ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ಉರುಳಿಸಲು ಬಿಜೆಪಿ ತಯಾರಿ,ಶಾಸಕರಿಗೆ ₹10 ಕೋಟಿ ಆಮಿಷ: ಕುಮಾರಸ್ವಾಮಿ ಆರೋಪ

Last Updated 18 ಜೂನ್ 2019, 20:31 IST
ಅಕ್ಷರ ಗಾತ್ರ

ಬೆಂಗಳೂರು/ರಾಮನಗರ: ‘ನಮ್ಮ ಪಕ್ಷದ ಶಾಸಕರಿಗೆ ತಲಾ ₹10 ಕೋಟಿ ಆಮಿಷ ಒಡ್ಡುತ್ತಿರುವ ಬಿಜೆಪಿ ನಾಯಕರು ಸರ್ಕಾರ ಉರುಳಿಸುವ ಯತ್ನ ಮಾಡುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.

ಚನ್ನಪಟ್ಟಣ ತಾಲ್ಲೂಕಿನ ಬೇವೂರು ಗ್ರಾಮದಲ್ಲಿ ಮಂಗಳವಾರ ‘ಜನತಾ ದರ್ಶನ’ದಲ್ಲಿ ಮಾತನಾಡಿದ ಅವರು,‘ಸೋಮವಾರ ರಾತ್ರಿ 11ರ ಸುಮಾರಿಗೆ ನಮ್ಮ ಶಾಸಕರೊಬ್ಬರು ಕರೆ ಮಾಡಿದ್ದರು. ಜೆಡಿಎಸ್‌–ಕಾಂಗ್ರೆಸ್‌ನ 8–10 ಶಾಸಕರು ರಾಜೀನಾಮೆ ನೀಡಲು ಸಿದ್ಧವಾಗಿದ್ದಾರೆ. ನಾಳೆಯೇ ಸರ್ಕಾರ ಉರುಳಲಿದೆ. ನೀವು ನಮ್ಮ ಕಡೆ ಬಂದಲ್ಲಿ ₹10 ಕೋಟಿ ನೀಡುತ್ತೇವೆ ಎಂದು ಮುಖಂಡರೊಬ್ಬರು ಅವರಿಗೆ ಆಮಿಷ ಒಡ್ಡಿದರಂತೆ’ ಎಂದು ಹೇಳಿದರು.

‘ನಮ್ಮ ಶಾಸಕರಿಗೆ ಆಮಿಷ ಒಡ್ಡುವ ಕೆಲಸವನ್ನು ಬಿಜೆಪಿಯವರು ಈಗಲೂ ಮುಂದುವರಿಸಿದ್ದಾರೆ. ಹಣದ ಥೈಲಿ ಮುಂದಿಟ್ಟುಕೊಂಡು ಸರ್ಕಾರ ತೆಗೆಯಲು ಕುಳಿತಿದ್ದಾರೆ’ ಎಂದು ಅವರು ಆಪಾದಿಸಿದರು.

ಆಪರೇಷನ್‌ ಶುರು?: ಮುಖ್ಯಮಂತ್ರಿ ಈ ಹೇಳಿಕೆ ಬೆನ್ನಲ್ಲೇ, ‘ಮತ್ತೆ ಆಪರೇಷನ್ ಕಮಲ ಶುರುವಾಗಿದೆಯೇ’ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ. ಜುಲೈನಲ್ಲಿ ನಡೆಯಲಿರುವ ಅಧಿವೇಶನಕ್ಕೆ ಮುನ್ನವೇ10ಕ್ಕೂ ಹೆಚ್ಚು ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ. ಆದರೆ, ಅತೃಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಶಾಸಕರು, ಇದನ್ನು ಅಲ್ಲಗಳೆದಿದ್ದಾರೆ.

‘ಸಂಪುಟ ವಿಸ್ತರಣೆ ಬಳಿಕ ಅತೃಪ್ತಿ ಭುಗಿಲೇಳಲಿದ್ದು, ಅದೇ ದಿನ ಸರ್ಕಾರ ಪತನವಾಗಲಿದೆ’ ಎಂದು ವಿಸ್ತರಣೆಗೆ ಮುನ್ನ ಬಿಜೆಪಿ ನಾಯಕರು ಹೇಳುತ್ತಿದ್ದರು. ಅತೃಪ್ತ ಶಾಸಕರು ಒಂದೆರಡು ಸಭೆ ಮಾಡಿದ್ದು ಬಿಟ್ಟರೆ ಯಾವುದೇ ಬೆಳವಣಿಗೆ ನಡೆದಿಲ್ಲ.

ವಿಸ್ತರಣೆ ನಡೆದ ಮರುದಿನವೇ ಅತೃಪ್ತ ಶಾಸಕರಾದ ರಮೇಶ ಜಾರಕಿಹೊಳಿ, ಪ್ರತಾಪಗೌಡ ಪಾಟೀಲ ಹಾಗೂ ಮಹೇಶ ಕುಮಠಳ್ಳಿ ಸಭೆ ನಡೆಸಿದ್ದರು. ‘ಅಗತ್ಯ ಸಂಖ್ಯಾಬಲ ಕ್ರೋಡೀಕರಣವಾಗದೇ ಇರುವುದರಿಂದ ಈಗ ರಾಜೀನಾಮೆ ಕೊಟ್ಟರೆ ಪ್ರಯೋಜನವಿಲ್ಲ. ಬಿಜೆಪಿಯ ವರಿಷ್ಠರು ಕೂಡ ಸರ್ಕಾರ ಪತನಕ್ಕೆ ಉತ್ಸುಕತೆ ಹೊಂದಿಲ್ಲ. ಸದ್ಯಕ್ಕೆ ಯಾವುದೇ ತೀರ್ಮಾನ ಬೇಡ’ ಎಂಬ ನಿರ್ಣಯಕ್ಕೆ ಬಂದಿದ್ದರು.

ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಕಾಂಗ್ರೆಸ್‌ ನಾಯಕರ ವಿರುದ್ಧ ಕಿಡಿಕಾರಿದ್ದ ಶಾಸಕರಾದ ಬಿ.ಸಿ. ಪಾಟೀಲ ಹಾಗೂ ಕೆ. ಸುಧಾಕರ್‌ ಇನ್ನೂ ಕೆಲವು ಅತೃಪ್ತರ ಜತೆ ಮಂಗಳವಾರ ಸಭೆ ನಡೆಸಿದರು ಎಂಬ ಸುದ್ದಿ ಹರಿದಾಡಿದೆ. ‘ಯಾವುದೇ ಸಭೆ ನಡೆಸಿಲ್ಲ’ ಎಂದು ಪಾಟೀಲ ಅವರು ಸ್ಪಷ್ಟ ಪಡಿಸಿದ್ದಾರೆ.

ಒಂದು ವೇಳೆ ಶಾಸಕರ ರಾಜೀನಾಮೆ ಪರ್ವ ಆರಂಭವಾದರೆ ಬಿ.ಸಿ. ಪಾಟೀಲ ಸೇರಿದಂತೆ ಕೆಲವರು ಶಾಸಕ ಸ್ಥಾನ ತ್ಯಜಿಸುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.

ಮಧ್ಯಂತರ ಚುನಾವಣೆ: ಗೌಡರ ಸುಳಿವು

‘ವಿಧಾನಸಭೆಗೆ ಮಧ್ಯಂತರ ಚುನಾವಣೆ ಯಾವಾಗ ಬೇಕಾದರೂ ಎದುರಾಗುವ ಸಾಧ್ಯತೆಗಳಿದ್ದು, ಅದಕ್ಕೆ ಸಿದ್ಧರಾಗಿರಿ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಪಕ್ಷದ ಸಚಿವರು, ಶಾಸಕರಿಗೆ ಸಲಹೆ ನೀಡಿದ್ದಾರೆ.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಚ್.ವಿಶ್ವನಾಥ್ ಅವರನ್ನು ಮಂಗಳವಾರ ತಮ್ಮ ನಿವಾಸಕ್ಕೆ ಕರೆಸಿಕೊಂಡ ಗೌಡರು, ರಾಜೀನಾಮೆ ವಾಪಸ್ ಪಡೆಯುವ ಬಗ್ಗೆ ಮನವೊಲಿಸುವ ಯತ್ನ ಮಾಡಿದರು.

ಈ ವೇಳೆ ಪ್ರಾಸಂಗಿಕವಾಗಿ ಮಾತನಾಡಿದ ಅವರು, ‘ರಾಜ್ಯದ ರಾಜಕೀಯ ಪರಿಸ್ಥಿತಿ ಸೂಕ್ಷ್ಮವಾಗಿದೆ. ಚುನಾವಣೆ ಯಾವ ಸಮಯದಲ್ಲಾದರೂ ಬರಬಹುದು. ನೀವು ರಾಜೀನಾಮೆಯನ್ನು ವಾಪಸ್ ಪಡೆದು, ಪಕ್ಷ ಮುನ್ನಡೆಸಬೇಕು. ನಿಮ್ಮ ನೇತೃತ್ವದಲ್ಲೇ ಚುನಾವಣೆ ಎದುರಿಸೋಣ ಎಂದು ತಿಳಿಹೇಳಿದರು’ ಎನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ವಿಶ್ವನಾಥ್‌, ‘ಸದ್ಯ ಏನನ್ನೂ ಹೇಳಲಾರೆ. ನಿರ್ಧಾರ ಪರಿಶೀಲಿಸಲು ಸ್ವಲ್ಪ ಸಮಯ ಕೊಡಿ’ ಎಂದು ಕೇಳಿದರು.

ವಿಶ್ವನಾಥ್ ಅಸಮಾಧಾನಕ್ಕೆ ಕಾರಣರಾಗಿರುವ ಸಚಿವ ಸಾ.ರಾ. ಮಹೇಶ್ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಕೂಡ ಸಭೆಯಲ್ಲಿ ಇದ್ದರು.

* ಶಾಸಕರಿಗೆ ಆಮಿಷ ಒಡ್ಡುವ ಪ್ರಯತ್ನಗಳು ನಡೆಯುತ್ತಲೇ ಇವೆ. ಮುಂದಿನ ನಾಲ್ಕು ವರ್ಷವೂ ಸರ್ಕಾರ ಸುಭದ್ರವಾಗಿ ಉಳಿಯಲಿದೆ

ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

* ಶಾಸಕರಿಗೆ 10–15 ಕೋಟಿ ಆಮಿಷವೊಡ್ಡಿದ್ದೇವೆ ಎಂಬುದು ಸುಳ್ಳು. ಶಾಸಕರನ್ನು ಹಿಡಿದಿಡಲು ಈ ರೀತಿಯ ತಂತ್ರಗಳನ್ನು ಕುಮಾರಸ್ವಾಮಿ ಬಳಸುತ್ತಿದ್ದಾರೆ

–ಎನ್.ರವಿಕುಮಾರ್,ರಾಜ್ಯ ಪ್ರಧಾನ ಕಾರ್ಯದರ್ಶಿ, ಬಿಜೆಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT