ಬುಧವಾರ, ಫೆಬ್ರವರಿ 19, 2020
29 °C
ಇಂಡೀಕರಣದ ನಂತರವೂ ಆರ್‌ಟಿಸಿಗೆ ದಾಖಲಾಗದ ಕಾನನ

ಕೈತಪ್ಪಿದ 1.08 ಲಕ್ಷ ಹೆಕ್ಟೇರ್ ಅರಣ್ಯ ಭೂಮಿ

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

prajavani

ಶಿವಮೊಗ್ಗ: ಅಧಿಸೂಚನೆ ಹೊರಡಿಸಿ ದಶಕಗಳು ಕಳೆದರೂ ನಿಗದಿತ ಅರಣ್ಯ ಭೂಮಿಯನ್ನು ಕಂದಾಯ ದಾಖಲೆಗಳಿಗೆ (ಆರ್‌ಟಿಸಿ) ನಮೂದಿಸದ ಕಾರಣ ಜಿಲ್ಲೆಯ 1.08 ಲಕ್ಷ ಹೆಕ್ಟೇರ್ ಅರಣ್ಯಭೂಮಿ ಕಳೆದುಕೊಳ್ಳಲಾಗಿದೆ.

ಶಿವಮೊಗ್ಗ ಜಿಲ್ಲೆ ಒಂದು ಕಾಲದಲ್ಲಿ ವೈವಿಧ್ಯಮಯ ಜೀವ ಸಂಕುಲವನ್ನು ಒಳಗೊಂಡ ನಿತ್ಯ ಹರಿದ್ವರ್ಣದ ಕಾನನಕ್ಕೆ ಹೆಸರಾಗಿತ್ತು. ಅವ್ಯಾಹತ ಅರಣ್ಯ ನಾಶದ ಪರಿಣಾಮ ಪರಿಸರ ಅಸಮತೋಲನ ಸೃಷ್ಟಿಯಾಗಿತ್ತು. ಕೆಲವು ಪರಿಸರ ಸಂಘಟನೆಗಳ ಕಾರ್ಯಕರ್ತರು ಇದರ ವಿರುದ್ಧ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು.

1980ರ ಅರಣ್ಯ ಸಂರಕ್ಷಣಾ ಕಾಯ್ದೆ ಅನ್ವಯ ಅರಣ್ಯಭೂಮಿಯನ್ನು ನಿರ್ದಿಷ್ಟವಾಗಿ ಗುರುತಿಸಿ, ಇಂಡೀಕರಣ ಮಾಡುವಂತೆ ಕೋರ್ಟ್ ಸೂಚಿಸಿತ್ತು. ಆಗ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿ 3.61 ಹೆಕ್ಟೇರ್ ಅರಣ್ಯ ಭೂಮಿ ಇರುವುದಾಗಿ ಅಫಿಡವಿಟ್‌ ಸಲ್ಲಿಸಿದ್ದರು. ನಂತರ ಕಂದಾಯ ದಾಖಲೆಗಳಲ್ಲಿ ಅರಣ್ಯಭೂಮಿ ನಮೂದಿಸುವ ಕಾರ್ಯ ಆರಂಭವಾಗಿತ್ತು. 3.61 ಹೆಕ್ಟೇರ್ ಅರಣ್ಯದಲ್ಲಿ ಇದುವರೆಗೂ ಆರ್‌ಟಿಸಿಯಲ್ಲಿ ನಮೂದಾಗಿರುವುದು 2.52 ಲಕ್ಷ ಹೆಕ್ಟೇರ್. ಉಳಿದ 1.08 ಲಕ್ಷ ಹೆಕ್ಟೇರ್ ನಮೂದಾಗಲೇ ಇಲ್ಲ. 

ಒತ್ತುವರಿದಾರರಿಗೆ ಅದೃಷ್ಟ: ಅಫಿಡವಿಟ್‌ನಲ್ಲಿ ಹೇಳಿದಂತೆ ಅರಣ್ಯ ಭೂಮಿಯ ಶೇ 30.10ರಷ್ಟು ಪ್ರದೇಶ ಕಂದಾಯ ಇಲಾಖೆಯ ಆರ್‌ಟಿಸಿಗಳಲ್ಲಿ ನಮೂದಾಗಿಲ್ಲ. ಹಳೆಯ ದಾಖಲೆಗಳಲ್ಲಿ ಇತರೆ ಕಂದಾಯ ಭೂಮಿ ಎಂದೇ ಇದೆ. ಕಾರಣ ಇಂತಹ ಭೂಮಿಯನ್ನು ಸ್ಥಳೀಯರು ನಿರಂತರವಾಗಿ ಕಡಿದು ಸಾಗುವಳಿ ಮಾಡಿದ್ದಾರೆ. ಅಡಿಕೆ, ಶುಂಠಿ, ರಬ್ಬರ್ ಬೆಳೆಗಳು ಎಲ್ಲೆಡೆ ತಲೆ ಎತ್ತಿವೆ. ಈ ಪ್ರದೇಶಗಳ ಒತ್ತುವರಿದಾರರ ಮೇಲೆ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದರೂ ದಾಖಲೆಗಳಲ್ಲಿ ಅರಣ್ಯ ಎಂದು ನಮೂದಾಗದ ಕಾರಣ ಕಾನೂನು ಕ್ರಮಕೈಗೊಳ್ಳಲು ಸಾಧ್ಯವಾಗಿಲ್ಲ. ಪರಿಣಾಮ ಭದ್ರಾವತಿ ತಾಲ್ಲೂಕಿನಲ್ಲಿ 37,202 ಹೆಕ್ಟೇರ್, ಶಿವಮೊಗ್ಗದಲ್ಲಿ 28,158 ಹೆಕ್ಟೇರ್, ಸಾಗರದಲ್ಲಿ 30,495 ಹೆಕ್ಟೇರ್, ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿ 12,890 ಹೆಕ್ಟೇರ್‌ ಅರಣ್ಯ ಕಳೆದುಕೊಳ್ಳಲಾಗಿದೆ. 

‘ಜಲಾಶಯಗಳು, ಕೃಷಿ, ರಸ್ತೆ ಮತ್ತಿತರ ಅಭಿವೃದ್ಧಿ ಕಾರ್ಯಗಳಿಗೆ ಲಕ್ಷಾಂತರ ಹೆಕ್ಟೇರ್ ಅರಣ್ಯ ನಾಶವಾಗಿದೆ. ಉಳಿದಿರುವ ಅರಣ್ಯ ಸಂರಕ್ಷಣೆಗೆ ಜಿಲ್ಲಾಧಿಕಾರಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ನೋಟಿಫಿಕೇಷನ್ ಆದ ಭೂಮಿಯನ್ನು ಆರ್‌ಟಿಸಿಯಲ್ಲಿ ನಮೂದಿಸಬೇಕು. ಒತ್ತುವರಿ ಭೂಮಿ ತೆರವಿಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸುಪ್ರೀಂಕೋರ್ಟ್‌ನ ಕೇಂದ್ರ ಅಧಿಕಾರ ಸಮಿತಿಗೆ ದೂರು ನೀಡಲಾಡಲಾಗುವುದು’ ಎಂದು ಎಚ್ಚರಿಸುತ್ತಾರೆ ಹೊಸನಗರ ಜನ ಸಂಗ್ರಾಮ ಪರಿಷತ್ ಮುಖಂಡ ಗಿರೀಶ್ ಆಚಾರ್.

***

ಬಾಕಿ ಇರುವ ಅರಣ್ಯ ಭೂಮಿಯನ್ನು ಆರ್‌ಟಿಸಿಯಲ್ಲಿ ನಮೂದಿಸುವಂತೆ ಕಂದಾಯ ಇಲಾಖೆಯನ್ನು ಕೋರಲಾಗಿದೆ. ಶೀಘ್ರ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ

-ಶ್ರೀನಿವಾಸುಲು, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಶಿವಮೊಗ್ಗ ವೃತ್ತ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು