ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಆಹಾರ ಪದಾರ್ಥ ಪೂರೈಕೆಯಾದರೆ ಕಠಿಣ ಕ್ರಮ: ಸಚಿವ ಗೋಪಾಲಯ್ಯ

ಅಧಿಕಾರಿಗಳಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ. ಗೋಪಾಲಯ್ಯ ಎಚ್ಚರಿಕೆ
Last Updated 11 ಜೂನ್ 2020, 16:12 IST
ಅಕ್ಷರ ಗಾತ್ರ

ಕಲಬುರ್ಗಿ:ಜಿಲ್ಲೆಯಲ್ಲಿನ ನ್ಯಾಯಬೆಲೆ ಅಂಗಡಿಗಳಿಗೆ ಕಳಪೆ ಆಹಾರ ಪದಾರ್ಥಗಳ ಪೂರೈಕೆ ಮಾಡುತ್ತಿರುವುದು ಕಂಡು ಬಂದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ. ಗೋಪಾಲಯ್ಯ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಇಲಾಖೆಯ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಎಲ್ಲಿಯಾದರೂ ಕಳಪೆ ಆಹಾರ ಪದಾರ್ಥಗಳ ವಿತರಿಸುತ್ತಿರುವುದು ಕಂಡು ಬಂದರೆ ಮೇಲಧಿಕಾರಿಗಳು ಹಾಗೂ ಶಾಸಕರ ಗಮನಕ್ಕೆ ಗ್ರಾಹಕರು ತರಬೇಕು ಎಂದು ಹೇಳಿದರು.

ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಹಾಗೂ ಆತ್ಮನಿರ್ಭರ್ ಭಾರತ್ ಯೋಜನೆಯಡಿ ಪಡಿತರ ವಿತರಣೆಯನ್ನು ಸಮರ್ಪಕವಾಗಿ ಮಾಡಬೇಕು ಎಂದು ಅವರು ಸೂಚಿಸಿದರು.

ಸಚಿವರಿಗೆ ಜಿಲ್ಲೆಯ ಪಡಿತರದ ಕುರಿತು ವರದಿ ನೀಡಿದ ಆಹಾರ ನಿರೀಕ್ಷಕ ಕೃಷ್ಣ, ಆತ್ಮ ನಿರ್ಭರ ಭಾರತ್ ಯೋಜನೆಯಡಿ ಮೇ ಮತ್ತು ಜೂನ್ ತಿಂಗಳಿಗೆ ಒಟ್ಟು 32,512 ಫಲಾನುಭವಿಗಳಿದ್ದು, ಹಂಚಿಕೆಯಾದ 3,251 ಮೆಟ್ರಿಕ್ ಟನ್ ಅಕ್ಕಿ ಹಾಗೂ 206 ಮೆಟ್ರಿಕ್ ಟನ್ ಕಡಲೆಕಾಳು ವಿತರಣೆ ಪ್ರಗತಿಯಲ್ಲಿದೆ ಎಂದು ಹೇಳಿದರು.

ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಜೂನ್ ತಿಂಗಳಿಗೆ 9,385 ಮೆಟ್ರಿಕ್ ಟನ್ ಅಕ್ಕಿ, 1,096 ಮೆಟ್ರಿಕ್ ಟನ್ ತೊಗರಿಬೇಳೆ ಹಂಚಿಕೆಯಾಗಿದ್ದು, ಅಕ್ಕಿ ಪೂರ್ತಿ ಎತ್ತವಳಿಯಾಗಿದ್ದರೆ, ತೊಗರಿ ಬೇಳೆ 701 ಮೆಟ್ರಿಕ್ ಟನ್ ಮಾತ್ರ ಎತ್ತುವಳಿಯಾಗಿದೆ ಎಂದು ವಿವರಿಸಿದರು.

ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿ ರಫೀಕ್ ಲಾಡಜಿ ಮಾತನಾಡಿ, ಕೋವಿಡ್–19 ಸಂದರ್ಭದಲ್ಲಿ ತಪಾಸಣೆ ಕೈಗೊಂಡಾಗ ಹೆಚ್ಚಿನ ಬೆಲೆಗೆ ಮಾಸ್ಕ್, ಸ್ಯಾನಿಟೈಸರ್, ದಿನಸಿ ಪದಾರ್ಥಗಳು ಮುಂತಾದವುಗಳನ್ನು ಮಾರುತ್ತಿದ್ದುದು ಬೆಳಕಿಗೆ ಬಂದಿದ್ದು, ಜಿಲ್ಲೆಯಲ್ಲಿ 510 ಮೆಡಿಕಲ್ ಶಾಪ್, ಜನರಲ್ ಸ್ಟೋರ್ಹಾ ಗೂ ಸಗಟು ಅಂಗಡಿಗಳನ್ನು ತಪಾಸಣೆ ಮಾಡಿ, 61 ಮೊಕದ್ದಮೆ ಹೂಡಿ, ₹ 2,48,500 ಶುಲ್ಕ ವಿಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ಶಾಸಕ ಸುಭಾಷ್ ಗುತ್ತೇದಾರ ಮಾತನಾಡಿ, ಈ ಹಿಂದೆ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ಅಕ್ಕಿ ಲಾರಿಯನ್ನು ಖುದ್ದಾಗಿ ನಾನೇ ಹಿಡಿದುಕೊಟ್ಟಿದ್ದೆ. ಆದರೆ ಆಗಿನ ಅಧಿಕಾರಿ ಜಿಲ್ಲೆಯಲ್ಲಿನ ಪಡಿತರ ಅಂಗಡಿಗಳಿಗೆ ಪೂರೈಸಲಾಗುತ್ತಿದೆ ಎಂದು ಸುಳ್ಳು ಹೇಳಿ ಲಾರಿಯನ್ನು ಬಿಡುಗಡೆ ಮಾಡಿದರು. ಈ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಗೋಪಾಲಯ್ಯ ಅವರು, ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳುವ ಭರವಸೆ ನೀಡಿದರು.

ರಾಜ್ಯದಲ್ಲಿ ಕೊರೊನಾ ಆರಂಭಕ್ಕೂ ಮುನ್ನ 63 ಸಾವಿರ ಅಕ್ರಮ ಪಡಿತರ ಚೀಟಿ ರದ್ದುಗೊಳಿಸಿದಲ್ಲದೇ ₹ 93 ಲಕ್ಷ ದಂಡ ವಿಧಿಸಲಾಗಿತ್ತು. ಕೊರೊನಾ ಸಾಂಕ್ರಾಮಿಕ ಸೋಂಕಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸೂಚನೆಯಂತೆ 3 ತಿಂಗಳಲ್ಲಿ ಯಾವುದೇ ಕಾರ್ಡ್ ರದ್ದತಿಗೆ ಕ್ರಮ ಕೈಗೊಂಡಿಲ್ಲ. ಇನ್ನು ಮುಂದೆ ಕಾರ್ಯಾಚರಣೆ ಆರಂಭಿಸಲಾಗುವುದು ಎಂದರು.

ಶಾಸಕರಾದ ಸುಭಾಷ ಗುತ್ತೇದಾರ, ಬಸವರಾಜ ಮತ್ತಿಮೂಡ, ರಾಜಕುಮಾರ ಪಾಟೀಲ ತೇಲ್ಕೂರ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ,ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಾಲಾಜಿ, ಪ್ರಾದೇಶಿಕ ಆಯುಕ್ತ ಡಾ.ಎನ್.ವಿ.ಪ್ರಸಾದ, ಜಿಲ್ಲಾಧಿಕಾರಿ ಶರತ್ ಬಿ., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜಾ ಪಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಡಿ.ಎಂ.ಪಾಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT