ಶಾಸಕ ಜಾಧವ ಬಿಜೆಪಿ ಸೇರ್ಪಡೆ

ಸೋಮವಾರ, ಮಾರ್ಚ್ 25, 2019
33 °C

ಶಾಸಕ ಜಾಧವ ಬಿಜೆಪಿ ಸೇರ್ಪಡೆ

Published:
Updated:
Prajavani

ಕಲಬುರ್ಗಿ: ಚಿಂಚೋಳಿಯ ಕಾಂಗ್ರೆಸ್‌ ಶಾಸಕ ಡಾ.ಉಮೇಶ ಜಾಧವ ಬುಧವಾರ ಬಿಜೆಪಿ ಸೇರ್ಪಡೆಯಾದರು.

ನರೇಂದ್ರ ಮೋದಿ ಅವರು ಮುಖ್ಯ ವೇದಿಕೆಗೆ ಬರುವ ಮುನ್ನವೇ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಜಾಧವ ಅವರನ್ನು ಬರಮಾಡಿಕೊಂಡರು.

ಮೋದಿ ಅವರನ್ನು ಜಾಧವ ಸನ್ಮಾನಿಸಿದರು. ಈ ವೇಳೆ ರಾಜ್ಯ ನಾಯಕರು ಜಾಧವ ಅವರನ್ನು ಮೋದಿ ಅವರಿಗೆ ಪರಿಚಯಿಸಿದರು. ಆದರೆ, ಮೋದಿ ತಮ್ಮ ಭಾಷಣದಲ್ಲಿ ಜಾಧವ ಹೆಸರನ್ನು ಪ್ರಸ್ತಾಪಿಸಲಿಲ್ಲ.

ಕಲಬುರ್ಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಉಮೇಶ ಜಾಧವ ಅವರನ್ನು ಕಣಕ್ಕಿಳಿಸುವುದು ಖಚಿತ ಎನ್ನಲಾಗುತ್ತಿದ್ದರೂ ‘ಜಾಧವಗೆ ಆಶೀರ್ವದಿಸಿ’ ಎಂದೂ ಮೋದಿ ಕೇಳಲಿಲ್ಲ. ಮೋದಿಯ ಈ ನಡೆ ಮುಖಂಡರು, ಕಾರ್ಯಕರ್ತರಲ್ಲಿ ಅಚ್ಚರಿಯನ್ನು ಉಂಟು ಮಾಡಿತು.

ಇದಕ್ಕೂ ಮುನ್ನ ನಡೆದ ಕೇಂದ್ರ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳ ಚಾಲನಾ ಸಮಾರಂಭದ ವೇದಿಕೆಯಲ್ಲಿ ಶಾಸಕ ಡಾ.ಉಮೇಶ ಜಾಧವ ಅವರಿಗೂ ಆಸನ ಕಲ್ಪಿಸಲಾಗಿತ್ತು. ಮೋದಿ ಅವರು ಬರುವುದಕ್ಕಿಂತ ಮುನ್ನ ಜಾಧವ ಅಲ್ಲಿಗೆ ಬಂದರಾದರೂ, ಯಡಿಯೂರಪ್ಪ ಅಲ್ಲಿಂದ ಅವರನ್ನು ಕಳಿಸಿಕೊಟ್ಟರು. ಅಲ್ಲಿಯೂ ಜಾಧವಗೆ ಮೋದಿ ಭೇಟಿ ಸಾಧ್ಯವಾಗಲಿಲ್ಲ.

‘ನಿಮ್ಮ ಭರವಸೆ ಮೇಲೆ ಪಕ್ಷ ಸೇರ್ಪಡೆ’

‘ನಾನು ಚಿಕ್ಕ ಶಾಸಕ. ದೊಡ್ಡ ನಾಯಕನನ್ನು ಎದುರು ಹಾಕಿಕೊಳ್ಳುತ್ತಿದ್ದೇನೆ. ನಿಮ್ಮ ಭರವಸೆ ಮೇಲೆ ಪಕ್ಷ ಸೇರ್ಪಡೆ ಆಗಿದ್ದೇನೆ. ಆದ್ದರಿಂದ, ನೀವೆಲ್ಲ ಆಶೀರ್ವಾದ ಮಾಡಬೇಕು’ ಎಂದು ಡಾ.ಉಮೇಶ ಜಾಧವ ಮನವಿ ಮಾಡಿದರು. ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಅವರು, ‘ಮುಂದೆ ಮಾಡಬೇಕಾದ ಕೆಲಸಗಳು ಬಹಳಷ್ಟಿವೆ. ಒಳ್ಳೆಯ ಕೆಲಸಗಳನ್ನು ಮಾಡಲು ಒಂದು ಬಾರಿ ಅವಕಾಶ ಮಾಡಿಕೊಡಿ’ ಎಂದು ಕೇಳಿಕೊಂಡರು.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 8

  Angry

Comments:

0 comments

Write the first review for this !