ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮಘಟ್ಟದಲ್ಲಿ ಮತ್ತೆ ಗಣಿಗಾರಿಕೆ ಸದ್ದು!

ಜಿಲ್ಲಾಡಳಿತ– ಸಹ್ಯಾದ್ರಿ ಶ್ರೇಣಿಯ ಸ್ಥಳೀಯರ ಮಧ್ಯೆ ತೀವ್ರಗೊಂಡ ಸಂಘರ್ಷ
Last Updated 15 ಮಾರ್ಚ್ 2019, 6:30 IST
ಅಕ್ಷರ ಗಾತ್ರ

ಶಿವಮೊಗ್ಗ: ಅರಣ್ಯ ಇಲಾಖೆ ಅನುಮತಿ ನಿರಾಕರಿಸಿದರೂ ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮವಲಯ ಪ್ರದೇಶದಲ್ಲಿ ಕಲ್ಲು ಗಣಿಕಾರಿಕೆ ನಡೆಸಲು ಖಾಸಗಿ ವ್ಯಕ್ತಿಗಳಿಗೆ ರಾಜ್ಯ ಸರರ್ಕಾರ ಅನುಮತಿ ನೀಡಿದೆ. ಸರ್ಕಾರದ ಈ ನಿರ್ಧಾರ ಜಿಲ್ಲಾಡಳಿತ–ಸ್ಥಳೀಯರ ಮಧ್ಯೆ ಸಂಘರ್ಷಕ್ಕೆ ನಾಂದಿ ಹಾಡಿದೆ.

ಹೊಸನಗರ ತಾಲ್ಲೂಕು ಪ್ರಸಿದ್ಧ ಹೊಂಬುಜ ಕ್ಷೇತ್ರ, ಹುಂಚ ಗ್ರಾಮದ ಸಮೀಪದ ಹಸಿರುಬೆಟ್ಟದ ದಟ್ಟ ಕಾನನದ ಮಧ್ಯೆ ನಾಲ್ಕು ಸ್ಥಳಗಳಲ್ಲಿ ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ.

ಈ ಪ್ರದೇಶ ಪರಿಭಾವಿತ ಅರಣ್ಯ, ಕಾನು ಅರಣ್ಯ, ಗೋಮಾಳ, ಸೊಪ್ಪಿನ ಬೆಟ್ಟ ಹಾಗೂ ಗ್ರಾಮಗಳ ಸಾಮೂಹಿಕ ಭೂಮಿ ಒಳಗೊಂಡಿದೆ. ಹಲವು ನೀರಿನ ತೊರೆ, ಹೊಳೆಗಳಿವೆ. ಗಣಿಗಾರಿಕೆಗೆ ನಿಗದಿಯಾದ ಬೆಟ್ಟದ ಸುತ್ತ 6 ಕೆರೆಗಳಿವೆ, ನಾಗರಹಳ್ಳಿ ಗ್ರಾಮ ದೇವಸ್ಥಾನವಿದೆ, ಚೌಡಮ್ಮನ ಕಾನು, ಭೂತರಾಯನ ಕಾನುಗಳಿವೆ. ಪಕ್ಕದಲ್ಲೇ ಹುಗಡಿ ಬೆಟ್ಟವಿದೆ. ಕೆಳಗಿನ ಕಣಿವೆ ಪ್ರದೇಶದಲ್ಲಿ ನೂರಾರು ಎಕರೆ ತೋಟ, ಗದ್ದೆಗಳಿವೆ. ಅಲ್ಲಿಂದ ಕೇವಲ1 ಕಿ.ಮೀ. ದೂರದ ಬಿಲ್ಲೇಶ್ವರ ಕುಮದ್ವತಿ ನದಿಯ ಮೂಲ ಸ್ಥಾನ. ಈ ಪ್ರದೇಶದ ವ್ಯಾಪ್ತಿಯಲ್ಲೇ ಕುಶಾವತಿ, ಶರಣ್ಮತಿ ಸೇರಿ ಪಂಚನದಿಗಳ ಉಗಮವಾಗುತ್ತವೆ. 4 ಕಿ.ಮೀ. ದೂರದಲ್ಲಿ ಶೆಟ್ಟಿಹಳ್ಳಿ ಅಭಯಾರಣ್ಯವಿದೆ.

ಭೂ ಕಂಪನದ ಪ್ರದೇಶ: ಚಕ್ರ–ವರಾಹಿ, ಸಾವೇಹಕ್ಲು, ಮಾಣಿ ಜಲಾಶಯಗಳ ಈ ಪ್ರದೇಶದಲ್ಲಿ ತಿಂಗಳ ಅವಧಿಯಲ್ಲೇ ಮೂರು ಬಾರಿ ಭೂಕಂಪನವಾಗಿದೆ. ಭೂ ಕುಸಿತಗಳಾಗಿವೆ. ನದಿಮೂಲಗಳ ಬಳಿ ಗಣಿಗಾರಿಕೆಗೆ ಅವಕಾಶ ಬೇಡ ಎಂದು ಭಾರತೀಯ ವಿಜ್ಞಾನ ಸಂಸ್ಥೆ ವರದಿ ನೀಡಿದೆ.

‘ಹೊಸನಗರ ತಾಲ್ಲೂಕು ಹುಂಚ ಗ್ರಾಮದ ಹಸಿರು ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆ ಆರಂಭಕ್ಕೆ ಮುಂದಾಗಿದ್ದಾರೆ. ಗೋಮಾಳ-ಕಾನು ಪ್ರದೇಶದಲ್ಲಿ ಬೆಟ್ಟ ಅಗೆಯಲು ಬಂದ ಜೆಸಿಬಿಗಳನ್ನು ಈಗಾಗಲೇ ಹಿಮ್ಮೆಟ್ಟಿಸಿದ್ದೇವೆ. ಅರಣ್ಯ ನಾಶಕ್ಕೆ ಅವಕಾಶ ನೀಡುವುದಿಲ್ಲ. ಸ್ಥಳೀಯ ಜತೆ ಸೇರಿ ಜೀವ ಕೊಟ್ಟಾದರೂ ರಕ್ಷಿಸುತ್ತೇವೆ’ ಎನ್ನುತ್ತಾರೆ ಹುಂಚ ಗ್ರಾಮಭೂಮಿ ಸಂರಕ್ಷಣಾ ಸಮಿತಿ ಸಂಚಾಲಕ ನಾಗೇಂದ್ರ.

ಅರಣ್ಯ ಇಲಾಖೆ ವರದಿಗಿಲ್ಲ ಕಿಮ್ಮತ್ತು:

ಈ ಪ್ರದೇಶ 2010ಕ್ಕಿಂತ ಹಿಂದಿನ ಭೂ ದಾಖಲೆಗಳಲ್ಲಿ ಅರಣ್ಯ ಎಂದು ನಮೂದಾಗಿತ್ತು. ಹೊಸನಗರ ವಲಯ ಅರಣ್ಯಾಧಿಕಾರಿಗಳು ಈ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು 2017ರಲ್ಲಿ ವರದಿ ನೀಡಿದ್ದರು. ಈಗ ಅರಣ್ಯ ಎಂಬ ಅಂಶವೇ ಇಲ್ಲ. ಮೂರು ವರ್ಷಗಳ ಹಿಂದೆ ಇಲ್ಲೇ ಅಕ್ರಮ ಗಣಿಕಾರಿಕೆ ಪ್ರಯತ್ನಗಳು ನಡೆದಿದ್ದವು. ಸ್ಥಳೀಯರ ವಿರೋಧ, ಅರಣ್ಯ ಇಲಾಖೆ ಬಿಗಿ ಕ್ರಮಗಳಿಂದ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ಇಲ್ಲಿಗೆ ಸಮೀಪದ ಕಾರಕಾಡ್ಲು ಕಣಿವೆಯಲ್ಲೂ ಹಿಂದೆ ಕಬ್ಬಿಣದ ಅದಿರು ತೆಗೆಯುವ ಪ್ರಕ್ರಿಯೆ ಆರಂಭವಾದಾಗಲೂ ಇಂತಹದ್ದೇ ವಿರೋಧ ಎದುರಾಗಿತ್ತು. ಕೊನೆಗೆ ಒತ್ತಡಕ್ಕೆ ಮಣಿದ ಜಿಲ್ಲಾಡಳಿತ ಅನಮತಿ ರದ್ದುಪಡಿಸಿತ್ತು.

ಗಣಿಗಾರಿಕೆ ವಿರುದ್ಧ ಹೋರಾಟದಲ್ಲಿ ಇಡೀ ಸಮುದಾಯ ಭಾಗವಹಿಸಬೇಕು. ಅದಕ್ಕಾಗಿ ವೃಕ್ಷಲಕ್ಷ ಆಂದೋಲನ ಎಲ್ಲರನ್ನೂ ಒಂದೇ ವೇದಿಕೆ ಅಡಿ ತರುವ ಪ್ರಯತ್ನ ಮಾಡಿದೆ. ಹುಂಚ ಭೂ ಸಂರಕ್ಷಣಾ ಸಮಿತಿ, ಗ್ರಾಮ ಭೂಮಿ ಸಂರಕ್ಷಣಾ ಸಮಿತಿ, ಅಮೃತ, ಹನಿಯ, ಬಿಲ್ಲೇಶ್ವರ ಗ್ರಾಮ ಅರಣ್ಯ ಸಮಿತಿಗಳು ಹೋರಾಟಕ್ಕೆ ಸಾಥ್‌ ನೀಡಿವೆ. ಹೊಂಡಲಗದ್ದೆ, ನಾಗರಹಳ್ಳಿ, ಅಳಲೆಕೊಪ್ಪ, ಈರಿನಬೈಲು, ಮಳಿಕೊಪ್ಪ, ಕುಬವಳ್ಳಿ ಗ್ರಾಮಸ್ಥರು ಬೀದಿಗಿಳಿದು ಹೋರಾಟ ಆರಂಭಿಸಿದ್ದಾರೆ ಎಂದು ವಿವರ ನೀಡುತ್ತಾರೆ ವೃಕ್ಷಲಕ್ಷ ಆಂದೋಲನ ಅಧ್ಯಕ್ಷ ಅನಂತ ಹೆಗಡೆ ಅಶೀಸರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT