ಬೇಬಿಬೆಟ್ಟದಲ್ಲಿ ರಾತ್ರಿ ಗಣಿಗಾರಿಕೆ

7
ನಿಷೇಧದ ನಡುವೆಯೂ ಗಣಿ ಚಟುವಟಿಕೆ

ಬೇಬಿಬೆಟ್ಟದಲ್ಲಿ ರಾತ್ರಿ ಗಣಿಗಾರಿಕೆ

Published:
Updated:
Deccan Herald

ಮಂಡ್ಯ: ಕೆಆರ್‌ಎಸ್‌ ಸಂರಕ್ಷಿಸುವ ಸಲುವಾಗಿ ಪಾಂಡವಪುರ ತಾಲ್ಲೂಕು ಬೇಬಿಬೆಟ್ಟ ಅಮೃತ್‌ ಮಹಲ್‌ ಕಾವಲು ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೆ ರಾತ್ರಿ ವೇಳೆ ಕಲ್ಲು ಗಣಿಗಾರಿಕೆ ನಡೆಸುತ್ತಿದೆ.

ರಾತ್ರಿ ವೇಳೆ ವಿದ್ಯುತ್‌ ಬೆಳಕಿನಲ್ಲಿ ಕಲ್ಲು ಕ್ರಷರ್‌ಗಳು ನಡೆಯುತ್ತಿರುವ ವಿಡಿಯೊ, ಛಾಯಾಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಬೇಬೆಬೆಟ್ಟದ ಸುತ್ತಮುತ್ತ ವಾಸಿಸುವ ಹಳ್ಳಿಗಳ ಜನರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಜಲ್ಲಿ ತಯಾರಿಕೆ, ಸಾಗಣೆ ಚಟುವಟಿಕೆಗಳು ನಡೆಯುತ್ತಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಬೆಳಿಗ್ಗೆಯಿಂದಲೂ ಗಣಿ ಯಂತ್ರಗಳು ಮೌನವಾಗಿರುತ್ತದೆ. ಹಗಲಿನಲ್ಲಿ ಪೊಲೀಸರು ಇರುತ್ತಾರೆ. ಆದರೆ ರಾತ್ರಿ ಯಾವ ಪೊಲೀಸರೂ ಇರುವುದಿಲ್ಲ. ಇದರಲ್ಲಿ ಪೊಲೀಸರು ಶಾಮೀಲಾಗಿದ್ದಾರೆ ಎಂಬ ಅನುಮಾನ ಇದೆ. ರಾತ್ರಿ 8 ಗಂಟೆಯಾಗುತ್ತಿದ್ದಂತೆ ಗಣಿ ಚಟುವಟಿಕೆ ಆರಂಭಗೊಳ್ಳುತ್ತದೆ.

ಕಾರ್ಮಿಕರು ಗಣಿ ಪ್ರದೇಶದಲ್ಲೇ ವಾಸವಾಗಿದ್ದು ನಸುಕಿನವರೆಗೂ ಗಣಿಗಾರಿಕೆ ನಡೆಸುತ್ತಾರೆ’ ಎಂದು ರಾಗಿಮುದ್ದನಹಳ್ಳಿ ಗ್ರಾಮದ ವ್ಯಕ್ತಿಯೊಬ್ಬರು ತಿಳಿಸಿದರು.

‘ಛಾಯಾಚಿತ್ರ, ವಿಡಿಯೊ ವೀಕ್ಷಣೆ ಮಾಡಿದ್ದೇನೆ. ಶನಿವಾರ ಗಣಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಯಾವ ಗಣಿಯಲ್ಲಿ ರಾತ್ರಿ ವೇಳೆ ಗಣಿಗಾರಿಕೆ ನಡೆಯುತ್ತಿದೆ ಎಂಬುದನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ಸ್ಥಳೀಯರೂ ಈ ಬಗ್ಗೆ ಸ್ಪಷ್ಟವಾಗಿ ಹೇಳುತ್ತಿಲ್ಲ. ರಾತ್ರಿ ಹೆಚ್ಚು ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಿ ನಿಗಾ ಇಡುವಂತೆ ಪಾಂಡವಪುರ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಗಣಿಗಾರಿಕೆ ನಡೆಯುತ್ತಿರುವುದು ಕಂಡು ಬಂದರೆ ಪ್ರಕರಣ ದಾಖಲು ಮಾಡಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ್‌ ದೇವರಾಜ್‌ ಹೇಳಿದರು.

ಬೇಬಿಬೆಟ್ಟದಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯಿಂದ ಸಮೀಪದಲ್ಲೇ ಇರುವ ಕೆಆರ್‌ಎಸ್‌ ಜಲಾಶಯಕ್ಕೆ ಧಕ್ಕೆ ಉಂಟಾಗುತ್ತಿದೆ ಎಂಬ ವರದಿ ಹಿನ್ನೆಲೆಯಲ್ಲಿ ಗಣಿ ಚಟುವಟಿಕೆಗಳನ್ನು ಜಿಲ್ಲಾಧಿಕಾರಿ ನಿಷೇಧಿಸಿದ್ದಾರೆ. ಗಣಿ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !