ಹೈಕೋರ್ಟ್‌ಗೆ ಶಾಸಕ ಕುಮಠಳ್ಳಿ ಹಾಜರು: ಅರ್ಜಿ ವಜಾ

ಶುಕ್ರವಾರ, ಮೇ 24, 2019
23 °C

ಹೈಕೋರ್ಟ್‌ಗೆ ಶಾಸಕ ಕುಮಠಳ್ಳಿ ಹಾಜರು: ಅರ್ಜಿ ವಜಾ

Published:
Updated:
Prajavani

ಬೆಂಗಳೂರು: ‘ನನ್ನನ್ನು ಯಾರೂ ಯಾವತ್ತೂ ಅಪಹರಣ ಮಾಡಿಲ್ಲ ಹಾಗೂ ನಾನು ಯಾರ ಬಂಧನದಲ್ಲೂ ಇಲ್ಲ’ ಎಂದು ಅಥಣಿ ವಿಧಾನಸಭಾ ಕ್ಷೇತ್ರದ ಶಾಸಕ ಮಹೇಶ್ ಕುಮಠಳ್ಳಿ ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.

‘ಕುಮಠಳ್ಳಿ ನಾಪತ್ತೆಯಾಗಿದ್ದಾರೆ ಅವರನ್ನು ಹುಡುಕಿಕೊಡಲು ಪೊಲೀಸರಿಗೆ ನಿರ್ದೇಶಿಸಬೇಕು’ ಎಂದು ಕೋರಿರುವ ಹೇಬಿಯಸ್ ಕಾರ್ಪಸ್ ಅರ್ಜಿಗೆ ಸಂಬಂಧಿಸಿದಂತೆ ಅವರು ಬುಧವಾರ ಖುದ್ದು ಹೈಕೋರ್ಟ್‌ಗೆ ಹಾಜರಾದರು.

ಈ ಕುರಿತ ಅರ್ಜಿಯನ್ನು ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಮತ್ತು ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಕುಮಠಳ್ಳಿ ಪರ ಹಾಜರಾದ ವಕೀಲ ಡಿ.ಎಸ್.ಜೀವನ್‌ ಕುಮಾರ್‌ ಪ್ರಮಾಣ ಪತ್ರ ಸಲ್ಲಿಸಿ, ‘ಹೇಬಿಯಸ್‌ ಕಾರ್ಪಸ್ ಅರ್ಜಿಯಲ್ಲಿರುವ ಅಂಶಗಳು ಸತ್ಯಕ್ಕೆ ದೂರವಾಗಿವೆ ಮತ್ತು ಕುಮಠಳ್ಳಿ ಅವರ ಮನಸ್ಸಿಗೆ ಅತೀವ ನೋವನ್ನುಂಟು ಮಾಡಿವೆ’ ಎಂದರು.

ರಾಜ್ಯ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ, ‘ಅರ್ಜಿದಾರರು ಫೆಬ್ರುವರಿ 7ರಂದು ಅಥಣಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದೇ ವೇಗದಲ್ಲಿ 8ರಂದು ಹೈಕೋರ್ಟ್ ಕದ ಬಡಿದು ಹೇಬಿಯಸ್‌ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. ಇದು ಮೇಲ್ನೋಟಕ್ಕೇ ಪ್ರಚಾರಪ್ರಿಯ ಅರ್ಜಿ ಎಂಬುದು ಅರಿವಾಗುತ್ತದೆ’ ಎಂದು ಆಕ್ಷೇಪಿಸಿದರು.

‘ಅರ್ಜಿದಾರರು ವೃಥಾ ಕೋರ್ಟ್ ಸಮಯವನ್ನು ಹಾಳು ಮಾಡಿದ್ದಾರೆ. ಆದ್ದರಿಂದ ಅವರಿಗೆ ಕಾನೂನು ರೀತ್ಯಾ ಭಾರಿ ದಂಡ ವಿಧಿಸಲೇಬೇಕು’ ಎಂದರು.

ಈ ಮನವಿ ಪರಿಗಣಿಸಿದ ನ್ಯಾಯಪೀಠ, ಈ ಕುರಿತಂತೆ 27ರಂದು ಸೂಕ್ತ ಆದೇಶ ಪ್ರಕಟಿಸುವುದಾಗಿ ಹೇಳಿತು. ಅಂತೆಯೇ ಹೇಬಿಯಸ್‌ ಕಾರ್ಪಸ್‌ ಅರ್ಜಿ ವಜಾ ಮಾಡಿ ಆದೇಶಿಸಿತು.

‘ಕುಮಠಳ್ಳಿ ಅವರನ್ನು ಶಾಸಕ ರಮೇಶ ಜಾರಕಿಹೊಳಿ ಬಂಧನದಲ್ಲಿ ಇರಿಸಿ ಕೊಂಡಿದ್ದಾರೆ. ಕೂಡಲೇ ಪತ್ತೆ ಹಚ್ಚಿ ಕೋರ್ಟ್‌ ಮುಂದೆ ಹಾಜರುಪಡಿಸಲು ನಿರ್ದೇಶಿಸಬೇಕು’ ಎಂದು ಕೋರಿ ಅಥಣಿಯ ವಕೀಲ ಹಾಗೂ ಯುವ ಕಾಂಗ್ರೆಸ್ ಕಾರ್ಯದರ್ಶಿ ಪ್ರಮೋದ ದಯಾನಂದ ಹಿರೇಮನಿ ಈ ಅರ್ಜಿ ಸಲ್ಲಿಸಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !