ಬುಧವಾರ, ಜೂನ್ 29, 2022
25 °C

ಸಿದ್ದರಾಮಯ್ಯ ಹೊಗಳಿದ್ದಕ್ಕೆ ಅನುದಾನ ನೀಡಲಿಲ್ಲ!: ಸುಧಾಕರ್ ಗಂಭೀರ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರನ್ನು ಬಜೆಟ್‌ ಪೂರ್ವದಲ್ಲಿ ಭೇಟಿ ಮಾಡಲು ಹೋದರೆ ಅವರು ನನ್ನನ್ನು ಸಹದ್ಯೋಗಿ ಎಂಬ ಸೌಜನ್ಯ ಕೂಡ ತೋರದೆ ಕನಿಷ್ಠವಾಗಿ ನಡೆಸಿಕೊಂಡರು. ಸಿದ್ದರಾಮಯ್ಯನವರನ್ನು ಬಹಳ ಹೊಗಳುತ್ತಿದ್ದೀರಿ ಹೊಗಳಿ. ಅವರು ಏನು ಮಾಡಿದ್ದಾರೆ ನನಗೆ ಗೊತ್ತಿದೆ. ಯಾವುದಕ್ಕೂ ಅನುದಾನ ಕೊಡುವುದಿಲ್ಲ ಎಂದರು’ ಎಂದು ಅನರ್ಹಗೊಂಡಿರುವ ಶಾಸಕ ಡಾ.ಕೆ.ಸುಧಾಕರ್ ಆರೋಪ ಮಾಡಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕುಮಾರಸ್ವಾಮಿ ಅವರ ಅಂದಿನ ವರ್ತನೆ ನನಗೆ ಬಹಳಷ್ಟು ಆಘಾತ ಉಂಟು ಮಾಡಿತ್ತು. ರಾಜೀನಾಮೆ ನಿರ್ಧಾರಕ್ಕೆ ಬಂದಿದ್ದೆ. ಸಿದ್ದರಾಮಯ್ಯನವರನ್ನು ಭೇಟಿಯಾಗಿ ನಡೆದ ಘಟನೆ ಬಗ್ಗೆ ಹೇಳಿದೆ. ಆಗ ಅವರು ನನಗೂ ಹೀಗೆಲ್ಲ ಆಗುತ್ತಿದೆ. ಲೋಕಸಭೆ ಚುನಾವಣೆವರೆಗೂ ತಡೆದುಕೊ. ಆ ಮೇಲೆ ಇಡೋದು ಬೇಡ. ಬದಲಾಯಿಸೋಣ ಎಂದಿದ್ದರು’ ಎಂದು ಹೇಳಿದರು.

‘14 ತಿಂಗಳ ಇದ್ದ ಸಮ್ಮಿಶ್ರ ಸರ್ಕಾರದಲ್ಲಿ ನಮ್ಮ ಭಾಗದ ನೀರಾವರಿ ವಿಚಾರದಲ್ಲಿ ಪ್ರಾಮಾಣಿಕತೆ, ದಕ್ಷತೆಯಿಂದ ಕೆಲಸ ನಡೆಯಲಿಲ್ಲ. ಬಜೆಟ್‌ನಲ್ಲಿ ನನ್ನ ಕ್ಷೇತ್ರಕ್ಕೆ ಒಂದೇ ಒಂದು ರೂಪಾಯಿ ಅನುದಾನ ಕೊಡಲಿಲ್ಲ. ಆದರೆ ಜಿಲ್ಲಾ ಕೇಂದ್ರವಲ್ಲದ ಕನಕಪುರಕ್ಕೆ ಬಜೆಟ್‌ನಲ್ಲಿ ಅನುಮೋದನೆಯಾಗದೆ ಇದ್ದರೂ ಒಂದೇ ಬಾರಿಗೆ ₹450 ಕೋಟಿ ಅನುದಾನ ಬಿಡುಗಡೆ ಮಾಡಿದರು. ಆಡಳಿತಾತ್ಮಕ ಅನುಮೋದನೆ ಇಲ್ಲದೆ ಆ ಕಾಮಗಾರಿಗಳಿಗೆ ಟೆಂಡರ್ ಕರೆದರು. ಏಕೆ ಈ ಮಲತಾಯಿ ಧೋರಣೆ’ ಎಂದು ಪ್ರಶ್ನಿಸಿದರು.

‘ಸಿದ್ದರಾಮಯ್ಯನವರಿಗೆ ನನ್ನ ಅರ್ಹತೆ ನೋಡಿ ಮಂತ್ರಿ ಸ್ಥಾನದ ಅವಕಾಶ ಕೊಡಿ ಎಂದು ಕೇಳಿದೆ. ನೋಡೋಣ ಎಂದರು. ಆ ಬಳಿಕ ನಾನು ಎಂದೂ ಅವರನ್ನು ಅಧಿಕಾರ ಕೇಳಿಲ್ಲ. ಮಂಡಳಿ ಅಧ್ಯಕ್ಷ ಸ್ಥಾನವನ್ನು ಕೂಡ ನಾನು ಕೇಳಿರಲಿಲ್ಲ. ಆದರೆ ಕಾಂಗ್ರೆಸ್‌ ಹೈಮಾಂಡ್ ನಿಗಮ ಮಂಡಳಿಗಳ ನೇಮಕಕ್ಕೆ 22 ಶಾಸಕರ ಪಟ್ಟಿ ನೀಡಿದರೆ ಆ ಪೈಕಿ ಕುಮಾರಸ್ವಾಮಿ ಅವರು ನನಗೆ ಮಾತ್ರ ನೇಮಕ ಮಾಡಲಿಲ್ಲ’ ಎಂದು ತಿಳಿಸಿದರು.

‘ಎರಡು ತಿಂಗಳ ಹಿಂದೆ ಕುಮಾರಸ್ವಾಮಿ ಅವರು ಆ ವಿಚಾರವಾಗಿ ನನ್ನದು ತಪ್ಪಾಯಿತು. ನಿನಗೆ ಅಧ್ಯಕ್ಷ ಸ್ಥಾನ ಕೊಡಬೇಕಿತ್ತು. ಆದರೆ ಸ್ಪೀಕರ್ ರಮೇಶ್‌ಕುಮಾರ್ ಅವರು ಸುಧಾಕರ್‌ಗೆ ಮಂಡಳಿ ಅಧ್ಯಕ್ಷ ಸ್ಥಾನ ಕೊಡಬೇಡಿ ಎಂದರು. ನನಗೆ ಸದನದಲ್ಲಿ ತೊಂದರೆ ಮಾಡುತ್ತಾರೆ ಎಂಬ ಕಾರಣಕ್ಕೆ ಕೊಡಲಿಲ್ಲ. ನನಗೆ ಮಾತ್ರವಲ್ಲ. ಸಿದ್ದರಾಮಯ್ಯ ಸೇರಿದಂತೆ ಅನೇಕ ನಾಯಕರಿಗೆ ಅವರು ಈ ಮಾತು ಹೇಳಿದ್ದಾರೆ ಎಂದರು. ಅವರ ಜತೆಗೆ ಶಿವಶಂಕರರೆಡ್ಡಿ ಕೂಡ ಈ ಪಿತೂರಿ ಮಾಡಿದ್ದಾರೆ’ ಎಂದು ಕಿಡಿಕಾರಿದರು.

‘ರಾಜೀನಾಮೆ ಕೊಟ್ಟ ಶಾಸಕರು ಹದ್ದುಗಳಂತೆ ಬೆನ್ನಿಗೆ ಚುಚ್ಚಿದರು ಎಂದು ರಮೇಶ್‌ ಕುಮಾರ್ ಅವರು ಸದನದಲ್ಲಿ ಹೇಳಿದರು. ಆದರೆ, ದೇವರಾಜ ಅರಸು ಅವರು ನಿಮ್ಮನ್ನು ಗುರುತಿಸಿ ಆಯ್ಕೆ ಮಾಡಿ ಜತೆಯಲ್ಲಿ ಇಟ್ಟುಕೊಂಡರು. ಆದರೆ ನೀವು ಕಷ್ಟಕಾಲದಲ್ಲಿ ಅವರನ್ನು ಬಿಟ್ಟು ಹೆಗಡೆಯವರ ಬಳಿ ಏಕೆ ಹೋದೀರಿ? ಮತ್ತೆ ಹೆಗಡೆಯವರಿಂದ ದೇವೇಗೌಡರ ಬಳಿ ಏಕೆ ಹೋದೀರಿ? ನೀವು ಯಾವ ಘನಕಾರ್ಯಕ್ಕಾಗಿ ಪಕ್ಷಾಂತರ ಮಾಡಿದ್ದೀರಿ ಹೇಳಿ. ನಾವು ಆ ದಾರಿಯಲ್ಲಿ ಹೋಗಲು ಪ್ರಯತ್ನಿಸುತ್ತೇವೆ’ ಎಂದರು.

‘ರಮೇಶ್‌ ಕುಮಾರ್ ಅವರು ಇವತ್ತು ನೈತಿಕತೆ, ಪಾರದರ್ಶಕತೆ, ಧರ್ಮ ಬಗ್ಗೆ ಸತ್ಯಹರಿಶ್ಚಂದ್ರರಂತೆ ಮಾತನಾಡುತ್ತಾರೆ. ಅವರನ್ನು ಕಾಂಗ್ರೆಸ್‌ಗೆ ಕರೆದುಕೊಂಡು ಬಂದವರು ಯಾರು? ಮೊದಲಿನಿಂದಲೂ ಅವರು ಕಾಂಗ್ರೆಸ್‌ನಲ್ಲಿ ಇದ್ದರಾ? ನಿಮಗೆ ಆಗದೆ ಇರುವ (ಕೆ.ಎಚ್.ಮುನಿಯಪ್ಪ) ಒಬ್ಬ ನಾಯಕರ ಜತೆ ಇರುವುದನ್ನು ಸಹಿಸದೆ ಇಷ್ಟು ಕ್ರೂರತನ ಪ್ರದರ್ಶಿಸುವವರಿಗೆ ಯಾವ ಮೌಲ್ಯಗಳಿವೆ’ ಎಂದು ಕೇಳಿದರು.

‘ರಮೇಶ್‌ ಕುಮಾರ್ ಅವರು 2013 ರಿಂದ 16ರ ವರೆಗೆ ಸದನದಲ್ಲಿ ಏನು ಹೇಳಿದ್ದಾರೆ, ಯಾವ ಪದ ಬಳಕೆ ಮಾಡಿದ್ದಾರೆ ನನಗೆ ಗೊತ್ತಿದೆ. ಸದನದಲ್ಲಿ ಪ್ರತಿಪಕ್ಷದವರಿಗಿಂತ ಹೆಚ್ಚು ಟೀಕೆ ಮಾಡುತ್ತಿದ್ದವರು ಅವರು. ಮಂತ್ರಿ ಆಗುವವರೆಗೂ ಅಧಿಕೃತ ವಿರೋಧ ಪಕ್ಷ ಇವರೇ ಆಗಿದ್ದರು. ಮಂತ್ರಿಯಾದ ತಕ್ಷಣ ಮೌನವಾದರು. ಅಧಿಕಾರ ಕೊಟ್ಟರೆ ಒಂದು ರೀತಿ, ಕೊಡದಿದ್ದರೆ ಇನ್ನೊಂದು ರೀತಿ’ ಎಂದು ವಾಗ್ದಾಳಿ ನಡೆಸಿದರು.

‘ಸಭಾಧ್ಯಕ್ಷರು ಯಾವ ಪಕ್ಷಕ್ಕೆ ಸೇರುವುದಿಲ್ಲ. ಆದರೆ ರಮೇಶ್‌ ಕುಮಾರ್ ಅವರು ಎಲ್ಲಿ ಸುಧಾಕರ್ ಕಾಂಗ್ರೆಸ್‌ಗೆ ವಾಪಾಸ್ ಆಗುತ್ತಾನೋ ಎಂಬ ಕಾರಣಕ್ಕೆ ಸದನದಲ್ಲಿ ಸಿದ್ದರಾಮಯ್ಯನವರಿಗೆ ರಾಜೀನಾಮೆ ಕೊಟ್ಟವರು ವಾಪಸ್ ಬಂದರೆ ಸೇರಿಸಿಕೊಳ್ಳುತ್ತೀರಾ ಎಂದು ಒತ್ತಿ, ಒತ್ತಿ ಕೇಳುತ್ತಾರೆ. ಸಿದ್ದರಾಮಯ್ಯನವರಿಗೆ ವಂಚನೆ ಗೊತ್ತಿಲ್ಲ. ಹೀಗಾಗಿ ಅವರು ಜಗತ್ತೇ ಪ್ರಳಯವಾದರೂ ಇವರನ್ನು ಸೇರಿಸುವುದಿಲ್ಲ ಎಂದರು. ಅಲ್ಲಿಗೆ ಕೆಲವರು ಮಜ್ಜಿಗೆ ಕುಡಿದವರಂತೆ ಖುಷಿಪಟ್ಟರು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕುಮಾರಸ್ವಾಮಿ ಅವರಿಗೆ ಕೊನೆಗೂ ಸುಧಾಕರ್ ಯಾರು ಎಂದು ಅರ್ಥವಾಯಿತು. ಅದಕ್ಕಾಗಿ ಅವರು ಕೊನೆಗೆ ಪಶ್ಚಾತ್ತಾಪ ಪಟ್ಟಿದ್ದಾರೆ. ಆದರೆ ಆಗ ಸಮಯ ಮೀರಿ ಹೋಗಿತ್ತು. ನಾನು ಈಗಲೂ ಕಾಂಗ್ರೆಸ್‌ನಲ್ಲಿಯೇ ಇರುವೆ. ಪಕ್ಷ ಮತ್ತು ನಾಯಕರ ಬಗ್ಗೆ ಚಕಾರ ಎತ್ತಿಲ್ಲ. ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸಿಲ್ಲ. ಕ್ಷೇತ್ರದ ಜನರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ತೆಗೆದುಕೊಳ್ಳುವೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು