ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ವಿಜಯಾನಂದ ಕಾಶಪ್ಪನವರಿಗೆ ಕೋರ್ಟ್‌ನ ಕಠಿಣ ಎಚ್ಚರಿಕೆ

‘ನಿಮಗೆ ಸೊಕ್ಕು ಜಾಸ್ತಿ ಇದೆ ಜೈಲಲಿದ್ದು ವಿಚಾರಣೆ ಎದುರಿಸಿ’
Last Updated 18 ಮಾರ್ಚ್ 2019, 16:58 IST
ಅಕ್ಷರ ಗಾತ್ರ

ಬೆಂಗಳೂರು: ‘ನಿಮಗೆ ಸೊಕ್ಕು ಜಾಸ್ತಿ ಇದೆ. ನೀವು ಜೈಲಿನಲ್ಲೇ ಇದ್ದು ಪ್ರಕರಣದ ವಿಚಾರಣೆ ಎದುರಿಸಿ’ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಅವರಿಗೆ ಕಠಿಣ ಎಚ್ಚರಿಕೆ ನೀಡಿದೆ.

ಬಾಗಲಕೋಟೆ ಜಿಲ್ಲೆಯ ಇಳಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದ ಆರೋಪಿ ಕಾಶಪ್ಪನವರ ವಿರುದ್ಧದ ಪ್ರಕರಣವನ್ನು ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ’ ಸೋಮವಾರ ವಿಚಾರಣೆ ನಡೆಸಿತು.

ಈ ಹಿಂದಿನ ವಿಚಾರಣೆ ವೇಳೆ ಹೊರಡಿಸಲಾಗಿದ್ದ ಜಾಮೀನು ರಹಿತ ವಾರಂಟ್‌ ರಿಕಾಲ್‌ ಮಾಡಿಸಿಕೊಳ್ಳಲು ಕಾಶಪ್ಪನವರ ಕೋರ್ಟ್‌ಗೆ ಹಾಜರಾಗಿದ್ದರು. ಬೆಳಗಿನ ಕಲಾಪದಲ್ಲಿ ಹಾಜರಾಗಿ ಅರ್ಜಿ ಸಲ್ಲಿಸುತ್ತಿದ್ದಂತೆಯೇ ಅವರನ್ನು ವಶಕ್ಕೆ ಪಡೆಯುವಂತೆ ನ್ಯಾಯಾಧೀಶರು ಪೊಲೀಸರಿಗೆ ನಿರ್ದೇಶಿಸಿದರು.

ಮಧ್ಯಾಹ್ನ 4 ಗಂಟೆಗೆ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳಲಾಯಿತು. ವಿಚಾರಣೆ ವೇಳೆ ಕಾಶಪ್ಪನವರು ‘ತಪ್ಪಾಯ್ತು’ ಎಂದು ನ್ಯಾಯಾಧೀಶರ ಕ್ಷಮೆ ಯಾಚಿಸಿದರು.

ಇದಕ್ಕೆ ಅವರ ಪರ ವಕೀಲರನ್ನು ಉದ್ದೇಶಿಸಿ ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ ಅವರು, ‘ನಿಮ್ಮ ಅರ್ಜಿದಾರರಿಗೆ ತುಂಬಾ ಸೊಕ್ಕಿದೆ. ಒಂದಷ್ಟು ದಿನ ಒಳಗೆ ಇರಲಿ. ನೋಡೋಣ’ ಎಂದು ಬಿಸಿ ಮುಟ್ಟಿಸಿದರು.

ಇದಕ್ಕೆ ವಕೀಲರು, ‘ಸ್ವಾಮಿ ಹಾಗೆ ಮಾಡಬೇಡಿ. ಇನ್ನೊಮ್ಮೆ ತಪ್ಪಿಸಿಕೊಳ್ಳುವುದಿಲ್ಲ, ವಾರಂಟ್‌ ರಿಕಾಲ್‌ ಮಾಡಿ’ ಎಂದು ಪರಿಪರಿಯಾಗಿ ಮನವಿ ಮಾಡಿದರು. ಇದನ್ನು ಮಾನ್ಯ ಮಾಡಿದ ನ್ಯಾಯಾಧೀಶರು, ‘ಆರೋಪಿ ವಿಚಾರಣೆಗೆ ಪದೇ ಪದೇ ಗೈರು ಹಾಜರಾಗಿದ್ದಾರೆ’ ಎಂಬ ಕಾರಣಕ್ಕೆ ಕೋರ್ಟ್ ವೆಚ್ಚದ ರೂಪದಲ್ಲಿ ₹ 1 ಸಾವಿರ ದಂಡ ವಿಧಿಸಿದರು.

ನ್ಯಾಯಾಧೀಶರತ್ತ ತೀಕ್ಷ್ಣ ನೋಟ‌

ವಿಚಾರಣೆಗೆ ಕೂಗಿಸಿದಾಗ ಠೀವಿಯಿಂದಲೇ ಕೋರ್ಟ್‌ ಒಳಗೆ ಬಂದ ಕಾಶಪ್ಪನವರ, ಕಲಾ‍ಪ ಮುಗಿದ ಮೇಲೆ ಕಾಗದ ಪತ್ರಕ್ಕೆ ಸಹಿ ಹಾಕಿ ಅದೇ ಗತ್ತಿನಲ್ಲೇ ಹೊರನಡೆದರು. ಬಾಗಿಲ ಬಳಿ ಹೋಗುತ್ತಿದ್ದಂತೆ ಒಮ್ಮೆ ಹಿಂದೆ ತಿರುಗಿ ನ್ಯಾಯಾಧೀಶರನ್ನು ನೆಟ್ಟಕಣ್ಣಿನಿಂದ ತೀಕ್ಷ್ಣವಾಗಿ ಗಮನಿಸುತ್ತಾ ನಿರ್ಗಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT