ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವೇದನಾ ಸಂವಾದ | ಸಾರ್... ಚೀಲದ ಭಾರ ಕಡಿಮೆ ಮಾಡಿ, ಆಟದ ಅವಧಿ ಕಿತ್ತುಕೊಳ್ಳಬೇಡಿ

‘ಶಿಕ್ಷಣ ಸಚಿವೆ ಆಗಬೇಕಾದರೆ ಏನು ಮಾಡಬೇಕು’
Last Updated 17 ಸೆಪ್ಟೆಂಬರ್ 2019, 16:30 IST
ಅಕ್ಷರ ಗಾತ್ರ

ಬೆಂಗಳೂರು: ಸಾರ್‌...ಶಾಲಾ ಚೀಲಗಳ ಹೊರೆ ಕಡಿಮೆ ಮಾಡಿ, ಪಠ್ಯ ಪುಸ್ತಕ ಬೇಗ ಕೊಡಿ, ಆಟದ ಅವಧಿ ಕಿತ್ತುಕೊಳ್ಳಬೇಡಿ, ಪರೀಕ್ಷೆಯ ಸ್ವರೂಪ ಬದಲಾಯಿಸಬೇಡಿ, ಬಸ್‌ ಪಾಸ್‌ ವಿಳಂಬ ಆಗದಂತೆ ನೋಡಿ ...

ನಗರದ ವಿವಿಧ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಮಂಗಳವಾರ ಇಲ್ಲಿ ಏರ್ಪಡಿಸಿದ್ದ ‘ಸಂವೇದನಾ’ ಸಂವಾದ ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪೌಢಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರ ಮುಂದಿಟ್ಟ ಮನವಿಗಳಿವು. ವಿದ್ಯಾರ್ಥಿಗಳು ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಮುಕ್ತ ಮನಸ್ಸಿನಿಂದ ಹಂಚಿಕೊಂಡರು. ಶೈಕ್ಷಣಿಕ ಅವಧಿಯ ಮಧ್ಯದಲ್ಲೇ ಶಿಕ್ಷಕರನ್ನು ವರ್ಗ ಮಾಡದಂತೆ ಒತ್ತಾಯಿಸಿದರು.

ಸುಮಾರು ಎರಡು ಗಂಟೆ ನಡೆದ ಸಂವಾದ ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಆಗಬೇಕಾದ ಬದಲಾವಣೆಗಳ ಕುರಿತು ಬೆಳಕು ಚೆಲ್ಲಿತು.

‘ಪಠ್ಯ ವಿಷಯಗಳ ಶಿಕ್ಷಕರು ದೈಹಿಕ ಚಟುವಟಿಕೆಗೆ ಮೀಸಲಿರುವ ಅವಧಿಯಲ್ಲೂ ಪಾಠ ಮಾಡುತ್ತಾರೆ. ಇದರಿಂದ ಆಟೋಟ ಚಟುವಟಿಕೆಗೆ ಅವಕಾಶ ಕಡಿಮೆ ಆಗುತ್ತಿದೆ’ ಐಶ್ವರ್ಯಾ ಬೇಸರ ತೋಡಿಕೊಂಡರು.

ಪಠ್ಯ ಪುಸ್ತಕವನ್ನು ತಡವಾಗಿ ನೀಡುವುದರಿಂದ ಉಂಟಾಗುವ ಸಮಸ್ಯೆಗಳನ್ನು ಶರಣ್ಯಾ ವಿವರಿಸಿದರು. ಸಮವಸ್ತ್ರವನ್ನೂ ಬೇಗ ಕೊಡುವಂತೆ ಶ್ವೇತಾ ಕೋರಿದರು.

ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡುವವರ ಬೇಜವಾಬ್ದಾರಿಯಿಂದ ಮಕ್ಕಳ ಭವಿಷ್ಯವೇ ಸಂಕಷ್ಟಕ್ಕೆ ಸಿಲುಕುತ್ತದೆ. ಅನೇಕ ವಿದ್ಯಾರ್ಥಿಗಳಿಗೆ ಮರುಮೌಲ್ಯಮಾಪನ ಶುಲ್ಕ ಭರಿಸುವಷ್ಟು ಆರ್ಥಿಕ ಸಾಮರ್ಥ್ಯ ಇರುವುದಿಲ್ಲ ಎಂದು ಸಂದೀಪ್‌ ಗಮನ ಸೆಳೆದರು.

ಸವಾಲೆದುರಿಸಲು ಸಜ್ಜಾಗಿ: ಶಿಕ್ಷಣ ತಜ್ಞ ಗುರುರಾಜ ಕರಜಗಿ, ‘ವಿದ್ಯಾರ್ಥಿಗಳು ದೊಡ್ಡ ಗುರಿಯನ್ನು ಹೊಂದಬೇಕು. ಆತ್ಮವಿಶ್ವಾಸ ಬೆಳೆಸಿಕೊಳ್ಳುವ ಮೂಲಕ, ಬದುಕಿನಲ್ಲಿ ಎದುರಾಗುವ ಎಲ್ಲ ರೀತಿಯ ಸವಾಲುಗಳನ್ನು ನಿಭಾಯಿಸಲು ಸನ್ನದ್ಧರಾಗಬೇಕು’ ಎಂದು ಕಿವಿಮಾತು ಹೇಳಿದರು.

‘ಮಕ್ಕಳಲ್ಲಿ ನೋಡಿ ಕಲಿಯುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚುತ್ತಿದೆ. ಹಾಗಾಗಿ ಆದಷ್ಟು ದೃಶ್ಯದ ಮೂಲಕ ಕಲಿಸುವ ವ್ಯವಸ್ಥೆ ಜಾರಿಗೊಳಿಸಬೇಕು’ ಎಂದು ಸಲಹೆ ನೀಡಿದರು.

ಇನ್ನಷ್ಟು ಸಂವೇದನಾ: ‘ಶಿಕ್ಷಣ ವ್ಯವಸ್ಥೆ ಬಗ್ಗೆ ವಿದ್ಯಾರ್ಥಿಗಳ ಬಾಯಲ್ಲೇ ತಿಳಿದುಕೊಳ್ಳಬೇಕಾದ ವಿಚಾರಗಳು ಸಾಕಷ್ಟಿವೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಇಂತಹ ಸಂವೇದನಾ ಕಾರ್ಯಕ್ರಮಗಳನ್ನು ಏರ್ಪಡಿಸುತ್ತೇನೆ. ವಿದ್ಯಾರ್ಥಿಗಳು ನೀಡಿದ ಸಲಹೆ ಬಗ್ಗೆ ಅರ್ಧ ದಿನ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ’ ಎಂದು ಸಚಿವರು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಸುರೇಶ್‌ ಕುಮಾರ್‌ ಮಾತನಾಡಿದರು. ಸಮಗ್ರ ಶಿಕ್ಷಣದ ಯೋಜನಾ ನಿರ್ದೇಶಕ ಎಂ.ಟಿ.ರೇಜು, ಗುರುರಾಜ ಕರಜಗಿ ಇದ್ದಾರೆ –ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಸುರೇಶ್‌ ಕುಮಾರ್‌ ಮಾತನಾಡಿದರು. ಸಮಗ್ರ ಶಿಕ್ಷಣದ ಯೋಜನಾ ನಿರ್ದೇಶಕ ಎಂ.ಟಿ.ರೇಜು, ಗುರುರಾಜ ಕರಜಗಿ ಇದ್ದಾರೆ –ಪ್ರಜಾವಾಣಿ ಚಿತ್ರ

**

ಶೈಕ್ಷಣಿಕ ವರ್ಷದ ಆರಂಭದ ದಿನವೇ ಪಠ್ಯಪುಸ್ತಕ ವಿದ್ಯಾರ್ಥಿಗಳ ಕೈಸೇರುವಂತೆ ಮಾಡುತ್ತೇವೆ. ಕೆಲವು ಪಠ್ಯಗಳನ್ನು ಕಡಿಮೆ ಮಾಡುವ ಮೂಲಕ ಚೀಲದ ಹೊರೆ ಕಡಿಮೆ ಮಾಡುವ ಚಿಂತನೆಯೂ ಇದೆ
-ಎಸ್‌.ಸುರೇಶ್‌ ಕುಮಾರ್‌, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

‘ಶಿಕ್ಷಣ ಸಚಿವೆ ಆಗಬೇಕಾದರೆ ಏನು ಮಾಡಬೇಕು’
‘ನನಗೂ ನಿಮ್ಮ ಹಾಗೆ ಶಿಕ್ಷಣ ಸಚಿವೆ ಆಗಬೇಕೆಂಬ ಮಹದಾಸೆ ಇದೆ. ಅದಕ್ಕಾಗಿ ಏನು ಮಾಡಬೇಕು’

ಕಾರ್ಯಕ್ರಮ ಮುಗಿಸಿ ಹೊರಡಲು ಅಣಿಯಾಗಿದ್ದ ಸುರೇಶ್ ಕುಮಾರ್‌ ಅವರನ್ನು ಉದ್ದೇಶಿಸಿಮ್ಯಾಕ್ಸ್‌ ಮುಲ್ಲರ್ಸ್‌ ಪ್ರೌಢಶಾಲೆಯ ಪೂರ್ವಿಕಾ ಗೌಡ ಕೇಳಿದ ಪ್ರಶ್ನೆ ಇದು.

ತಕ್ಷಣಕ್ಕೆ ಉತ್ತರಿಸಲಾಗದೆ ಸಚಿವರು ತುಸು ಗಲಿಬಿಲಿಗೊಳಗಾದರು. ನಂತರ, ‘ಶ್ರಮ ಪಡಬೇಕು’ ಎಂದು ಉತ್ತರಿಸಿದರು.

‘ಮ್ಯಾಕ್ಸ್‌ ಮುಲ್ಲರ್ ಯಾರು ಗೊತ್ತೇ?’ ಎಂದು ವಿದ್ಯಾರ್ಥಿಯನ್ನು ಸಚಿವರು ಪ್ರಶ್ನಿಸಿದರು. ಸಂಸ್ಕೃತ ಕಲಿಯಲು ಮುಲ್ಲರ್‌ ಅವರು ಭಾರತಕ್ಕೆ ಬಂದಿದ್ದ ಹಿನ್ನೆಲೆಯನ್ನು ವಿದ್ಯಾರ್ಥಿನಿ ವಿವರಿಸಿದಾಗ ಸಚಿವರು ಆಕೆಯ ಬೆನ್ನು ತಟ್ಟಿದರು.

ಬಸ್‌ ಪಾಸ್‌ ವಿಳಂಬ: ಕಣ್ಣೀರಿಟ್ಟ ಬಾಲಕಿ
‘ಈ ಬಾರಿ ಬಸ್‌ ಪಾಸ್‌ ನೀಡುವಾಗ 2 ತಿಂಗಳು ವಿಳಂಬವಾಯಿತು. ಹಾಗಾಗಿ ಬಸ್‌ ಚಾರ್ಜ್‌ಗೆ ತಿಂಗಳಿಗೆ ₹ 600 ರ ಬದಲು ₹ 2 ಸಾವಿರ ಹೆಚ್ಚುವರಿ ವೆಚ್ಚವಾಯಿತು’ ಎಂದು ವಿದ್ಯಾರ್ಥಿನಿ ಕೀತಿ ಸಮಸ್ಯೆ ಹೇಳಿಕೊಂಡರು.

‘ಹೋದ ವರ್ಷದ ಬಸ್‌ ಪಾಸ್‌ ಬಳಸಬಹುದು ಎಂದು ಬಿಎಂಟಿಸಿ ಹೇಳಿತು. ಆದರೆ, ಅದನ್ನು ತೊರಿಸಿದರೂ ನಿರ್ವಾಹಕರು ನಮ್ಮಿಂದ ಹಣ ಪಡೆದುಕೊಳ್ಳುತ್ತಿದ್ದರು. ಒಮ್ಮೆ ನನ್ನನ್ನು ಅರ್ಧ ದಾರಿಯಲ್ಲೇ ಇಳಿಸಿದರು. 2 ಕಿ.ಮೀ ನಡೆದು ಶಾಲೆಗೆ ಹೋಗಬೇಕಾಯಿತು’ ಎನ್ನುವಾಗ ಆಕೆ ದುಃಖ ತಡೆಯದೆ ಅತ್ತೇ ಬಿಟ್ಟರು.

ಪರೀಕ್ಷೆ ಎಂದರೆ ಏಕೆ ಭಯ?
ಅಂಕಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡುವ ಶಿಕ್ಷಣ ವ್ಯವಸ್ಥೆಯಲ್ಲಿ ಸೃಷ್ಟಿಯಾಗಿರುವ ಪರೀಕ್ಷಾ ಗುಮ್ಮದ ಬಗ್ಗೆ ಅನೇಕ ವಿದ್ಯಾರ್ಥಿಗಳು ಆತಂಕ ಹೇಳಿಕೊಂಡರು.

‘ಎಲ್ಲ ಓದಿರುತ್ತೇವೆ. ಪ್ರಶ್ನೆ ಪತ್ರಿಕೆ ನೋಡಿದಾಗ ಎಲ್ಲವೂ ಮರೆತೇ ಹೋಗುತ್ತದೆ’ ಎಂದು ಸೌಮ್ಯ ಸಮಸ್ಯೆ ಹೇಳಿಕೊಂಡರು. ‘ಪಠ್ಯ ತುಂಭಾ ಜಾಸ್ತಿ ಇರುತ್ತದೆ. ಅದನ್ನು ಕಡಿಮೆ ಮಾಡಿ’ ಎಂದು ಋತು ಕೋರಿದರು.

ಏಳನೇ ತರಗತಿಯಲ್ಲೂ ಪಬ್ಲಿಕ್‌ ಪರೀಕ್ಷೆ ಬೇಕು ಎಂದು ಬಹುತೇಕ ಮಕ್ಕಳು ಒತ್ತಾಯಿಸಿದರು. ‘ಯಾವುದೇ ಪರೀಕ್ಷೆ ಬೇಡ. ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನೂ ಕೈಬಿಡಿ’ ಎಂದು ಇಬ್ಬರು ವಿದ್ಯಾರ್ಥಿಗಳು ಹೇಳಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ತೆಗೆಯಲು ಎಷ್ಟು ಮಂದಿ ಬಯಸುತ್ತೀರಿ ಎಂಬ ಪ್ರಶ್ನೆಗೆ ಹೆಚ್ಚಿನ ಮಕ್ಕಳು ಕೈ ಎತ್ತಿದರು.

‘ಮೀಸಲಾತಿ–ತಪ್ಪುಕಲ್ಪನೆ ಬೇಡ’
ಸಂವಾದದಲ್ಲಿ ಮೀಸಲಾತಿ ಬಗ್ಗೆ ಅನೇಕ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಮೀಸಲಾತಿಯ ಮಹತ್ವವನ್ನು ಮನಮುಟ್ಟುವಂತೆ ವಿವರಿಸಿದ ಗುರುರಾಜ ಕರಜಗಿ, ‘ಸಮಾಜದಲ್ಲಿ ಕೆಲವು ವರ್ಗದವರು ಶತಮಾನಗಳಿಂದ ಮೂದಲಿಕೆ ಅನುಭವಿಸುತ್ತಿದ್ದಾರೆ. ದೇಹಕ್ಕಾಗುವ ನೋವಿಗಿಂದ ಮನಸ್ಸಿಗೆ ಆಗುವ ಘಾಸಿ ದೊಡ್ಡದು. ನಾವು ಬಸ್‌ಗಳಲ್ಲಿ ಕಣ್ಣಿಲ್ಲದವರಿಗೆ, ಕಾಲಿಲ್ಲದವರಿಗೆ ಹೇಗೆ ಸೀಟು ಬಿಟ್ಟುಕೊಟ್ಟು ಕಾಳಜಿ ವಹಿಸುತ್ತೇವೆಯೋ, ಅದೇ ರೀತಿ ಸಮಾಜದಲ್ಲಿ ನೊವುಂಡವರ ಬಗ್ಗೆ ಕಾಳಜಿ ವಹಿಸಲು ಮೀಸಲಾತಿಯನ್ನು ಜಾರಿಗೊಳಿಸಲಾಗಿದೆ. ಈ ಬಗ್ಗೆ ತಪ್ಪು ಕಲ್ಪನೆ ಬೇಡ’ ಎಂದರು.

ಪರಿಶಿಷ್ಟ ಜಾತಿಯ ಸಂಸದರೊಬ್ಬರನ್ನು ಗೊಲ್ಲರ ಹಟ್ಟಿ ಒಳಗೆ ಬಿಟ್ಟುಕೊಳ್ಳದ ಪ್ರಕರಣವನ್ನು ಉದಾಹರಣೆ ನೀಡುವ ಮೂಲಕ ಸಚಿವ ಸುರೇಶ್‌ ಕುಮಾರ್‌ ಮೀಸಲಾತಿಯ ಅಗತ್ಯವನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು.

‘ಕರ್ನಾಟಕದಲ್ಲಿ ಕನ್ನಡಕ್ಕೆ ಆದ್ಯತೆ’
‘ಹಿಂದಿ ಹೇರಿಕೆ ಬಗ್ಗೆ ನಿಮ್ಮ ಅಭಿಪ್ರಾಯ ಏನು’ ಎಂದು ವಿದ್ಯಾರ್ಥಿನಿ ಅಕ್ಷೋಹಿಣಿ ಅವರು ಸಚಿವರನ್ನು ನೇರವಾಗಿ ಪ್ರಶ್ನೆ ಕೇಳಿದರು.

‘ಕರ್ನಾಟಕದಲ್ಲಿ ಕನ್ನಡಕ್ಕೆ ಆದ್ಯತೆ ಸಿಗಬೇಕು. ಯಾವುದೇ ಭಾಷೆಯನ್ನು ಹೇರಿಕೆ ಮಾಡಿ ಕಲಿಸಲು ಸಾಧ್ಯವಿಲ್ಲ. ಆದರೆ, ಹೆಚ್ಚು ಭಾಷೆ ಕಲಿತಷ್ಟೂ ಒಳ್ಳೆಯದು’ ಎಂದು ಸಚಿವರು ತಿಳಿಸಿದರು.

‘ಬೆಂಗಳೂರಿನಲ್ಲೇ ಹುಟ್ಟಿಬೆಳೆದ ಅನೇಕರು ಇನ್ನೂ ಕನ್ನಡವನ್ನೇ ಕಲಿತಿಲ್ಲ. ಅದರಿಂದಲೇ ಹೆಚ್ಚು ತೊಂದರೆ’ ಎಂದರು.

ವಿದ್ಯಾರ್ಥಿಗಳು ಹೇಳಿದ್ದು...
ಅನನ್ಯಾ: ಇತಿಹಾಸ ಪಠ್ಯದಲ್ಲಿ ಹಳೆಯ ಯುದ್ಧಗಳ ಬಗ್ಗೆ ಓದಿ ಬೇಜಾರಾಗಿದೆ. ಜಿಎಸ್‌ಟಿ, ಸುಪ್ರಿಂ ಕೋರ್ಟ್‌ನ ತೀರ್ಪು ಮುಂತಾದ ಈಗಿನ ಬೆಳವಣಿಗೆಗಳ ಬಗ್ಗೆಯೂ ಮಾಹಿತಿ ನೀಡಿ

ಸಾನ್ವಿ:ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಅಡಿ ಖಾಸಗಿ ಶಾಲೆಗಳಲ್ಲಿ ಬಡ ವಿದ್ಯಾರ್ಥಿಗಳಿಗೆ ಕಲಿಯಲು ಅವಕಾಶ ನೀಡುವ ಕಾರ್ಯಕ್ರಮವನ್ನು ಮೊಟಕುಗೊಳಿಸಬೇಡಿ.

ಕಾವ್ಯಾ: ಸರ್ಕಾರಿ ಶಾಲೆಗೆ ನೀಡುವಂತೆ ಅನುದಾನಿತ ಶಾಲೆಗಳಿಗೂ ಸವಲತ್ತುಗಳನ್ನು ನೀಡಿ

ಅಭಿಷೇಕ್‌: ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭಿಸಿದ್ದನ್ನು ನಿಲ್ಲಿಸಬೇಡಿ.

ಯುಕ್ತಾ: ವಿಜ್ಞಾನ ವಿಷಯಗಳನ್ನು ಬರವಣಿಗೆ, ಓದಿನ ಮೂಲಕ ಕಲಿಸುವ ಬದಲು ಪ್ರಾಯೋಗಿಕವಾಗಿ ಕಲಿಸಿ

ರಾಜೇಶ್ವರಿ: ಎಲ್ಲ ವಿದ್ಯಾರ್ಥಿಗಳೂ ಡಾಕ್ಟರ್‌ ಅಥವಾ ಎಂಜಿನಿಯರ್‌ ಆಗಲು ಬಯಸುವುದಿಲ್ಲ. ಕೆಲವರಿಗೆ ಸೈನ್ಯಕ್ಕೆ ಸೇರುವ ಆಸೆಯೂ ಇರುತ್ತದೆ. ಶಾಲೆಗಳಲ್ಲೂ ಎನ್‌ಸಿಸಿ ಕಡ್ಡಾಯ ಮಾಡಿ

ಪವನ್ ಕಲ್ಯಾಣ್‌: ವಿದ್ಯಾರ್ಥಿವೇತನಕ್ಕೆ ಜಾತಿ ಪ್ರಮಾಣಪತ್ರ ಮತ್ತಿತರ ದಾಖಲೆ ಪಡೆಯಲು ಮೂರು– ನಾಲ್ಕು ದಿನ ಅಲೆಯಬೇಕು. ಇದರಿಂದ ಸಮಸ್ಯೆ ಆಗುತ್ತಿದೆ.

ರಷೀದಾ: ವಿದ್ಯಾರ್ಥಿ ವೇತನಕ್ಕೆ ಅನೇಕ ಬಾರಿ ಅರ್ಜಿ ಹಾಕಿದರೂ ಸಿಕ್ಕಿಲ್ಲ. ವಿದ್ಯಾರ್ಥ ವೇತನದಲ್ಲೂ ಜಾತಿ, ಧರ್ಮ ತರಬೇಡಿ. ಅಂಕವನ್ನೇ ಮಾನದಂಡ ಮಾಡಿ

ಅರುಣ್‌ ಕುಮಾರ್‌: ಇತಿಹಾಸದ ಪಠ್ಯ ತೀರಾ ಜಾಸ್ತಿಯಾಗಿದೆ. ಅದನ್ನು ಕಡಿಮೆ ಮಾಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT