ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಕ್ರೀಟ್ ಕಾಡಿನ ನಡುವೆ ‘ಮಿಯವಾಕಿ’ ನಗರ ಅರಣ್ಯ

ಮಾಲಿನ್ಯ ತಡೆಗೆ ಸಹಕಾರಿ/ ಕಡಿಮೆ ಜಾಗ, ಹೆಚ್ಚು ಪ್ರಯೋಜನೆ / ಜಪಾನ್ ತಜ್ಞನ ಯಶಸ್ವಿ ಪ್ರಯೋಗ
Last Updated 4 ಜೂನ್ 2019, 20:01 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್ ನಗರಗಳ ಕಾಂಕ್ರೀಟ್ ಕಾಡಿನ ನಡುವೆ 'ಕಿರು ಅರಣ್ಯ’ಬೆಳೆಸುವ ಆಲೋಚನೆಯೊಂದು ಮೊಳಕೆಯೊಡೆದು ಸಸಿಯಾಗಿ, ನಗರ ಅರಣ್ಯವಾಗಿ ಬೆಳೆಯುವ ಪ್ರಯತ್ನ ಸದ್ದಿಲ್ಲದೆ ನಡೆದಿದೆ.

ಬೆಂಗಳೂರಿನಂತಹ ನಗರಗಳಲ್ಲಿ ಕಿರು ಅರಣ್ಯದ ಬಗ್ಗೆ ಮಾತನಾಡಿದರೆ; ಮನೆ ಕಟ್ಟಲು ಪುಟ್ಟದೊಂದು ನಿವೇಶನ ಕೊಳ್ಳುವುದೇ ಸಾಹಸ ಅನ್ನುವ ಸ್ಥಿತಿ ಇರುವಾಗ ಗಿಡ ನೆಟ್ಟು ಕಾಡು ಬೆಳೆಸಲು ಜಾಗ ಎಲ್ಲಿ ಎಂದು ಕೇಳುವವರೇ ಹೆಚ್ಚು. ಆದರೆ ಮನಸ್ಸು ಮಾಡಿದರೆ, ಮನೆ ಅಂಗಳ ಬಿಟ್ಟು ಹೊರಬಂದರೆ ಕಿರು ಅರಣ್ಯ ನಿರ್ಮಿಸಲು ಸಾಧ್ಯವಿದೆ.

ನಗರ ಅರಣ್ಯ ಬೆಳೆಸುವ ಪ್ರಯೋಗಗಳು ನಡೆದಿದ್ದು, ಯಶ ಕಂಡಿವೆ. ಯಾರೂ ಬೇಕಾದರೂ ಈ ಪ್ರಯತ್ನ ನಡೆಸಲು ಸಾಧ್ಯ ಎಂಬುದನ್ನು ಕೆಲ ಸಂಘಟನೆಗಳು ಯಶಸ್ವಿಯಾಗಿ ಮಾಡಿ ತೋರಿಸಿವೆ. ಆ ಮೂಲಕ ಶುದ್ಧ ಗಾಳಿ, ಉತ್ತಮ ಪರಿಸರ ನಿರ್ಮಾಣಕ್ಕೆ ಕೈಜೋಡಿಸಿವೆ.

‘ಸ್ಟೇ ಟ್ರೀಸ್’ ಎಂಬ ಸ್ವಯಂ ಸೇವಾ ಸಂಸ್ಥೆ ಕಿರು ಅರಣ್ಯ ಅಭಿವೃದ್ಧಿ ಯೋಜನೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳ ಪುಟ್ಟ ಜಾಗದಲ್ಲೇ ಕಿರು ಅರಣ್ಯ ನಿರ್ಮಾಣ ಮಾಡುವ ಮೂಲಕ ಪರಿಸರ ಸಂರಕ್ಷಣೆ ಜತೆಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರತವಾಗಿದೆ. ಒಂದು ನಿವೇಶನದಷ್ಟು ಜಾಗ ಸಿಕ್ಕರೂ, ಅಲ್ಲೇ ಅರಣ್ಯ ನಿರ್ಮಿಸಬಹುದು ಎಂಬುದನ್ನು ಸಾಧಿಸಿ ತೋರಿಸಿದೆ.

‘ಮಿಯವಾಕಿ’ ಯೋಜನೆ:ನಗರದಲ್ಲಿ ಕಿರು ಅರಣ್ಯ ಬೆಳೆಸಲು‘ಸ್ಟೇ ಟ್ರೀಸ್’ ಸಂಸ್ಥೆಯು ‘ಮಿಯವಾಕಿ’ ಎಂದೇ ಹೆಸರಾಗಿರುವ ಮಾದರಿಯನ್ನು ಅಳವಡಿಸಿಕೊಂಡಿದೆ. ಈ ವಿಧಾನದಲ್ಲಿ ಕೃತಕ ಅರಣ್ಯ ನಿರ್ಮಿಸಬಹುದು. ಅದು ಅಲ್ಪ ಜಾಗದಲ್ಲೇ ಹೆಚ್ಚು ಗಿಡಗಳನ್ನು ಬೆಳೆಸುವುದೇ ಮಿಯಾವಾಕಿ ಪದ್ಧತಿಯ ಪ್ರಮುಖ ಅಂಶ.

ಮೊದಲಿಗೆ ನಿರ್ದಿಷ್ಟ ಸ್ಥಳವನ್ನು ಆಯ್ಕೆ ಮಾಡಿಕೊಂಡು ಮಣ್ಣಿನ ಫಲವತ್ತತೆ, ಗುಣಾವಗುಣಗಳನ್ನು ಅಧ್ಯಯನ ಮಾಡಲಾಗುತ್ತದೆ. ಸಗಣಿ, ಭತ್ತದ ಸಿಪ್ಪೆ, ಇತರ ಸಾವಯವ ಪದಾರ್ಥಗಳನ್ನು ಮಣ್ಣಿಗೆ ಸೇರಿಸುವ ಮೂಲಕ ಪೋಷಕಾಂಶಗಳ ಕೊರತೆ ನೀಗಿಸಲಾಗುತ್ತದೆ. ಒಂದು ಚದರ ಮೀಟರ್ ವ್ಯಾಪ್ತಿಯಲ್ಲಿ 3–4 ಗುಂಡಿಗಳನ್ನು ತೆಗೆದು ಗಿಡ ನೆಡಲಾಗುತ್ತದೆ.ಆ ಮಣ್ಣಿಗೆ ಹೊಂದುವ ಗಿಡಗಳನ್ನು ಆಯ್ಕೆ ಮಾಡಿಕೊಂಡು ನೆಡುವುದರಿಂದ ಇತರ ಗಿಡಗಳ ಬೆಳವಣಿಗೆಗಳಿಗಿಂತ ಇವು ಹತ್ತು ಪಟ್ಟು ವೇಗವಾಗಿ ಬೆಳೆಯುತ್ತವೆ.

ಸಾಮಾನ್ಯವಾಗಿ ನಾವು, ನೀವೆಲ್ಲ ಸಾಕಷ್ಟು ಅಂತರ ಬಿಟ್ಟು ಗಿಡಗಳನ್ನು ನೆಡುತ್ತೇವೆ. ಆದರೆ ‘ಮಿಯವಾಕಿ’ ಮಾದರಿಯಲ್ಲಿ ಒಂದು ಚದರ ಮೀಟರ್ ವ್ಯಾಪ್ತಿಯಲ್ಲಿ ಮೂರ‍್ನಾಲ್ಕು ಗಿಡಗಳನ್ನು ನೆಟ್ಟು ಬೆಳೆಸಲಾಗುತ್ತದೆ. ಕಡಿಮೆ ಜಾಗದಲ್ಲಿ ಹೆಚ್ಚು ಗಿಡಗಳನ್ನು ಬೆಳೆಸುವುದು ‘ಮಿಯವಾಕಿ’ ವಿಶೇಷ. 30X40 ಅಳತೆಯ ಜಾಗದಲ್ಲಿ ಸಾವಿರ ಗಿಡಗಳನ್ನು ಬೆಳೆಸಿ ಕಿರು ಅರಣ್ಯ ಸೃಷ್ಟಿಸಬಹುದು.

ನಗರ ಅರಣ್ಯ : ಈ ವಿಧಾನದಲ್ಲಿ ಸಾಕಷ್ಟು ಎತ್ತರಕ್ಕೆ ಬೆಳೆಯುವ ಗಿಡಗಳ ಬದಲು, ಮಧ್ಯಮ ಎತ್ತರಕ್ಕೆ ಬೆಳೆಯುವ; ಬೃಹತ್ ಗಾತ್ರದ ಬದಲಿಗೆ ಸಾಧಾರಣದಪ್ಪ ಬೆಳೆಯುವ ಗಿಡಗಳನ್ನು ನಗರ ಪ್ರದೇಶಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇದರಿಂದ ಗಾಳಿ, ಮಳೆಯ ಸಮಯದಲ್ಲಿ ನೆಲ ಕಚ್ಚುವ ಅಪಾಯ ಇರುವುದಿಲ್ಲ. ಒಂದಕ್ಕೊಂದು ಒತ್ತಟ್ಟಿಗೆ ಇರುವುದರಿಂದ ಮತ್ತೊಂದರ ಬೆಳವಣಿಗೆಗೆ ಸಹಕಾರಿಯಾಗುತ್ತವೆ.ಬಿದ್ದ ಮಳೆ ನೀರು ಹಿಡಿದಿಟ್ಟುಕೊಂಡು ಭೂಮಿಯಲ್ಲಿ ಇಂಗುವಂತೆ ಮಾಡುತ್ತವೆ.ಎರಡು ವರ್ಷ ನೀರುಹಾಕಿ ಗಿಡಗಳನ್ನು ಪೋಷಿಸಿದರೆ ಸಾಕು ನಮಗೇ ಗೊತ್ತಿಲ್ಲದಂತೆ ಪುಟ್ಟದೊಂದು ಅರಣ್ಯ ನಿರ್ಮಾಣವಾಗಿರುತ್ತದೆ.

ಬೆಂಗಳೂರಿನ ಕೆ.ಆರ್.ಪುರಂ ಬಳಿ ರೈಲ್ವೆ ಇಲಾಖೆಗೆ ಸೇರಿದ ಜಾಗದಲ್ಲಿ ‘ಮಿಯವಾಕಿ’ ಮಾದರಿಯಲ್ಲಿ ಅರಣ್ಯ ನಿರ್ಮಿಸಲಾಗಿದೆ. 600 ಚದರ ಮೀಟರ್ ವ್ಯಾಪ್ತಿಯಲ್ಲಿ 2 ಸಾವಿರ ಗಿಡಗಳನ್ನು ನೆಟ್ಟು ಬೆಳೆಸಲಾಗಿದೆ. ಇದೊಂದು ಮಾದರಿ ಅರಣ್ಯವಾಗಿ ರೂಪುಗೊಂಡಿದೆ.

‘ಮಿಯವಾಕಿ’ ಮಾದರಿ

ಜಪಾನ್ ದೇಶದ ಮಿಯವಾಕಿ ಎಂಬ ಪರಿಸರ ತಜ್ಞ ನಗರ ಪ್ರದೇಶಗಳಲ್ಲಿ ಕಡಿಮೆ ಜಾಗದಲ್ಲಿಕಿರು ಅರಣ್ಯ ಬೆಳೆಸುತ್ತಿದ್ದರು. ಅತ್ಯಲ್ಪ ಸ್ಥಳದಲ್ಲಿ ನಿರೀಕ್ಷೆಗೂ ಮೀರಿ ಗಿಡಗಳನ್ನು ಬೆಳೆಸಲಾಗಿತ್ತು.ಈ ಮಾದರಿ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಇತರ ನಗರಗಳಿಗೂ ವ್ಯಾಪಿಸಿದೆ. ಕಿರು ಅರಣ್ಯ ನಿರ್ಮಾಣ ಹೆಚ್ಚಾದಂತೆ ‘ಮಿಯವಾಕಿ ವಿಧಾನ’ ಎಂದೇ ಕರೆಯಲಾಗುತ್ತಿದೆ. ಬೆಂಗಳೂರು ನಗರ ಹಾಗೂ ರಾಜ್ಯದ ಇತರೆಡೆಗಳಲ್ಲಿ ಇದೇ ವಿಧಾನದ ಮೂಲಕ ಅರಣ್ಯ ಬೆಳೆಸಲಾಗಿದೆ. ದೇಶದ ಇತರ ನಗರಗಳಲ್ಲೂ ‘ಮಿಯವಾಕಿ’ ಅರಣ್ಯ ನಿರ್ಮಾಣ ಕಂಡಿವೆ ಎನ್ನುತ್ತಾರೆ ಸ್ಟೇ ಟ್ರೀಸ್‌ನ ದುರ್ಗೇಶ್.

ಮಣ್ಣಿಗೆ ಹೊಂದಿಕೊಂಡು ವೇಗವಾಗಿ ಬೆಳೆಯುವ ಸ್ಥಳೀಯ ಜಾತಿಯ ಗಿಡಗಳನ್ನೇ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

– ದುರ್ಗೇಶ್ ಅಗ್ರಹಾರಿಸ್ಟೇ ಟ್ರೀಸ್, ರಾಜ್ಯ ಉಸ್ತುವಾರಿ

***

ಮಿಯವಾಕಿ ಮಾದರಿಯಲ್ಲಿ ಕಡಿಮೆ ಜಾಗದಲ್ಲಿ ಹೆಚ್ಚು ಗಿಡ ಬೆಳೆಸುವ ಬಗ್ಗೆ ಮನದಟ್ಟಾಯಿತು ಶ್ರೀನಿವಾಸನ್.

–ರೈಲ್ವೆ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT