಷ 08.05 ಸೆಕೆಂಡು ತೆಗೆದುಕೊಂಡರು.

ಸ್ಕಾಟ್ಲೆಂಡ್‌ನ ರಾಸ್‌ ಮುರ್ಡೊಕ್‌ (2:08.32ಸೆ.) ಬೆಳ್ಳಿ ಗೆದ್ದರು. ಆಸ್ಟ್ರೇಲಿಯಾದ ಮ್ಯಾಟ್‌ ವಿಲ್ಸನ್‌ (2:08.64ಸೆ.) ಕಂಚು ಜಯಿಸಿದರು.

**

ಶ್ರೀಹರಿ ಸೆಮಿಫೈನಲ್‌ಗೆ

‍ಪುರುಷರ 100 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌ನಲ್ಲಿ ಕಣದಲ್ಲಿರುವ ಕರ್ನಾಟಕದ ಶ್ರೀಹರಿ ನಟರಾಜ್‌ ಅವರು ಸೆಮಿಫೈನಲ್ ಪ್ರವೇಶಿಸಿದರು.

ಮೊದಲ ಹೀಟ್‌ನ ಎರಡನೆ ಲೇನ್‌ನಲ್ಲಿದ್ದ ಶ್ರೀಹರಿ 56.71 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.

ಎಂಟು ಮಂದಿ ಸ್ಪರ್ಧಿಸಿದ್ದ ಈ ಹೀಟ್‌ನಲ್ಲಿ ಶ್ರೀಹರಿ ಐದನೆ ಸ್ಥಾನ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT