ಕಾನೂನು ಪ್ರಕ್ರಿಯೆಯ ದುರ್ಬಳಕೆ: ಅರ್ಜಿದಾರರಿಗೆ ₹10 ಸಾವಿರ ದಂಡ

7

ಕಾನೂನು ಪ್ರಕ್ರಿಯೆಯ ದುರ್ಬಳಕೆ: ಅರ್ಜಿದಾರರಿಗೆ ₹10 ಸಾವಿರ ದಂಡ

Published:
Updated:

ಧಾರವಾಡ: ‘ಸ್ವಯಂ ರಕ್ಷಣೆಗಾಗಿ ಪ್ರಕರಣ ದಾಖಲಿಸಿ ನ್ಯಾಯಾಲಯದ ಅಮೂಲ್ಯ ಸಮಯ ವ್ಯರ್ಥಗೊಳಿಸುವುದು ಹಾಗೂ ಕಾನೂನು ಪ್ರಕ್ರಿಯೆ ದುರ್ಬಳಕೆ ಮಾಡುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ’ ಎಂದು ಹೈಕೋರ್ಟ್‌ ಖಡಕ್ ಎಚ್ಚರಿಕೆ ನೀಡಿತು.

ಹೇಬಿಯಸ್‌ ಕಾರ್ಪಸ್‌ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಮೌಖಿಕವಾಗಿ ಈ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಮೂರ್ತಿ ಬಿ.ವೀರಪ್ಪ ಮತ್ತು ಎಚ್‌.ಟಿ.ನರೇಂದ್ರ ಪ್ರಸಾದ ಅವರಿದ್ದ ವಿಭಾಗೀಯ ಪೀಠ, ಅರ್ಜಿ ವಜಾಗೊಳಿಸಿದ್ದಲ್ಲದೇ, ಅರ್ಜಿದಾರರಿಗೆ ₹ 10 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿತು. 

ಧಾರವಾಡದ ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುತ್ತಿದ್ದ ಉಮ್ಮತಿ ಗ್ರುಪ್‌ನ ಇಮಾಮ್‌ ಹುಸೇನ್‌ ಎನ್ನುವವರನ್ನು ಪೊಲೀಸ್‌ ಕಾನ್‌ಸ್ಟೆಬಲ್‌ ಬಾಪುಗೌಡ ಪಾಟೀಲ ಎನ್ನುವವರು ಅಕ್ರಮ ಬಂಧನದಲ್ಲಿಟ್ಟುಕೊಂಡಿದ್ದಾರೆ. ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ನಿರ್ದೇಶನ ನೀಡಬೇಕು ಎಂದು ಕೋರಿ ಇಮಾಮ್‌ ಹುಸೇನ್‌ ಅವರ ತಾಯಿ ರಜೀನಾ ಬೇಗಂ ಧಪೇದಾರ ಮತ್ತು ಆತನ ತಮ್ಮ ಮೌಲಾ ಅಲಿ ಧಪೇದಾರ ಎನ್ನುವವರು ಹೈಕೋರ್ಟನಲ್ಲಿ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರು. 

ವಿಚಾರಣೆಯ ಸಂದರ್ಭದಲ್ಲಿ ಇಮಾಮ್‌ ಹುಸೇನ್‌ನನ್ನು ಹುಡುಕಿ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಸೂಚಿಸಲಾಗಿತ್ತು. ಬೆಂಗಳೂರಿನ ಶಿವಾಜಿನಗರದಲ್ಲಿದ್ದ ಅವರನ್ನು ಪತ್ತೆ ಹಚ್ಚಿ, ಸೋಮವಾರ ನ್ಯಾಯಪೀಠದ ಮುಂದೆ ಹಾಜರುಪಡಿಸಲಾಯಿತು.

‘ವ್ಯವಹಾರದಲ್ಲಿ ನಷ್ಟವಾಗಿದ್ದರಿಂದ ಯಾರಿಗೂ ಹೇಳದೆ ನಾನು ಮುಂಬೈಗೆ ಹೋದೆ. ಅಲ್ಲಿಂದ ಗೋವಾಕ್ಕೆ ಹೋಗಿದ್ದೆ, ನಂತರ ಬೆಂಗಳೂರಿಗೆ ಬಂದೆ. ನನ್ನನ್ನು ಯಾರೂ ಅಕ್ರಮ ಬಂಧನದಲ್ಲಿರಿಸಿಲ್ಲ’ ಎಂದು ಇಮಾಮ್‌ ಹುಸೇನ್‌ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದರು. ಇದೇ ಸಂದರ್ಭದಲ್ಲಿ ಸರ್ಕಾರಿ ವಕೀಲರು ಇವರ ವಿರುದ್ಧ ವಿವಿಧ ಪೊಲೀಸ್‌ ಠಾಣೆಗಳಲ್ಲಿರುವ ಚೆಕ್‌ ಬೌನ್ಸ್‌, ವಂಚನೆ ಪ್ರಕರಣಗಳ ಕುರಿತು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. 

ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠ, ‘ಕಾನೂನು ಪ್ರಕ್ರಿಯೆ ದುರ್ಬಳಕೆಯ ಅಪರೂಪದ ಪ್ರಕರಣವಿದು. ಯಾವುದೋ ಕಾರಣ ನೀಡಿ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿ, ಅನಗತ್ಯವಾಗಿ ಪೊಲೀಸ್‌ ಇಲಾಖೆ ಮೇಲೆ ಒತ್ತಡ ಹೇರಿದ್ದಲ್ಲದೆ, ನ್ಯಾಯಾಲಯದ ಸಮಯ ವ್ಯರ್ಥ ಮಾಡಿರುವುದು ಮತ್ತು ದಾರಿ ತಪ್ಪಿಸುವ ಅರ್ಜಿ ಸಲ್ಲಿಸಿರುವುದು ಒಂದು ರೀತಿಯಲ್ಲಿ ನ್ಯಾಯಾಂಗಕ್ಕೆ ಮಾಡಿದ ಮೋಸ, ವಂಚನೆ’ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ದಂಡದ ಹಣವನ್ನು ಒಂದು ತಿಂಗಳೊಳಗಾಗಿ ಪೊಲೀಸ್ ಕಲ್ಯಾಣ ನಿಧಿಗೆ ಪಾವತಿಸುವಂತೆ, ತಪ್ಪಿದಲ್ಲಿ ಜಿಲ್ಲಾಧಿಕಾರಿಗಳು ಆ ಹಣವನ್ನು ವಸೂಲಿ ಮಾಡುವಂತೆ ನ್ಯಾಯಪೀಠ ಸೂಚಿಸಿತು.  

ಸರ್ಕಾರದ ಪರವಾಗಿ ಸಿ.ಎಸ್‌.ಪಾಟೀಲ ವಾದ ಮಂಡಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !