ಮಿಥಾಲಿ ಪರಂಪರೆಯ ಮೋಡ; ಸ್ಮೃತಿ ವೇಗದ ಹೊಸ ಮಿಂಚು

ಶುಕ್ರವಾರ, ಮಾರ್ಚ್ 22, 2019
21 °C

ಮಿಥಾಲಿ ಪರಂಪರೆಯ ಮೋಡ; ಸ್ಮೃತಿ ವೇಗದ ಹೊಸ ಮಿಂಚು

Published:
Updated:
Prajavani

2017. ಇಂಗ್ಲೆಂಡ್‌ಗೆ ಹೊರಟಿದ್ದ ಭಾರತ ಕ್ರಿಕೆಟ್‌ ತಂಡದ ಆಟಗಾರ್ತಿಯರನ್ನು ಬೀಳ್ಕೊಡಲು ವಿಮಾನ ನಿಲ್ದಾಣದಲ್ಲಿ ಕೆಲವೇ ಪೋಷಕರು–ಸ್ನೇಹಿತರಿದ್ದರು. ವಿಶ್ವಕಪ್‌ ಆಡಲು ಅಲ್ಲಿಗೆ ಹೊರಟಿದ್ದ ಏಕದಿನ ಕ್ರಿಕೆಟ್‌ ತಂಡದ ಬಗೆಗೆ ಬಹುತೇಕರಲ್ಲಿ ನಿರುತ್ಸಾಹ. ನಾಯಕಿ ಮಿಥಾಲಿ ರಾಜ್‌ ತಮ್ಮಿಷ್ಟದ ಪುಸ್ತಕ ಹಿಡಿದು ಓದುತ್ತಾ ಕುಳಿತಿದ್ದರು. ಮಾಧ್ಯಮಮಿತ್ರರಲ್ಲೂ ಆಟಗಾರ್ತಿಯರನ್ನು ಮಾತನಾಡಿಸುವ ಉತ್ಸಾಹ ಅಷ್ಟಕ್ಕಷ್ಟೆ. ಶಾಸ್ತ್ರಕ್ಕೆಂದು ಸುದ್ದಿಗೋಷ್ಠಿ ನಡೆಯಿತು.

2013ರ ವಿಶ್ವಕಪ್‌ನಲ್ಲಿ ಗುಂಪು ಹಂತದಲ್ಲೇ ತಂಡ ನಿರ್ಗಮಿಸಿದ್ದರಿಂದ ಭಾರತದ ವನಿತೆಯರ ಕ್ರಿಕೆಟ್ ಕೌಶಲದ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದವರು ಕಡಿಮೆ. ಆದರೆ, ಕೋಚ್ ತುಷಾರ್‌ ಅರೋಥೆ ಅವರಿಗೆ ಆಟಗಾರ್ತಿಯರ ಮೇಲೆ ಎಂಥದ್ದೋ ನಂಬಿಕೆ. ಹೊರಡುವ ಮುಂಚೆ ಅವರು ತಂಡದ ಎಲ್ಲ ಆಟಗಾರ್ತಿಯರನ್ನೂ ಸಭೆಯೊಂದಕ್ಕೆ ಕರೆದರು. ನಾಯಕಿ ಮಿಥಾಲಿ ಸೇರಿ ಎಲ್ಲರಿಗೂ ‘ಇದ್ದಕ್ಕಿದ್ದಂತೆ ಸಭೆ ಯಾಕೆ’ ಎಂಬ ಪ್ರಶ್ನೆ. ಅಲ್ಲಿ ಅರೋಥೆ ಕೇಳಿದ ಪ್ರಶ್ನೆ: ‘ನಾವು ಇಂಗ್ಲೆಂಡ್‌ಗೆ ಯಾಕೆ ಹೋಗುತ್ತಿದ್ದೇವೆ’. ಹಾಗೆ ಕೇಳಿದ್ದೇ, ಅವರು ನಾಯಕಿಯ ಕಡೆ ನೋಡಿದರು. ‘ವಿಶ್ವಕಪ್‌ ಗೆಲ್ಲೋದಕ್ಕೆ’ ಎಂದು ಮಿಥಾಲಿ ಉತ್ತರ ಕೊಟ್ಟ ತಕ್ಷಣವೇ ಸಭೆ ಮುಗಿಯಿತು. ಬರೀ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು ಹೋಗುತ್ತಿಲ್ಲ ಎಂಬ ಸಂದೇಶವನ್ನು ಎಲ್ಲ ಆಟಗಾರ್ತಿಯರಿಗೂ ದಾಟಿಸುವುದು ಆ ಸಭೆಯ ಉದ್ದೇಶವಾಗಿತ್ತು.

2017ರ ಜುಲೈ 23ರಂದು ಇಂಗ್ಲೆಂಡ್‌ ವಿರುದ್ಧ ಫೈನಲ್ಸ್‌ನಲ್ಲಿ ಭಾರತದ ವನಿತೆಯರು ಬರೀ 9 ರನ್‌ಗಳಿಂದ ಸೋತರು. ಆದರೆ, ವಿಮಾನ ನಿಲ್ದಾಣಕ್ಕೆ ಮರಳಿದಾಗ ಅವರನ್ನು ಎದುರುಗೊಳ್ಳಲು ಸೇರಿದ್ದ ಜನರ ಸಂಖ್ಯೆ ಸಹಜವಾಗಿಯೇ ಹೆಚ್ಚಾಗಿತ್ತು.

ಭಾರತ ವನಿತೆಯರ ಕ್ರಿಕೆಟ್‌ ತಂಡದ ಪುನರುತ್ಥಾನ ಯಾವ ಮಟ್ಟಕ್ಕೆ ಆಯಿತು ಎನ್ನುವುದಕ್ಕೆ ಈ ವಿಮಾನ ನಿಲ್ದಾಣದ ಘಟನಾವಳಿಗಳು ಒಂದು ಬಗೆಯಲ್ಲಿ ರೂಪಕದಂತೆ ಕಾಣುತ್ತವೆ. ಮಿಥಾಲಿ ಹಾಗೂ ಝೂಲನ್‌ ಗೋಸ್ವಾಮಿ ಇಬ್ಬರನ್ನು ಹೊರತುಪಡಿಸಿದರೆ ಮಿಕ್ಕೆಲ್ಲ ಆಟಗಾರ್ತಿಯರಿಗೆ ಅದು ಮೊದಲ ವಿಶ್ವಕಪ್‌ ಆಗಿತ್ತು. ಹೀಗಾಗಿ ಅಂತಿಮ ಹಂತ ಪ್ರವೇಶಿಸಿದ್ದು ಎಲ್ಲರ ಪಾಲಿಗೆ ಒಂದು ರೀತಿಯ ಇಂಧನ.

ಕೊನೆಯ ಪಂದ್ಯದಲ್ಲಿ ವೇದಾ ಕೃಷ್ಣಮೂರ್ತಿ ಒಂದು ಸ್ವೀಪ್‌ಶಾಟ್‌ಗೆ ಯತ್ನಿಸಿ ವಿಕೆಟ್‌ ಕೊಟ್ಟಿದ್ದರು. ‘ಇನ್ನು ನಾನು ಎಂದೂ ಸ್ವೀಪ್‌ ಮಾಡುವುದಿಲ್ಲ’ ಎಂದು ಅವರು ಭಾವಾವೇಶದಲ್ಲಿ ಹೇಳಿದಾಗ, ಅರೋಥೆ ಅವರನ್ನು ಸಂತೈಸಿದ್ದು ವಿಶೇಷವಾಗಿತ್ತು. ‘ಅದು ನಿನ್ನ ಸಾಮರ್ಥ್ಯ. ಒಂದು ಸಲ ಔಟಾದ ಮಾತ್ರಕ್ಕೆ ಶಸ್ತ್ರತ್ಯಾಗ ಮಾಡಕೂಡದು’ ಎಂಬ ಧಾಟಿಯಲ್ಲಿ ಅವರು ಪಾಠ ಹೇಳಿದ್ದರು.

2009ರಿಂದ 2013ರ ಅವಧಿಯಲ್ಲೂ ಭಾರತ ವನಿತೆಯರನ್ನು ಸಾಣೆಗೊಡ್ಡಿದ್ದು ಇದೇ ಅರೋಥೆ.

ತಂಡಕ್ಕೆ ಪಾಠ ಹೇಳಿದ ಮೇಷ್ಟರು ಹೌದಾದರೂ ಪಲ್ಲಟಕ್ಕೆ ಕಾರಣವಾದ ವೇಗವರ್ಧಕ ಅವರೆನ್ನುವುದನ್ನು ಎಷ್ಟೋ ಆಟಗಾರ್ತಿಯರು ಒಪ್ಪಿಕೊಳ್ಳುತ್ತಾರೆ. ಅವರು ಎರಡನೇ ಅವಧಿಗೆ ಕೋಚ್‌ ಆಗುವ ಮೊದಲು ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಮಹಿಳಾ ಕ್ರಿಕೆಟಿಗರು ಅಭ್ಯಾಸ ಮಾಡುತ್ತಿದ್ದರು. ಆ ಕ್ರಮವನ್ನು ಮುರಿದ ಅರೋಥೆ, ಎರಡು ಅವಧಿಗಳಲ್ಲಿ ತರಬೇತಿ ನೀಡತೊಡಗಿದರು. ಬೆಳಿಗ್ಗೆ ಮೂರು ತಾಸು ಒಂದು ಹಂತ. ಮಧ್ಯಾಹ್ನ ಮತ್ತೆ ಅಷ್ಟೇ ಸಮಯದ ಇನ್ನೊಂದು ಸೆಷನ್‌. ಬಿಡುವೇ ಇಲ್ಲದಂಥ ಈ ಅಭ್ಯಾಸದ ಮಾದರಿ ಮೊದಮೊದಲು ಬಹುತೇಕ ಆಟಗಾರ್ತಿಯರಿಗೆ ಇಷ್ಟವಾಗಿರಲಿಲ್ಲ. ಅದನ್ನು ‘ಹಿಟ್ಲರ್‌ ಮಾದರಿ’ ಎಂದೇ ಕೆಲವರು ಗುಸುಗುಸು ಮಾತನಾಡಿದ್ದರು. ಆದರೆ, ಪಂದ್ಯಗಳಲ್ಲಿ ಫಲಿತಾಂಶಗಳು ಮೂಡತೊಡಗಿದಾಗ ಆ ಕ್ರಮ ಒಪ್ಪುವಂಥದ್ದು ಎಂದು ಅನೇಕರಿಗೆ ಅನಿಸತೊಡಗಿತು.

ಇಂಗ್ಲೆಂಡ್‌ನಲ್ಲಿ ಆಟಗಾರ್ತಿಯರನ್ನು ಅರೋಥೆ ನಡೆಸಿಕೊಂಡ ಬಗೆಗೂ ಆಗ ಮೆಚ್ಚುಗೆ ವ್ಯಕ್ತವಾಗಿತ್ತು. ಅವರು ಇಷ್ಟದ ತಿಂಡಿಗಳನ್ನು ಒದಗಿಸುವ ರೆಸ್ಟೊರೆಂಟ್‌ಗಳನ್ನು ಹುಡುಕಿಕೊಟ್ಟರು. ಪುಸ್ತಕದಂಗಡಿಗಳಿಗೆ ಕರೆದುಕೊಂಡು ಹೋಗಿ, ಕೃತಿಗಳನ್ನು ಆರಿಸಿಕೊಳ್ಳಲು ಬಿಟ್ಟರು. ಮಾರ್ಟಿನ್‌ ಲೂಥರ್‌ ಕಿಂಗ್‌, ವಿವೇಕಾನಂದ ಅವರಂಥವರ ಜೀವನಗಾಥೆಗಳಿಂದ ಹಿಡಿದು ಮಡೋನಾ ಬದುಕಿನ ಮೇಲೆ ಬೆಳಕು ಚೆಲ್ಲುವ ಪುಸ್ತಕಗಳವರೆಗೆ ಆಟಗಾರ್ತಿಯರು ತಮ್ಮ ತಮ್ಮ ಅಭಿರುಚಿಗೆ ತಕ್ಕಂಥ ಆಯ್ಕೆ ಪ್ರದರ್ಶಿಸಿದರು. ಆಟದ ನಡುವೆಯೂ ಓದುತ್ತಾ ಕೂರುವ ಮಿಥಾಲಿ ಅನೇಕರ ಪಾಲಿಗೆ ಆಗ ಅಚ್ಚರಿ.

ಕಾಲ ಉರುಳಿತು. ಕೆಲವೇ ತಿಂಗಳ ಹಿಂದೆ ಮಹಿಳೆಯರ ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್‌ನ ಸೆಮಿಫೈನಲ್ಸ್‌ನಲ್ಲಿ ಭಾರತದ ಹೆಣ್ಣುಮಕ್ಕಳು ಇಂಗ್ಲೆಂಡ್ ಎದುರು ಸೋತದ್ದಕ್ಕಿಂತ ಅನುಭವಿ ಮಿಥಾಲಿ ರಾಜ್ ವ್ಯಕ್ತಪಡಿಸಿರುವ ಅಸಮಾಧಾನ ಸದ್ದು ಮಾಡಿತು. ಮಿಥಾಲಿ ಬೆಳಕು ಕಂತುತ್ತಾ ಹೋಯಿತೇ ಎನ್ನುವ ಪ್ರಶ್ನೆ ದೊಡ್ಡದಾಗುವ ಹೊತ್ತಿಗೇ ಸ್ಮೃತಿ ಮಂದಾನ ಎನ್ನುವ ಮಂದಾರತಿ ಈಗ ಬೆಳಗತೊಡಗಿದೆ. ಮಿಥಾಲಿ ಒಂದು ಬಗೆಯಲ್ಲಿ ಪರಂಪರೆ, ಸಾವಧಾನದ ಸಂಕೇತದಂತೆ ಕಂಡರೆ, ಮಂದಾನ ವೇಗದ ವರ್ತಮಾನದ ಪ್ರತಿನಿಧಿಯಂತೆ ಭಾಸವಾಗುತ್ತಾರೆ.

ಅರೋಥೆ ಹಾಕಿಕೊಟ್ಟ ಮಾರ್ಗದಲ್ಲಿ ಕ್ರಿಕೆಟ್‌ ವೇಗ ಹೆಚ್ಚಿಸಿಕೊಂಡ ಭಾರತದ ಹೆಣ್ಣುಮಕ್ಕಳು ಆಮೇಲೆ ಗಡಸು ಮುಖದ ರಮೇಶ್ ಪೊವಾರ್ ಪಾಠಗಳನ್ನು ಕಣ್ಣಿಗೊತ್ತಿಕೊಂಡರು. ಹೊಸ ಚಿಗುರುಗಳಿಗೆ ಇಷ್ಟವಾದ ರಮೇಶ್, ಮಿಥಾಲಿ ತರಹದ ಹಳೆಯ ಬೇರುಗಳಿಗೆ ಒಪ್ಪಿತವಾಗಲಿಲ್ಲ. ಅದಕ್ಕೆ ಅವರದ್ದೇ ವೈಯಕ್ತಿಕ ಕಾರಣಗಳು ಇರುತ್ತವೆ.

ಆದರೆ, ಎರಡು ಮೂರು ವರ್ಷಗಳಿಂದೀಚೆಗೆ ಭಾರತ ತಂಡದ ಮೊದಲ ಏಳು ಬ್ಯಾಟ್ಸ್‌ವುಮನ್‌ಗಳ ಟ್ವೆಂಟಿ–20 ಸ್ಟ್ರೈಕ್‌ರೇಟ್‌ ಸರಾಸರಿ ಶೇ. 15ರಷ್ಟು ಏರಿದೆ. ಸ್ಮೃತಿ ಮಂದಾನಾ, ಜಮಯ್ಯಾ ರಾಡ್ರಿಗ್ಸ್‌, ನಾಯಕಿ ಹರ್ಮನ್‌ಪ್ರೀತ್‌ ಕೌರ್, ವೇದಾ ಕೃಷ್ಣಮೂರ್ತಿ... ಇವರೆಲ್ಲರ ಸ್ಟ್ರೈಕ್‌ರೇಟ್‌ ಮಿಥಾಲಿ ಅವರದ್ದಕ್ಕಿಂತ ಹೆಚ್ಚಾಗಿದೆ. ಮಿಥಾಲಿ ಕೂಡ ಬದಲಾದ ವೇಗಕ್ಕೆ ಹೊಂದಿಕೊಳ್ಳುತ್ತಲೇ ಮೂವತ್ತಾರರ ಪ್ರಾಯದಲ್ಲಿಯೂ 98.19ರಷ್ಟಿದ್ದ ಸ್ಟ್ರೈಕ್‌ರೇಟ್‌ ಸರಾಸರಿಯನ್ನು 105ಕ್ಕೆ ಹಿಗ್ಗಿಸಿಕೊಂಡದ್ದು.

ಸ್ಮೃತಿ ಹಾಗೂ ಮಿಥಾಲಿ ಇಬ್ಬರನ್ನೂ ಎರಡು ಕಾಲಗಳ ಪ್ರತಿನಿಧಿಗಳಾಗಿ ನೋಡೋಣ. ಇಬ್ಬರ ನಡುವಿನ ವಯಸ್ಸಿನ ಅಂತರ 14 ವರ್ಷಗಳು. 2013ರಲ್ಲಿ ಬಾಂಗ್ಲಾದೇಶದ ವಿರುದ್ಧ ಮೊದಲ ಟಿ–20 ಆಡಿದ ಸ್ಮೃತಿ 36 ಎಸೆತಗಳಲ್ಲಿ 39 ರನ್ ಗಳಿಸಿದರು. ಅದರಲ್ಲಿ 4 ಬೌಂಡರಿಗಳಿದ್ದವು. ಮಿಥಾಲಿ 2006ರಲ್ಲಿ ಇಂಗ್ಲೆಂಡ್‌ ವಿರುದ್ಧ ತಮ್ಮ ಮೊದಲ ಅಂತರರಾಷ್ಟ್ರೀಯ ಚುಟುಕು ಕ್ರಿಕೆಟ್‌ ಆಡಿದಾಗ, 28 ರನ್‌ ಗಳಿಸಲು 37 ಎಸೆತಗಳನ್ನು ಎದುರಿಸಿದ್ದರು. ಆ ಇನಿಂಗ್ಸ್‌ನಲ್ಲಿ ಇದ್ದುದು ಒಂದೇ ಬೌಂಡರಿ. ಮೊನ್ನೆ ಮೊನ್ನೆ ನ್ಯೂಜಿಲೆಂಡ್‌ ಎದುರು ಅವರೇ 20 ಎಸೆತಗಳಲ್ಲಿ 24 ರನ್‌ ಜಮೆ ಮಾಡಿದ ತಾಜಾ ಉದಾಹರಣೆಯೂ ಇದೆ. ಆ ಪಂದ್ಯದಲ್ಲಿ ಅವರು ಮೂರು ಬೌಂಡರಿ ಹೊಡೆದರು.

ಸ್ಮೃತಿ ಏಕದಿನ ಪಂದ್ಯಗಳಲ್ಲಿ 83.78ರಷ್ಟು ಸ್ಟ್ರೈಕ್‌ರೇಟ್‌ ಹೊಂದಿದ್ದಾರೆ. ಅವರು 47 ಪಂದ್ಯಗಳಷ್ಟು ಹಳಬರಷ್ಟೆ. ಅವರ ರನ್‌ ಗಳಿಕೆಯ ಸರಾಸರಿ 41.81. ಅವರಿಗಿಂತ ಅನುಭವಿ ಮಿಥಾಲಿ ಸ್ಟ್ರೈಕ್‌ರೇಟ್‌ ಕಡಿಮೆ ಇದ್ದರೂ ಏಕದಿನದ ಪಂದ್ಯಗಳ ರನ್‌ ಗಳಿಕೆಯ ಸರಾಸರಿಯಲ್ಲಿ ಮುಂದು (51.0). ಚುಟುಕು ಕ್ರಿಕೆಟ್‌ನಲ್ಲೂ ಮಿಥಾಲಿ ಅಂಕಿಅಂಶಗಳೇ ಮುಂದಿವೆ. ಅವರ ರನ್‌ ಗಳಿಕೆಯ ಸರಾಸರಿ 37.81 ಇದ್ದರೆ, ಸ್ಮೃತಿ 25.02ರಷ್ಟೇ ಸರಾಸರಿ ಹೊಂದಿದ್ದಾರೆ. 55 ಟಿ–20 ಪಂದ್ಯಗಳನ್ನು ಆಡಿರುವ ಸ್ಮೃತಿಗೂ, 86 ಪಂದ್ಯಗಳ ಅನುಭವಿ ಮಿಥಾಲಿಗೂ ವ್ಯತ್ಯಾಸ ಇರುವುದು ವೇಗದಲ್ಲಿ. ಅದರಿಂದಾಗಿಯೇ ಸ್ಮೃತಿ ಈಗ ಕಣ್ಮಣಿ. ಸಾಂಗ್ಲಿಯ ಈ ಹುಡುಗಿ ಸಹಜವಾಗಿ ಬಲಗೈ ಆಟಗಾರ್ತಿಯಾದರೂ ಪ್ರಜ್ಞಾಪೂರ್ವಕವಾಗಿ ಎಡಗೈ ಬ್ಯಾಟ್ಸ್‌ವುಮನ್‌ ಆದದ್ದೂ ಒಂದು ರೀತಿಯಲ್ಲಿ ವರವೇ.

ಭರತನಾಟ್ಯ ಬದಿಗೊತ್ತಿ, ಕ್ರಿಕೆಟ್‌ ಬ್ಯಾಟನ್ನು ಕಣ್ಣಿಗೊತ್ತಿಕೊಂಡ ಮಿಥಾಲಿ ಪರಂಪರೆಯ ಭಾಗವಾಗಿಯಂತೂ ಸದಾ ನೆನಪಲ್ಲಿ ಉಳಿಯುತ್ತಾರೆ. ಮಿಥಾಲಿಯ ಸಾವಧಾನವನ್ನು ದಕ್ಕಿಸಿಕೊಂಡು ಪವಾರ್‌ ಹೇಳಿಕೊಟ್ಟ ವೇಗದ ಮಂತ್ರವನ್ನೂ ಪಠಿಸಿದರೆ ಸ್ಮೃತಿ ಇನ್ನಷ್ಟು ಬೆಳೆಯುವುದರಲ್ಲಿ ಸಂಶಯವಿಲ್ಲ. ಸ್ಮೃತಿಯನ್ನು ಮಿಂಚು ಎನ್ನುವುದಾದರೆ, ಮಿಥಾಲಿ ಅದನ್ನು ಕಾಣಿಸುವ ದಟ್ಟ ಮೋಡದಂತೆಯೇ ಅಲ್ಲವೇ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !