ಮಂಡ್ಯ ಲೋಕಸಭಾ ಕ್ಷೇತ್ರ: ವರಿಷ್ಠರ ತೀರ್ಮಾನ ಅಂತಿಮ -ಎಚ್‌.ಡಿ.ರೇವಣ್ಣ

7

ಮಂಡ್ಯ ಲೋಕಸಭಾ ಕ್ಷೇತ್ರ: ವರಿಷ್ಠರ ತೀರ್ಮಾನ ಅಂತಿಮ -ಎಚ್‌.ಡಿ.ರೇವಣ್ಣ

Published:
Updated:
Prajavani

ಕಲಬುರ್ಗಿ: ‘ಮಂಡ್ಯ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರೇ ಇದ್ದಾರೆ. ಆ ಕ್ಷೇತ್ರದ ಮೈತ್ರಿಗೆ ಸಂಬಂಧಿಸಿದಂತೆ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ’ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಸೂಚಿಸಿದರೆ ನನ್ನ ಪುತ್ರ ಪ್ರಜ್ವಲ್ ರೇವಣ್ಣ ಸ್ಪರ್ಧಿಸುತ್ತಾನೆ. ನನ್ನ ಮಗನೇನು ಹಿಂಬಾಗಿನಿಲಿಂದ ಹೋಗಿಲ್ಲವಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಬಿಜೆಪಿಯವರಿಗೆ ರಾಜ್ಯದ ಹಿತಕ್ಕಿಂತ ಅಧಿಕಾರ ಮುಖ್ಯವಾಗಿದೆ. ಆರು ತಿಂಗಳಿನಿಂದ ಸರ್ಕಾರ ಬೀಳಿಸುತ್ತೇವೆ ಎಂದು ಹೇಳುತ್ತಲೇ ಇದ್ದಾರೆ. ಬರ ಪರಿಹಾರ ವಿತರಣೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಕೇಂದ್ರ ಸರ್ಕಾರ ಮಹಾರಾಷ್ಟ್ರಕ್ಕೆ ₹4,500 ಕೋಟಿ ಪರಿಹಾರ ಕೊಟ್ಟರೆ, ರಾಜ್ಯಕ್ಕೆ ₹931 ಕೋಟಿ ಮಾತ್ರ ಕೊಟ್ಟಿದೆ. ಈ ವಿಷಯದಲ್ಲಿ ಬಿಜೆಪಿಯವರಿಗೆ ನಾಚಿಕೆಯಾಗಬೇಕು’ ಎಂದು ಖಾರವಾಗಿ ಹೇಳಿದರು.

‘ಕಾಂಗ್ರೆಸ್ ಮುಖಂಡ ಎ.ಮಂಜು ಹೇಳಿಕೆಗಳಿಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ. ಕೊಟ್ಟಿರುವ ಜವಾಬ್ದಾರಿ ನಿರ್ವಹಿಸುವುದು ನನ್ನ ಕರ್ತವ್ಯ. ಲೋಕಸಭೆಯಲ್ಲಿ ಕಾಂಗ್ರೆಸ್– ಜೆಡಿಎಸ್ ಮೈತ್ರಿ ಬಗ್ಗೆ ದೇವೇಗೌಡ ಹಾಗೂ ಇತರ ಹಿರಿಯ ನಾಯಕರು ನಿರ್ಧರಿಸುತ್ತಾರೆ. ಒಂದು ಸಾವಿರ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಆರಂಭಿಸಬೇಕು ಎಂಬುದು ನನ್ನ ಒತ್ತಾಯವಾಗಿದೆ. ಬಡವರ ಮಕ್ಕಳು ಕೂಡ ಇಂಗ್ಲಿಷ್ ಮಾಧ್ಯಮದಲ್ಲಿ ಓದಬೇಕು ಎಂಬುದು ನನ್ನ ನಿಲುವಾಗಿದೆ’ ಎಂದು ಪ್ರತಿಪಾದಿಸಿದರು.

‘ದೇವೇಗೌಡ ಬಂದರೂ ತಮ್ಮನ್ನು ಸೋಲಿಸಲು ಸಾಧ್ಯವಾಗಲಿಲ್ಲ’ ಎಂಬ ಜಮೀರ್ ಅಹಮ್ಮದ್ ಹೇಳಿಕೆಗೆ ಪ್ರತಿಕ್ರಿಯಿಸಿದ ರೇವಣ್ಣ, ‘ಆ ಬಗ್ಗೆ ನಾನು ಮಾತನಾಡುವುದಿಲ್ಲ. ಆ ವಿಷಯ ದೇವೇಗೌಡ ಮತ್ತು ಜಮೀರ್ ಅಹಮ್ಮದ್ ಅವರಿಗೇ ಗೊತ್ತು’ ಎಂದರು.

‘ಸರ್ಕಾರ ಐದು ವರ್ಷ ಖಂಡಿತ ಇರುತ್ತದೆ. ಬಿ.ಎಸ್.ಯಡಿಯೂರಪ್ಪ ಅವರಿಗೆ ಸರ್ಕಾರ ಬಳೀಸಲು ಆಗಲಿಲ್ಲ. ಹೀಗಾಗಿ ಸುಮ್ಮನಾಗಿದ್ದಾರೆ. ಇದೀಗ ಆರ್.ಅಶೋಕ ಅವರನ್ನು ಮುಂದೆ ಬಿಟ್ಟಿದ್ದಾರೆ. ಫೆ. 8ರಂದು ಬಜೆಟ್ ಮಂಡನೆ ಮಾಡೇ ಮಾಡುತ್ತೇವೆ. ಈ ಬಾರಿಯ ಬಜೆಟ್ ಕೂಡ ರೈತ ಪರವಾಗಿರುತ್ತದೆ’ ಎಂದು ತಿಳಿಸಿದರು.

ಇದಾದ ಬಳಿಕ ಇಲ್ಲಿಯ ಶರಣಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ರೇವಣ್ಣ ಅವರು ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪ ಅವರಿಂದ ಆಶೀರ್ವಾದ ಪಡೆದರು. ಈ ವೇಳೆ ರೇವಣ್ಣ ಅವರೊಂದಿಗೆ ಇದ್ದ ಸ್ಥಳೀಯ ಜೆಡಿಎಸ್ ಮುಖಂಡರು, ‘ರೇವಣ್ಣ ಮುಖ್ಯಮಂತ್ರಿ ಆಗಲಿ ಎಂದು ಆಶೀರ್ವಾದ ಮಾಡಿ’ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಪ್ಪ, ‘ಮುಂದೊಂದು ದಿನ ಮುಖ್ಯಮಂತ್ರಿ ಆಗುತ್ತಾರೆ’ ಎಂದು ಹಾರೈಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !