ಸಂಪುಟ ತೊರೆದ ಸಚಿವ ಎನ್.‌ಮಹೇಶ್

7

ಸಂಪುಟ ತೊರೆದ ಸಚಿವ ಎನ್.‌ಮಹೇಶ್

Published:
Updated:

ಬೆಂಗಳೂರು: ರಾಜ್ಯದಲ್ಲಿ ಜೆಡಿಎಸ್‌–ಕಾಂಗ್ರೆಸ್‌ ಸರ್ಕಾರ ರಚನೆಯಾದ ನಾಲ್ಕೂವರೆ ತಿಂಗಳಲ್ಲೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್‌.ಮಹೇಶ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಅವರು ವಿಕಾಸಸೌಧದಲ್ಲಿ ಗುರುವಾರ ಸಂಜೆ ತುರ್ತು ಪತ್ರಿಕಾಗೋಷ್ಠಿ ನಡೆಸಿ ಈ ವಿಷಯ ಪ್ರಕಟಿಸಿದರು. ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಸಲ್ಲಿಸಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಕುಮಾರಸ್ವಾಮಿ ತಿಳಿಸಿದ್ದಾರೆ.

‘ಸರ್ಕಾರ ರಚನೆಯಾದ ಬಳಿಕ ಕುಮಾರಸ್ವಾಮಿ ಅವರು ನನಗೆ ದೊಡ್ಡ ಖಾತೆಯನ್ನು ನೀಡಿದರು. ಪೂರ್ಣಪ್ರಮಾಣದಲ್ಲಿ ಖಾತೆ ಕಡೆಗೆ ಗಮನ ನೀಡಿದೆ. ಇದರಿಂದಾಗಿ, ರಾಜ್ಯದಲ್ಲಿ ಪಕ್ಷ ಸಂಘಟನೆ ಸೊರಗಿದೆ. ಕ್ಷೇತ್ರದ ಜನರ ಕಡೆಗೆ ಗಮನ ಕೊಡಲು ಸಾಧ್ಯವಾಗಿಲ್ಲ. ಹಾಗಾಗಿ, ರಾಜೀನಾಮೆ ನೀಡಿದ್ದೇನೆ’ ಎಂದು ಅವರು ಸ್ಪಷ್ಟಪಡಿಸಿದರು.

‘ಅಧಿಕಾರ ಸಿಕ್ಕ ಕೂಡಲೇ ಮಹೇಶಣ್ಣ ಬೆಂಗಳೂರಿಗೆ ಹೋದರು ಎಂದು ಕೊಳ್ಳೇಗಾಲ ಕ್ಷೇತ್ರದ ಜನರು ಹೇಳುತ್ತಿದ್ದಾರೆ. ವಿರೋಧ ಪಕ್ಷದವರು ಅಪಪ್ರಚಾರ ಮಾಡುತ್ತಿದ್ದಾರೆ. ಅಧಿಕಾರ ಶಾಶ್ವತ ಅಲ್ಲ. ಪಕ್ಷ ಹಾಗೂ ಜನರು ಮುಖ್ಯ’ ಎಂದು ಅವರು ಸಮಜಾಯಿಷಿ ನೀಡಿದರು.

ರಾಜೀನಾಮೆಗೆ ಕಾರಣಗಳೇನು

* ಪಂಚರಾಜ್ಯಗಳ ಚುನಾವಣೆಗಳಲ್ಲಿ ಕಾಂಗ್ರೆಸ್‌ ನೇತೃತ್ವದ ‘ಮಹಾಮೈತ್ರಿ’ಯಿಂದ ಮಾಯಾವತಿ ನೇತೃತ್ವದ ಬಿಎಸ್‌ಪಿ ದೂರ ಉಳಿದಿದೆ. ರಾಜ್ಯದಲ್ಲಿಯೂ ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಳ್ಳಲು ಮಹೇಶ್ ರಾಜೀನಾಮೆ ನೀಡಿದ್ದಾರೆ. ‘ಕುಮಾರಸ್ವಾಮಿ ಅವರಿಗೆ ನನ್ನ ಬೆಂಬಲ ಇರುತ್ತದೆ. ಉಪಚುನಾವಣೆಯಲ್ಲಿ ಜೆಡಿಎಸ್‌ ಸ್ಪರ್ಧಿಸುವ ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತೇನೆ’ ಎಂದು ಮಹೇಶ್‌ ಸ್ಪಷ್ಟಪಡಿಸಿದರು. ಕಾಂಗ್ರೆಸ್‌ ಬಗ್ಗೆ ಚಕಾರ ಎತ್ತಿಲ್ಲ.

* ‘ರಾಜ್ಯದಲ್ಲಿ ನನ್ನಿಂದಾಗಿಯೇ ಬಿಎಸ್‌ಪಿ ಉಳಿದಿದೆ’ ಎಂದು ಮಹೇಶ್‌ ಸಂದರ್ಶನವೊಂದರಲ್ಲಿ ಹೇಳಿದ್ದರು. ಈ ಮಾತು ಗಮನಿಸಿದ ಮಾಯಾವತಿ ಕೋಪಗೊಂಡಿದ್ದರು. ಅವರನ್ನು ಸಂಪುಟದಿಂದ ಕೈಬಿಡುವಂತೆ ಮುಖ್ಯಮಂತ್ರಿಗೆ ತಾಕೀತು ಮಾಡಿದ್ದರು. ಅದಕ್ಕೆ ಕುಮಾರಸ್ವಾಮಿ ಒಪ್ಪಿರಲಿಲ್ಲ. ಈ ಹಿನ್ನೆಲೆಯಲ್ಲಿ, ಬಿಎಸ್‌ಪಿ ರಾಜ್ಯ ಉಸ್ತುವಾರಿ ಅಶೋಕ್‌ ಸಿದ್ಧಾರ್ಥ್‌ ಅವರನ್ನು ಬೆಂಗಳೂರಿಗೆ ಕಳುಹಿಸಿ ರಾಜೀನಾಮೆ ಕೊಡಿಸಿದರು ಎನ್ನಲಾಗಿದೆ.

* ‘ಕಾಂಗ್ರೆಸ್‌ ಕಳೆ’ ಬಗ್ಗೆ ಇತ್ತೀಚೆಗೆ ಮಹೇಶ್‌  ಆಡಿದ ಮಾತಿಗೆ ಕಾಂಗ್ರೆಸ್‌ ನಾಯಕರು ಕೆರಳಿದ್ದರು. ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಪಟ್ಟು ಹಿಡಿದಿದ್ದರು. ಇದೂ ಕಾರಣ ಎನ್ನಲಾಗುತ್ತಿದೆ.

* ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜತೆಗೆ ಬಿಎಸ್‌‍ಪಿ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ಮೈತ್ರಿಯಾದರೆ ಚಾಮರಾಜನಗರ ಕ್ಷೇತ್ರವನ್ನು ಬಿಎಸ್‌ಪಿಗೆ ಬಿಟ್ಟುಕೊಟ್ಟು ಮಹೇಶ್‌ ಅವರನ್ನು ಕಣಕ್ಕೆ ಇಳಿಸಲಾಗುತ್ತದೆ. ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳುವ ಉದ್ದೇಶದಿಂದ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಪರಿಣಾಮಗಳೇನು?

* ಮಹೇಶ್‌ ಅವರ ರಾಜೀನಾಮೆಯಿಂದ ಸರ್ಕಾರಕ್ಕೆ ಸದ್ಯ ಯಾವುದೇ ಆಪತ್ತು ಇಲ್ಲ. ಎರಡು ತಿಂಗಳಲ್ಲಿ ಬಿಜೆಪಿ ಸರ್ಕಾರ ಬರಲಿದೆ ಎಂದು ಬಿಜೆಪಿ ಮುಖಂಡರು ಗುರುವಾರ ಹೇಳಿದ್ದಾರೆ. ಒಂದು ವೇಳೆ, ಮಿತ್ರಪಕ್ಷಗಳ 22 ಶಾಸಕರು ರಾಜೀನಾಮೆ ನೀಡಿದರೆ ಮಾತ್ರ ಸರ್ಕಾರ ಪತನಗೊಳ್ಳಲಿದೆ.

* ಸಂಪುಟದಲ್ಲಿ ಕಾಂಗ್ರೆಸ್‌ ಪಾಲಿನ ಆರು ಸ್ಥಾನಗಳು ಹಾಗೂ ಜೆಡಿಎಸ್‌ ಪಾಲಿನ ಒಂದು ಸ್ಥಾನ ಖಾಲಿ ಇವೆ. ಮಹೇಶ್‌ ರಾಜೀನಾಮೆಯಿಂದ ಜೆಡಿಎಸ್‌ ಪಾಲಿನ ಎರಡು ಸ್ಥಾನಗಳು ಖಾಲಿಯಾದಂತೆ ಆಗಿದೆ. ಅತೃಪ್ತಿ ಶಮನಕ್ಕೂ ಇದು ದಾರಿ ಮಾಡಿಕೊಡಲಿದೆ.

* ಪಕ್ಷ ಸಂಘಟನೆಗಾಗಿ ರಾಜೀನಾಮೆ ನೀಡಿದ್ದಾರೆ. ಕೆಲವು ವಿಷಯಗಳನ್ನು ಬಹಿರಂಗಪಡಿಸಲು ಆಗುವುದಿಲ್ಲ. ಸಮಯ ಬಂದಾಗ ಹೇಳುವೆ

–ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ಒಬ್ಬೊಬ್ಬ ಸಚಿವರೇ ರಾಜೀನಾಮೆ ನೀಡಲಿದ್ದಾರೆ ಎಂದು ನಾವು ಭವಿಷ್ಯ ನುಡಿದಿದ್ದೆವು. ಅದರ ಪ್ರಕಾರವೇ ನಡೆಯುತ್ತಿದೆ. ಈಗ ಮೊದಲ ವಿಕೆಟ್‌ ಪತನ ಆಗಿದೆ

–ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ

ಇವನ್ನೂ ಓದಿ...

2 ತಿಂಗಳು ಗದಗ ಉಸ್ತುವಾರಿಯಾಗಿದ್ದ ಮಹೇಶ್‌ 3 ಬಾರಿ ಭೇಟಿ, 10ಕ್ಕೂ ಹೆಚ್ಚು ಸಭೆ..!

ಎನ್‌.ಮಹೇಶ್ ರಾಜೀನಾಮೆ: ಕಾರ್ಯಕರ್ತರಿಗೆ ದಿಗ್ಭ್ರಮೆ

ಬರಹ ಇಷ್ಟವಾಯಿತೆ?

 • 16

  Happy
 • 3

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !