ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನರ್ಹ’ರಿಂದ ಇಂದು ‘ಸುಪ್ರೀಂ’ಗೆ ಅರ್ಜಿ

Last Updated 28 ಜುಲೈ 2019, 18:37 IST
ಅಕ್ಷರ ಗಾತ್ರ

ಪುಣೆ: ಶಾಸಕ ಸ್ಥಾನದಿಂದ ತಮ್ಮನ್ನು ಅನರ್ಹಗೊಳಿಸಿರುವ ಸ್ಪೀಕರ್ ನಡೆ ಕಾನೂನಬಾಹಿರ ಎಂದಿರುವ ಎಚ್.ವಿಶ್ವನಾಥ್, ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಭಾನುವಾರ ತಿಳಿಸಿದ್ದಾರೆ.

‘ಅನರ್ಹತೆ ನಿರ್ಧಾರ ಕಾನೂನಿಗೆ ವಿರುದ್ಧವಾಗಿದೆ. ವಿಪ್ ಜಾರಿಗೊಳಿಸಿ, ಶಾಸಕರು ಸದನಕ್ಕೆ ಬರಲೇಬೇಕೆಂದು ಒತ್ತಾಯಿಸುವುದು ಸರಿಯಲ್ಲ’ ಎಂದು ವಿಶ್ವನಾಥ್ ಹೇಳಿದ್ದಾರೆ.

‘ಸದನಕ್ಕೆ ಹಾಜರಾಗಿಲ್ಲ ಎಂಬುದರ ಆಧಾರದಲ್ಲಿ 20 ಶಾಸಕರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದಾರೆ. ಸ್ಪೀಕರ್ ನಡೆಯನ್ನು ಪ್ರಶ್ನಿಸಿ ಅನರ್ಹಗೊಂಡ ಶಾಸಕರೆಲ್ಲರೂ ಸೇರಿ ಸುಪ್ರೀಂ ಕೋರ್ಟ್‌ಗೆ ಸೋಮವಾರ ಅರ್ಜಿ ಸಲ್ಲಿಸುತ್ತೇವೆ’ ಎಂದು ಅಜ್ಞಾತ ಸ್ಥಳದಿಂದ ಅವರು ಮಾಹಿತಿ ನೀಡಿದ್ದಾರೆ.

ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ ಅವರು ತಮ್ಮ ಕ್ಷೇತ್ರದ ಮತದಾರರಿಗೆ ವಿಡಿಯೊ ಸಂದೇಶ ಕಳುಹಿಸಿದ್ದು, ಸುಪ್ರೀಂ ಕೋರ್ಟ್‌ನಲ್ಲಿ ಜಯ ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅನರ್ಹಗೊಳಿಸುವ ಬಗ್ಗೆ ತಮಗೆ ಮೊದಲೇ ಸುಳಿವಿತ್ತು ಎಂದು ಅನರ್ಹಗೊಂಡಿರುವ ಮತ್ತೊಬ್ಬ ಶಾಸಕ ಮುನಿರತ್ನ ಹೇಳಿದ್ದು, ಕಾನೂನು ಪ್ರಕಾರವೇ ಎಲ್ಲವನ್ನೂ ಎದುರಿಸುತ್ತೇವೆ ಎಂದು ತಿಳಿಸಿದ್ದಾರೆ. ‘ಅನರ್ಹಗೊಳಿಸುವ ಬಗ್ಗೆ ಪಕ್ಷದ ಮುಖಂಡರು ಬೆದರಿಕೆ ಒಡ್ಡಿದ್ದರು. ನಾವೇನೂ ಚಿಕ್ಕ ಮಕ್ಕಳಲ್ಲ. ಯಾರಿಗೂ ತಿಳಿಯದಂತೇನೂ ನಾವು ಹೋಗಿರಲಿಲ್ಲ’ ಎಂದಿದ್ದಾರೆ.

‘ಮೈತ್ರಿ ಸರ್ಕಾರ ಕೊನೆಗೊಳ್ಳಬೇಕು ಎಂಬುದು ಹಲವು ಕಾಂಗ್ರೆಸ್ ಮುಖಂಡರ ಬಯಕೆಯಾಗಿತ್ತು. ಕುಮಾರಸ್ವಾಮಿ ಅವರು ಸರ್ಕಾರವನ್ನು ಮುನ್ನಡೆಸಲು ಪಕ್ಷದ ಮುಖಂಡರು ಅವಕಾಶ ಮಾಡಿಕೊಡಲಿಲ್ಲ. ತಾವು ಜೆಡಿಎಸ್‌ ಜತೆಗಿದ್ದೇವೆ ಎಂದು ತೋರಿಸಿಕೊಳ್ಳುವ ಸಲುವಾಗಿ ಕಾಂಗ್ರೆಸ್ ಮುಖಂಡರು ಈಗ ಆಟವಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನರ ಮುಂದೆ ಎಲ್ಲವನ್ನೂ ವಿವರಿಸುತ್ತೇವೆ’ ಎಂದು ಮುನಿರತ್ನಹೇಳಿದ್ದಾರೆ.

ಸ್ಪೀಕರ್ ನಿರ್ಧಾರವು ಒತ್ತಡ ಹಾಗೂ ಪಕ್ಷಪಾತದಿಂದ ಕೂಡಿದೆ ಎಂದು ಯಲ್ಲಾಪುರದಿಂದ ಆಯ್ಕೆಯಾಗಿದ್ದ ಶಿವರಾಮ ಹೆಬ್ಬಾರ ಆರೋಪಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವ ಅವರು, ‘ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT