ನಕಲಿ ಖಾತೆಗಳ ಮೂಲಕ ಕೃಷಿ ಸಾಲ: ಸಹಕಾರಿ ಬ್ಯಾಂಕ್‌ಗಳಲ್ಲಿ ₹50ಕೋಟಿ ದುರುಪಯೋಗ

7

ನಕಲಿ ಖಾತೆಗಳ ಮೂಲಕ ಕೃಷಿ ಸಾಲ: ಸಹಕಾರಿ ಬ್ಯಾಂಕ್‌ಗಳಲ್ಲಿ ₹50ಕೋಟಿ ದುರುಪಯೋಗ

Published:
Updated:

ಬೆಂಗಳೂರು: ರಾಜ್ಯದ ಸಹಕಾರಿ ವಲಯದ ಪ್ರಾಥಮಿಕ ಬ್ಯಾಂಕ್‌ಗಳಲ್ಲಿ 6000 ನಕಲಿ ಖಾತೆಗಳ ಮೂಲಕ ಬೆಳೆ ಸಾಲ ಪಡೆದಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

ಈ ಮೂಲಕ ಸುಮಾರು ₹ 50 ಕೋಟಿ ದುರುಪಯೋಗ ಆಗಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ದುರುಪಯೋಗ ತಪ್ಪಿಸುವ ಮತ್ತು ನೈಜತೆ ಪತ್ತೆ ಮಾಡುವ ಉದ್ದೇಶದಿಂದ ಪ್ರಾಥಮಿಕ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿರುವ ರೈತರ ಪಟ್ಟಿ ಪ್ರಕಟಿಸಲು ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು. 

ಕೆಲವು ವ್ಯಕ್ತಿಗಳು ಸತ್ತು ಹೋಗಿದ್ದರೂ ಅವರ ಹೆಸರಿನಲ್ಲಿ ಬ್ಯಾಂಕ್‌ಗಳಲ್ಲಿ ಖಾತೆಗಳಿವೆ. ಆ ಖಾತೆಗಳ ಮೂಲಕ ಸಂಬಂಧಿಗಳು ಸಾಲ ಪಡೆದಿದ್ದಾರೆ. ಇದರಲ್ಲಿ ಬ್ಯಾಂಕ್‌ ಕಾರ್ಯದರ್ಶಿಗಳ ಕೈವಾಡವೂ ಇದೆ. ಬ್ಯಾಂಕ್‌ ಖಾತೆಗಳಿಗೆ ಆಧಾರ್‌ ಸಂಖ್ಯೆ ಜೋಡಣೆ ಮಾಡುತ್ತಿರುವುದರಿಂದ ಇಂತಹ ಅಕ್ರಮಗಳಿಗೆ ಕಡಿವಾಣ ಬೀಳುತ್ತಿದೆ. ಆದರೂ, ಸಾಲಗಾರರ ಪಟ್ಟಿಯನ್ನು ನೋಟಿಸ್‌ ಬೋರ್ಡ್‌ನಲ್ಲಿ ಪ್ರಕಟಿಸಲು ಆದೇಶ ಹೊರಡಿಸಲಾಗಿದೆ ಎಂದು ಕಾಶೆಂಪೂರ ತಿಳಿಸಿದರು.

ಆಧಾರ್‌ ಜೋಡಣೆ ಮಾಡಿದ ನಂತರ ಸುಮಾರು 6,000 ನಕಲಿ ಖಾತೆಗಳು ಬೆಳಕಿಗೆ ಬಂದವು ಎಂದೂ ಅವರು ತಿಳಿಸಿದರು.

ನಬಾರ್ಡ್‌ ಶೇ 40 ರಷ್ಟು ಆಂತರಿಕ ಸಾಲ ನೀಡಿದೆ. ಈ ಪ್ರಮಾಣವನ್ನು ಶೇ 76 ಕ್ಕೆ ಹೆಚ್ಚಿಸಲು ನಬಾರ್ಡ್‌ಗೆ ಸೂಚನೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಆದರೆ, ಕೇಂದ್ರ ಕೃಷಿ ಸಚಿವ ರಾಧಾಮೋಹನ್‌ ಶೇ 60 ರಷ್ಟು ಸಾಲ ನೀಡಲು ಸೂಚನೆ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಕಾಶೆಂಪೂರ ಹೇಳಿದರು.

ರಾಜ್ಯದಲ್ಲಿ 78 ಲಕ್ಷ ರೈತರಿದ್ದು, ಸಹಕಾರ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳು ಸೇರಿ 50 ಲಕ್ಷ ರೈತರಿಗೆ ಸಾಲ ನೀಡುತ್ತಿವೆ. ಉಳಿದ 28 ಲಕ್ಷ ರೈತರಿಗೆ ಸಾಲ ಸೌಲಭ್ಯ ಸಿಗುತ್ತಿಲ್ಲ. ಅವರಿಗೂ ಸಾಲ ಸೌಲಭ್ಯ ಸಿಗುವಂತಾಗಬೇಕು. ಸಾಲ ಸೌಲಭ್ಯ ಪಡೆದಿರುವ ರೈತರಲ್ಲಿ ಹೊಸದಾಗಿ 10 ರಿಂದ 15 ಲಕ್ಷ ರೈತರಿಗೆ ಸಾಲ ವಿತರಿಸಲು ಮುಖ್ಯಮಂತ್ರಿ ಜತೆ ಚರ್ಚೆ ಮಾಡುವುದಾಗಿ ಅವರು ತಿಳಿಸಿದರು.

ಸಹಕಾರ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿರುವ 20.38 ಲಕ್ಷ ರೈತರು ಸಾಲ ಮನ್ನಾ ಸೌಲಭ್ಯದ ಪ್ರಯೋಜನ ಪಡೆಯಲಿದ್ದು, ಒಟ್ಟು ₹ 9,448.61 ಕೋಟಿ ಸಾಲ ಮನ್ನಾ ಆಗುತ್ತದೆ. ಸಾಲ ಮನ್ನಾ ಪ್ರಯೋಜನ ಪಡೆಯುವ ರೈತರಿಗೆ ಏಕ ಕಾಲದಲ್ಲಿ ಋಣ ಮುಕ್ತ ಪ್ರಮಾಣ ಪತ್ರವನ್ನು ವಿತರಿಸಲಾಗುತ್ತದೆ ಎಂದೂ ಅವರು ಹೇಳಿದರು.

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !