‘ಸೀತಾರಾಮ ಕಲ್ಯಾಣ’ ವಿಶೇಷ ಪ್ರದರ್ಶನದ ವೇಳೆ: ಶಾಸಕ–ಡಿಸಿಪಿ ನಡುವೆ ವಾಕ್ಸಮರ

7
ಲಿಫ್ಟ್‌ನಲ್ಲಿ ಜಗಳ

‘ಸೀತಾರಾಮ ಕಲ್ಯಾಣ’ ವಿಶೇಷ ಪ್ರದರ್ಶನದ ವೇಳೆ: ಶಾಸಕ–ಡಿಸಿಪಿ ನಡುವೆ ವಾಕ್ಸಮರ

Published:
Updated:

ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ನಟಿಸಿರುವ ‘ಸೀತಾರಾಮ ಕಲ್ಯಾಣ’ ಸಿನಿಮಾದ ಪ್ರೀಮಿಯರ್ ಶೋ ವೇಳೆ ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ ಹಾಗೂ ಕೇಂದ್ರ ವಿಭಾಗದ ಡಿಸಿಪಿ ಡಿ.ದೇವರಾಜ್ ನಡುವೆ ಬಿರುಸಿನ ಮಾತಿನ ಚಕಮಕಿ ನಡೆದಿದೆ.

ಒರಾಯನ್ ಮಾಲ್‌ನಲ್ಲಿ ಗುರುವಾರ ರಾತ್ರಿ ಈ ಪ್ರಸಂಗ ಜರುಗಿದ್ದು, ಜಗಳಕ್ಕೆ ನಿಖರ ಕಾರಣ ಗೊತ್ತಾಗಿಲ್ಲ. ಲಿಫ್ಟ್‌ನಲ್ಲಿ ವಾಗ್ವಾದ ಶುರುವಾಗಿದ್ದು, ಕ್ರಮೇಣ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಸಮ್ಮುಖದಲ್ಲೇ ಇಬ್ಬರೂ ಬೈದಾಡಿಕೊಂಡಿದ್ದಾರೆ. ಕೊನೆಗೆ, ಕೆಲ ಜೆಡಿಎಸ್‌ ಮುಖಂಡರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

‘ಶಾಸಕರು ಹಳೆ ವಿಚಾರಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಎಲ್ಲೆ ಮೀರಿ ವರ್ತಿಸಿದರು’ ಎಂದು ದೇವರಾಜ್ ಪ್ರತಿಕ್ರಿಯೆ ನೀಡಿದ್ದರೆ, ‘ಡಿಸಿಪಿ ನನಗೆ ಶೂಟ್ ಮಾಡುವುದಾಗಿ ಬೆದರಿಸಿದರು’ ಎಂದು ಸುರೇಶ್‌ ಗೌಡ ಆರೋಪಿಸಿದ್ದಾರೆ. ಕುಮಾರಸ್ವಾಮಿ ಅವರು ರಾತ್ರಿಯೇ ಇಬ್ಬರನ್ನೂ ಪ್ರತ್ಯೇಕವಾಗಿ ಕರೆಸಿ ಮಾತನಾಡುವ ಮೂಲಕ ಸಮಾಧಾನಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

‘ಏನ್ ಗುರಾಯಿಸ್ತೀಯಾ’: ಕುಮಾರಸ್ವಾಮಿ ಆಯೋಜಿಸಿದ್ದ ಪ್ರೀಮಿಯರ್ ಶೋನಲ್ಲಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಸೇರಿದಂತೆ ವಿವಿಧ ಪಕ್ಷಗಳ ಹಲವು ಮುಖಂಡರು ಹಾಗೂ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು.

ಶೋ ಮುಗಿಸಿಕೊಂಡು ಲಿಫ್ಟ್‌ನಲ್ಲಿ ಮರಳುವಾಗ, ‘ಏನ್ ಗುರಾಯಿಸ್ತೀಯಾ’ ಎಂದು ಶಾಸಕರು ಡಿಸಿಪಿಗೆ ದಬಾಯಿಸಿದ್ದಾರೆ. ಅದಕ್ಕೆ ಪ್ರತಿಯಾಗಿ, ‘ನೀನೇನು ಗುರಾಯಿಸೋದು’ ಎಂದು ದೇವರಾಜ್ ಸಹ ಪ್ರಶ್ನಿಸಿದ್ದಾರೆ. ಕ್ರಮೇಣ ಅವರಿಬ್ಬರ ನಡುವೆ ಏರು ದನಿಯಲ್ಲಿ ಮಾತುಕತೆ ನಡೆದಿದೆ. ಈ ಸಂದರ್ಭದಲ್ಲಿ ಕುಮಾರಸ್ವಾಮಿ ಇರಲಿಲ್ಲ. ಐದು ನಿಮಿಷ ಮೊದಲೇ ಅವರು ಹೊರಟು ಹೋಗಿದ್ದರು ಎಂದು ಗೊತ್ತಾಗಿದೆ.

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !