ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಭದ್ರಕೋಟೆ ಶಾಸಕರಿಗೂ ಇಲ್ಲ ಸ್ಥಾನ: ಅಸಮಾಧಾನ

ರಾಜ್ಯ ಮುಖಂಡರೇ ಹೆಸರು ಕೈಬಿಟ್ಟಿದ್ದಾರೆ: ಅಪ್ಪಚ್ಚು ರಂಜನ್
Last Updated 20 ಆಗಸ್ಟ್ 2019, 13:35 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗಿನ ಬಿಜೆಪಿ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್‌ ಹಾಗೂ ಶಾಸಕ ಕೆ.ಜಿ.ಬೋಪಯ್ಯ ಅವರಿಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ, ಅವರ ಬೆಂಬಲಿಗರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

‘ಗೂಡಿನಲ್ಲಿರುವ ಹಕ್ಕಿಯನ್ನು ಬಿಟ್ಟು ಹಾರುವ ಹಕ್ಕಿಗಳಿಗೆ ಸಚಿವ ಸ್ಥಾನ ನೀಡಲಾಗಿದೆ. ಸೋತವರನ್ನು ಕರೆತಂದು ಮಂತ್ರಿ ಮಾಡಲಾಗಿದೆ. ದೆಹಲಿಯಿಂದ ಬಂದಿದ್ದ ಪಟ್ಟಿಯಲ್ಲಿ ನನ್ನ ಹೆಸರಿತ್ತು. ಆದರೆ, ರಾಜ್ಯ ಮುಖಂಡರೇ ನನ್ನ ಹೆಸರು ಕೈಬಿಟ್ಟಿದ್ದಾರೆ. ಯಾರನ್ನೂ ಬೇಡುವುದಿಲ್ಲ. ಯಾರಿಗೆ ವಿಷಯ ಮುಟ್ಟಿಸಬೇಕೊ ಅವರಿಗೆ ತಿಳಿಸುತ್ತೇನೆ’ ಎಂದು ಅಪ್ಪಚ್ಚು ರಂಜನ್‌ ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದಾರೆ.

ಕೊಡಗು ಬಿಜೆಪಿಯ ಭದ್ರಕೋಟೆ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಜಿಲ್ಲೆಯ ಶಾಸಕರಿಗೆ ಮಂತ್ರಿ ಸ್ಥಾನ ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ಬೆಂಬಲಿಗರಿದ್ದರು. ಆದರೆ, ಮೊದಲ ಹಂತದ ಸಂಪುಟ ವಿಸ್ತರಣೆಯಲ್ಲಿ ಇಬ್ಬರಿಗೂ ಸ್ಥಾನ ಸಿಕ್ಕಿಲ್ಲ.

ಬೋಪಯ್ಯಗೆ ವಿಧಾನಸಭೆ ಸಭಾಧ್ಯಕ್ಷರ ಹುದ್ದೆಗೆ ನಾಮಪತ್ರ ಸಲ್ಲಿಸುವಂತೆ ಸೂಚಿಸಿದಾಗ, ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಅವರು, ನಾಮಪತ್ರ ಸಲ್ಲಿಸಲು ನಿರಾಕರಿಸಿದ್ದರು. ಹಿರಿಯ ಶಾಸಕ ಆಗಿರುವ ಕಾರಣಕ್ಕೆ ತಮಗೆ ಸಚಿವ ಸ್ಥಾನ ನೀಡುವಂತೆ ರಾಜ್ಯ ವರಿಷ್ಠರ ಗಮನಕ್ಕೆ ತಂದಿದ್ದರು.

ಕೊಡವ ಸಮುದಾಯಕ್ಕೆ ಸೇರಿರುವ ರಂಜನ್‌ ಐದು ಬಾರಿ ಗೆದ್ದಿದ್ದಾರೆ. ಅರೆಭಾಷೆ ಗೌಡ ಸಮುದಾಯದ ಬೋಪಯ್ಯ ನಾಲ್ಕು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ.

ಹೀಗಾಗಿ, ಯಾರಿಗೇ ಸಚಿವ ಸ್ಥಾನ ನೀಡಿದರೂ ಭದ್ರಕೋಟೆಯಲ್ಲಿ ಭಿನ್ನಮತ ಸ್ಫೋಟಿಸಿ ಮತ್ತೊಂದು ಸಮಸ್ಯೆಗೆ ಕಾರಣವಾಗುವ ಸಾಧ್ಯತೆ ಕಂಡು ಇಬ್ಬರ ಹೆಸರನ್ನೂ ಕೈಬಿಡಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ.

‘ಕೊಡಗು ಸತತ ಎರಡು ವರ್ಷಗಳಿಂದ ಅತಿವೃಷ್ಟಿಗೆ ತುತ್ತಾಗಿದೆ. ಜಿಲ್ಲೆಯ ಜನರು ಸಂಕಷ್ಟದಲ್ಲಿದ್ದಾರೆ. ಜಿಲ್ಲೆಯ ಶಾಸಕರೇ ಮಂತ್ರಿಯಾಗಿದ್ದರೆ ಪುನರ್ವಸತಿ ಕೆಲಸಕ್ಕೆ ಅನುಕೂಲವಾಗುತಿತ್ತು. ಕಾದು ನೋಡುತ್ತೇವೆ’ ಎಂದು ಶಾಸಕರ ಬೆಂಬಲಿಗರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT