ಮರಳು ನೀತಿ ಸುಧಾರಣೆಗೆ ಸರ್ಕಾರ ಚಿಂತನೆ: ಸಚಿವ ರಾಜಶೇಖರ್ ಬಿ.ಪಾಟೀಲ್

7
ಮರಳು ಮಾಫಿಯಾಕ್ಕೆ ಕಡಿವಾಣ

ಮರಳು ನೀತಿ ಸುಧಾರಣೆಗೆ ಸರ್ಕಾರ ಚಿಂತನೆ: ಸಚಿವ ರಾಜಶೇಖರ್ ಬಿ.ಪಾಟೀಲ್

Published:
Updated:
Deccan Herald

ಯಾದಗಿರಿ:‘ಜನರಿಗೆ ಸುಲಭ ದರದಲ್ಲಿ ಮರಳು ಸಿಗಬೇಕು ಮತ್ತು ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಮಾಫಿಯಾಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಮರಳು ನೀತಿ ಸುಧಾರಣೆಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ’ ಎಂದು ಗಣಿ ಮತ್ತು ಭೂವಿಜ್ಞಾನ , ಮುಜರಾಯಿ ಸಚಿವ ರಾಜಶೇಖರ್ ಬಿ.ಪಾಟೀಲ್ ತಿಳಿಸಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ಮರಳು, ಗ್ರಾನೈಟ್‌, ಸ್ಟೋನ್‌ ಕ್ರಷರ್ ಕುರಿತು ಅಧಿಕಾರಿಗಳ ಮೂರು ತಂಡಗಳನ್ನು ರಚಿಸಿ ತಮಿಳುನಾಡು, ಮಹಾರಾಷ್ಟ್ರ, ತೆಲಂಗಾಣ, ಗುಜರಾತ್‌ ರಾಜ್ಯಗಳಲ್ಲಿ ಕೈಗೊಂಡಿರುವ ಮರಳು ನೀತಿ ಅಧ್ಯಯನಕ್ಕೆ ಕಳುಹಿಸಲಾಗಿದೆ. ಅಧಿಕಾರಿಗಳ ತಂಡ ಸರ್ಕಾರಕ್ಕೆ ವರದಿ ನೀಡಿದ ತಕ್ಷಣ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ ನೂತನ ಮರಳು ನೀತಿ ಸುಧಾರಣೆಗೊಳಿಸಲಾಗುವುದು’ ಎಂದರು.

‘ನಾನು ಸಚಿವನಾದ ಮೇಲೆ ಪಟ್ಟಭೂಮಿಯಲ್ಲಿ ಮರಳು ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಇದುವರೆಗೂ ರಾಜ್ಯದಲ್ಲಿ 17 ಮಂದಿ ಪಟ್ಟ ಭೂ ಮಾಲೀಕರಿಗೆ ಅನುಮತಿ ನೀಡಲಾಗಿದೆ. ಪಟ್ಟ ಭೂಮಾಲೀಕರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವ ಮೂಲಕ ಪರವಾನಗಿ ಪಡೆಯಬಹುದು’ ಎಂದರು.

‘ಸುಪ್ರೀಂಕೋರ್ಟ್ ಆದೇಶದಂತೆ ಬಳ್ಳಾರಿ ಜಿಲ್ಲೆಯಲ್ಲಿ ಅಕ್ರಮಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಒಟ್ಟು ₹10ಸಾವಿರ ಕೋಟಿ ಸಂಗ್ರಹ ಇದೆ. ಅದರ ಬಡ್ಡಿ ₹3 ಸಾವಿರ ಕೋಟಿ ಸೇರಿದಂತೆ ಒಟ್ಟು ₹13 ಸಾವಿರ ಕೋಟಿ ಇದೆ. ಅಷ್ಟೂ ಹಣ ಒಂದೇ ವರ್ಷದಲ್ಲಿ ಖರ್ಚು ಮಾಡುವಂತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಕ್ರಿಯಾಯೋಜನೆ ರೂಪಿಸಿ ಪ್ರತಿವರ್ಷ ₹2 ಸಾವಿರ ಕೋಟಿಯಷ್ಟು ಹಣ ಬಳಕೆ ಮಾಡಲು ಸೂಚಿಸಿದ್ದೇನೆ. ಅದನ್ನು ಸೆಂಟ್ರಲ್ ಎಂಪವರ್‌ಮೆಂಟ್ ಕಮಿಟಿ (ಸಿಇಸಿ) ನಿರ್ವಹಿಸಲಿದೆ. ಅಲ್ಲದೇ ಸರ್ಕಾರಿ ಸ್ವಾಮ್ಯದ ₹ 350 ಕೋಟಿ ಅದಿರು ಸಂಗ್ರಹ ಇದ್ದು, ಮಾರಾಟಕ್ಕೆ ಸಿದ್ಧತೆಗೆ ನಡೆಸಲಾಗಿದೆ’ ಎಂದು ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !