ರೈತರ ಸಾಲದ ಮೊತ್ತ ದುರ್ಬಳಕೆ; ನಾಲ್ವರಿಗೆ ನೋಟಿಸ್‌

7
ಎಂಡಿಸಿಸಿ ಬ್ಯಾಂಕ್‌ ಹುಣಸೂರು ಶಾಖೆಯಲ್ಲಿ ಅಕ್ರಮ; ₹ 27 ಕೋಟಿ ದುರುಪಯೋಗ ಶಂಕೆ

ರೈತರ ಸಾಲದ ಮೊತ್ತ ದುರ್ಬಳಕೆ; ನಾಲ್ವರಿಗೆ ನೋಟಿಸ್‌

Published:
Updated:
Deccan Herald

ಹುಣಸೂರು: ರೈತರಿಗೆ ನೀಡಬೇಕಿದ್ದ ಕೃಷಿ ಸಾಲದ ಮೊತ್ತವನ್ನು ಎಂ.ಡಿ.ಸಿ.ಸಿ ಬ್ಯಾಂಕಿನ ಹುಣಸೂರು ಶಾಖೆಯ ಸಿಬ್ಬಂದಿ ಸ್ವಂತಕ್ಕೆ ಬಳಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ರೈತರಿಗೆ ವಿತರಿಸಲು ಬಿಡುಗಡೆಯಾದ ಮೊತ್ತವನ್ನು ಶಾಖಾ ವ್ಯವಸ್ಥಾಪಕ ತನ್ನ ವ್ಯವಹಾರಕ್ಕೆ ಮೂಲ ಬಂಡವಾಳವನ್ನಾಗಿ ಮಾಡಿಕೊಂಡು ದೊಡ್ಡ ಪ್ರಮಾಣದ ಅವ್ಯವಹಾರ ನಡೆಸಿರುವುದು ದಾಖಲೆಯಲ್ಲಿ ಪತ್ತೆಯಾಗಿದೆ. ಕಳೆದ ಆರು ತಿಂಗಳಲ್ಲಿ ಬ್ಯಾಂಕಿನ ಶಾಖೆಗೆ ₹ 27 ಕೋಟಿ ಬಿಡುಗಡೆಯಾಗಿದೆ. ಇದು, ದುರ್ಬಳಕೆ ಆಗಿರುವ ಶಂಕೆಯಿದೆ.

ಅವ್ಯವಹಾರವನ್ನು ದೃಢಪಡಿಸಿರುವ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ನಿಂಗಣ್ಣಯ್ಯ ಅವರು, ‘ಹುಣಸೂರು ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಹಣ ದುರುಪಯೋಗ ಪ್ರಕರಣ ಗಮನಕ್ಕೆ ಬಂದಿದೆ. ಶಾಖೆಗೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ 3 ದಿನದೊಳಗಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

ಪ್ರಕರಣದ ಸಂಬಂಧ ಹುಣಸೂರು ಶಾಖೆಯ ವ್ಯವಸ್ಥಾಪಕ ರಾಮಪ್ಪ ಪೂಜಾರ್ ಹಾಗೂ ಬಿಳಿಕೆರೆ ಶಾಖೆಯ ವ್ಯವಸ್ಥಾಪಕ ಜಿ.ಎಸ್‌.ನಿರಂಜನ್‌ ಮತ್ತು ಮೇಲ್ವಿಚಾರಕರಾದ ಬಿ.ಬಿ.ಕೃಷ್ಣ ಹಾಗೂ ಎ.ಜೆ.ನವೀನಕುಮಾರ್‌ ಅವರಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ತನಿಖೆ ನಡೆಸಿ ಪ್ರಕರಣದ ಪೂರ್ಣ ವರದಿಯನ್ನು ಸಲ್ಲಿಸಲಾಗುವುದು ಎಂದು ಹೇಳಿದರು.

ಸಾಲದ ಮೊತ್ತವನ್ನು ಫಲಾನುಭವಿ ರೈತರ ಖಾತೆಗೆ ನೇರವಾಗಿ ಜಮೆ ಮಾಡಬೇಕು ಎಂದು ಸ್ಪಷ್ಟ ಆದೇಶವಿದ್ದರೂ ಅದನ್ನು ಪಾಲಿಸದೆ ದುರ್ಬಳಕೆ ಮಾಡಲಾಗಿದೆ. ಈ ಕುರಿತ ದಾಖಲೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.

ವಿವರ: ಬ್ಯಾಂಕಿನ ಬಿಳಿಕೆರೆ ಮತ್ತು ಪಟ್ಟಣದ ಶಾಖೆಯಿಂದ ಸ್ಥಳೀಯ ಶಾಖೆಯ ವ್ಯವಸ್ಥಾಪಕರ ಉಳಿತಾಯ ಖಾತೆಗೆ 6 ತಿಂಗಳಿಂದ ₹ 27 ಕೋಟಿಗೂ ಹೆಚ್ಚು ಜಮೆ ಆಗಿದೆ. ಒಟ್ಟು ₹ 40 ಕೋಟಿಗೂ ಹೆಚ್ಚಿನ ವ್ಯವಹಾರ ನಡೆದಿರುವುದು ಗೊತ್ತಾಗಿದೆ.

ರೈತ ಸದಸ್ಯರಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಕೆ.ಸಿ.ಸಿ. ಬೆಳೆ ಸಾಲ ಹಾಗೂ ಮಧ್ಯಮಾವಧಿ ಸಾಲವನ್ನು ನಬಾರ್ಡ್‌, ಆರ್‌ಬಿಐ ಸುತ್ತೋಲೆ ಅನುಸಾರ ರೂಪೇ ಕಾರ್ಡ್‌ ಮುಖೇನ ರೈತರ ಖಾತೆಗೆ ಜಮೆ ಮಾಡಬೇಕಿತ್ತು.

ಜಿಲ್ಲಾ ಶಾಖೆಯು ಈ ವರ್ಷದ ಮೇ ತಿಂಗಳಲ್ಲಿ ರೈತರಿಗೆ ಕೆಸಿಸಿ ಬೆಳೆ ಸಾಲ ₹ 1.66 ಕೋಟಿ ಬಿಡುಗಡೆ ಮಾಡಿದೆ. ಇದನ್ನು  ಚಾಲ್ತಿ ಖಾತೆಗೆ ಜಮೆ ಮಾಡಿ, ಸಂಘದ ವ್ಯೆಯಕ್ತಿಕ ಚೆಕ್‌ ಮೂಲಕ ನಗದೀಕರಿಸಿ ಆ ದಿನವೇ ರಾಮಪ್ಪ ಪೂಜಾರ್ ಅವರ ಉಳಿತಾಯ ಖಾತೆಗೆ ನಿರಂಜನ್‌ ಜಮೆ ಮಾಡಿಕೊಂಡಿರುವುದು ವಹಿವಾಟಿನಿಂದ ತಿಳಿದು ಬಂದಿದೆ.

**

ಹಣ ದುರ್ಬಳಕೆ ಪ್ರಕರಣ ಕುರಿತು ಸೂಕ್ತ ತನಿಖೆಯನ್ನು ನಡೆಸಿ ಸಂಬಂಧಿಸಿದ ಸಿಬ್ಬಂದಿ ವಿರುದ್ಧ ಸಹಕಾರಿ ಸಚಿವಾಲಯವು ತನಿಖೆ ನಡೆಸಬೇಕು.ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು.
-ಬೆಟ್ಟೇಗೌಡ, ಅಧ್ಯಕ್ಷ, ತಾಲ್ಲೂಕು ರೈತ ಸಂಘ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !