ಭಾನುವಾರ, ಸೆಪ್ಟೆಂಬರ್ 15, 2019
30 °C
ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯ ಪರಿಶೀಲನೆ l ತಾತ್ಕಾಲಿಕ ವಸತಿಗೆ ಸೂಚನೆ

ನೆರೆ: ಕಷ್ಟ ಆಲಿಸಿದ ನೂತನ ಸಚಿವರು, 200 ಕುಟುಂಬಗಳ ಸ್ಥಳಾಂತರ

Published:
Updated:
Prajavani

ಹುಬ್ಬಳ್ಳಿ: ಪ್ರಮಾಣ ವಚನ ಸ್ವೀಕರಿಸಿದ 24 ಗಂಟೆಗಳಲ್ಲೇ ನೂತನ ಸಚಿವರು ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಮಿಂಚಿನ ಸಂಚಾರ ಮಾಡಿ ಪರಿಹಾರ ಕಾರ್ಯಗಳನ್ನು ಪರಿಶೀಲಿಸಿದರು. ಸಂತ್ರಸ್ತರಿಗೆ ತಾತ್ಕಾಲಿಕ ವಸತಿ ಕಲ್ಪಿಸಬೇಕು; ಗ್ರಾಮಗಳ ಸ್ವಚ್ಛತೆ, ಸಂಪರ್ಕ ಕಡಿತಗೊಂಡಿರುವ ರಸ್ತೆಗಳನ್ನು ತಕ್ಷಣ ದುರಸ್ತಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಧಾರವಾಡ ಜಿಲ್ಲೆಯ ಅಳ್ನಾವರ ತಾಲ್ಲೂಕಿನಲ್ಲಿ ಸಚಿವ ಜಗದೀಶ ಶೆಟ್ಟರ್‌ ಪ್ರವಾಸ ಮಾಡಿ, ಸಂತ್ರಸ್ತರ ಕಷ್ಟ ಆಲಿಸಿದರು. ಮನೆ ಕಳೆದುಕೊಂಡವರಿಗೆ ಗರಿಷ್ಠ ₹5 ಲಕ್ಷ ಪರಿಹಾರ ನೀಡಲಾಗುವುದು ಎಂದು ಹೇಳಿದರು.

ಗದಗ ಜಿಲ್ಲೆಯ ರೋಣ ಮತ್ತು ನರಗುಂದ ತಾಲ್ಲೂಕುಗಳ ಪ್ರವಾಹ ಪೀಡಿತ ಗ್ರಾಮಗಳಿಗೆ ಸಚಿವ ಸಿ.ಸಿ.ಪಾಟೀಲ ಭೇಟಿ ನೀಡಿದರು. ಈ ಹಿಂದೆ ಸ್ಥಳಾಂತರಿಸಲಾದ ಗ್ರಾಮಗಳ ಸಂತ್ರಸ್ತರು ಈಗಾಗಲೇ ಮಂಜೂರಾಗಿರುವ ‘ಆಸರೆ’ ಮನೆಗಳಿಗೆ ಕಡ್ಡಾಯವಾಗಿ ಹೋಗಬೇಕು ಎನ್ನುವ ಸೂಚನೆಯನ್ನೂ ಅವರು ನೀಡಿದರು.

ಸಚಿವರಾದ ಗೋವಿಂದ ಕಾರಜೋಳ ಹಾಗೂ ಕೆ.ಎಸ್‌. ಈಶ್ವರಪ್ಪ ಅವರು ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದರು. ಬೆಳೆ ಹಾನಿ ಸಮೀಕ್ಷೆ ನಂತರ ರೈತರಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ಸಚಿವರಿಬ್ಬರು ಭರವಸೆ ನೀಡಿದರು.

‘ನೆರೆಯಿಂದಾಗಿ ವಿದ್ಯುತ್ ವಿತರಣಾ ಜಾಲ ಸಂಪೂರ್ಣ ಹಾಳಾಗಿದೆ. ಅದರ ದುರಸ್ತಿಗೆ ರಾಜ್ಯದಲ್ಲಿನ ಇತರ ವಿದ್ಯುತ್ ವಿತರಣಾ ಕಂಪನಿಗಳ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ನಿಯೋಜಿಸಲು ಸೂಚಿಸಲಾಗಿದೆ’ ಎಂದು ಅವರು ತಿಳಿಸಿದರು.

ಸಚಿವರಾದ ಲಕ್ಷ್ಮಣ ಸವದಿ ಹಾಗೂ ಶಶಿಕಲಾ ಜೊಲ್ಲೆ ಅವರು ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ, ಮಾಹಿತಿ ಪಡೆದರು. ನೆರೆಪೀಡಿತ ಗ್ರಾಮಗಳಲ್ಲಿ ಸ್ವಚ್ಛತೆಯನ್ನು ಆದ್ಯತೆಯಾಗಿ ಕೈಗೆತ್ತಿಕೊಳ್ಳಬೇಕು; ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ನಷ್ಟದ ಸಮೀಕ್ಷೆ ಕಾರ್ಯಗಳಲ್ಲಿ ಲೋಪದೋಷಗಳಾದರೆ ಸಮೀಕ್ಷೆ ಮಾಡುವ ತಂಡವನ್ನೇ ಹೊಣೆಯಾಗಿಸಲಾಗುವುದು’ ಎಂದೂ ಸಚಿವರು ಎಚ್ಚರಿಸಿದರು.

‘ಒಪ್ಪಿದಲ್ಲಿ ಸಂಪೂರ್ಣ ಸ್ಥಳಾಂತರ’

ಬಾಗಲಕೋಟೆ: ‘ಪ್ರವಾಹ ಪೀಡಿತ ಪ್ರದೇಶದ ನದಿ ದಂಡೆಯ ಗ್ರಾಮಸ್ಥರು ಸಿದ್ಧವಿದ್ದಲ್ಲಿ ಅವರನ್ನು ಸಂಪೂರ್ಣವಾಗಿ ಸ್ಥಳಾಂತರಿಸಲಾಗುವುದು. 2009ರಲ್ಲಿ ಆದ ತಪ್ಪುಗಳು ಈ ಬಾರಿ ಪುನರಾವರ್ತನೆ ಆಗದಂತೆ ಎಚ್ಚರ ವಹಿಸಲಾಗುವುದು’ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.

ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಗ್ರಾಮಗಳ ಸ್ಥಳಾಂತರಕ್ಕೆ ಲಭ್ಯವಿರುವ ಕಡೆ ಸರ್ಕಾರಿ ಜಾಗ ಬಳಸಲಾಗುವುದು. ಇಲ್ಲವೇ ಖಾಸಗಿಯವರಿಂದ ಜಮೀನು ಖರೀದಿಸಿ ಅಲ್ಲಿ ಅಗತ್ಯ ಮೂಲ ಸೌಕರ್ಯವುಳ್ಳ ಸುಸಜ್ಜಿತ ಲೇಔಟ್‌ಗಳನ್ನು ನಿರ್ಮಿಸಲಾಗುವುದು. ಅದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಒಪ್ಪಿದ್ದಾರೆ’ ಎಂದರು.

ಜಿಪುಣತನ ತೋರುವುದಿಲ್ಲ: ‘ಈ ಬಾರಿಯ ಪ್ರವಾಹ ಶತಮಾನದ ದುರಂತವಾಗಿದೆ. ಹೀಗಾಗಿ ಮಾನವೀಯ ನೆಲೆಯಲ್ಲಿಯೇ ಸಂತ್ರಸ್ತರನ್ನು ಸರ್ಕಾರ ಪರಿಗಣಿಸಲಿದೆ. ಪರಿಹಾರ ವಿತರಣೆ ಹಾಗೂ ಸವಲತ್ತುಗಳ ನೀಡಿಕೆ ವಿಚಾರದಲ್ಲಿ ಉದಾರವಾಗಿ ವರ್ತಿಸಲಿದೆಯೇ ಹೊರತು ಜಿಪುಣತನ ತೋರುವುದಿಲ್ಲ‘ ಎಂದು ಸ್ಪಷ್ಟಪಡಿಸಿದರು.

‘200 ಕುಟುಂಬಗಳ ಸ್ಥಳಾಂತರ’

ಮಡಿಕೇರಿ: ಸಿದ್ದಾಪುರ, ಕರಡಿಗೋಡು, ನೆಲ್ಯಹುದಿಕೇರಿ, ಕುಶಾಲನಗರದಲ್ಲಿ ಪ್ರವಾಹದಿಂದ ಹಾನಿಯಾಗಿದ್ದ ಪ್ರದೇಶಕ್ಕೆ ಸಚಿವ ಸುರೇಶ್‌ ಕುಮಾರ್‌ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿದರು. ಆದರೆ, ಸಚಿವ ಸ್ಥಾನ ಸಿಗದಿರುವುದಕ್ಕೆ ಅಸಮಾಧಾನಗೊಂಡಿರುವ ಅಪ್ಪಚ್ಚು ರಂಜನ್‌ ಗೈರಾಗಿದ್ದರು. ರಂಜನ್‌ ಸಹೋದರ, ವಿಧಾನ ಪರಿಷತ್‌ ಸದಸ್ಯ ಸುನಿಲ್‌ ಸುಬ್ರಮಣಿಯೂ ಬರಲಿಲ್ಲ. ಇಡೀ ದಿನದ ಸಚಿವರ ಪ್ರವಾಸದಲ್ಲಿ ಬೋಪಯ್ಯ ಸಹ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಸ್ಥಳೀಯ ಬಿಜೆಪಿ ಮುಖಂಡರು ಮಾತ್ರ ಹಾಜರಿದ್ದರು.

‘ಕಾವೇರಿ ನದಿ ಪಾತ್ರದ ಅಪಾಯ ಪ್ರದೇಶದಲ್ಲಿ ಮನೆ ನಿರ್ಮಿಸಿಕೊಂಡಿರುವ 200 ಕುಟುಂಬಗಳನ್ನು ಸ್ಥಳಾಂತರ ಮಾಡಲು ತೀರ್ಮಾನಿಸಲಾಗಿದೆ. ಸ್ಥಳಾಂತರಕ್ಕೆ ಎರಡು ಗ್ರಾಮಗಳ ಜನರೂ ಒಪ್ಪಿದ್ದಾರೆ’ ಎಂದು ಸಚಿವರು ಹೇಳಿದರು.

Post Comments (+)