ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರಲ್ಲೂ ನಿರಾಳಭಾವ

ಸಭಾಧ್ಯಕ್ಷರ ಪರಮಾಧಿಕಾರಕ್ಕೆ ‘ಸುಪ್ರೀಂ’ ಸಮ್ಮತಿ
Last Updated 17 ಜುಲೈ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ಶಾಸಕರ ರಾಜೀನಾಮೆಗೆ ಸಂಬಂಧಿಸಿದ ತೀರ್ಮಾನದಲ್ಲಿ ಸ್ಪೀಕರ್‌ ಪರಮಾಧಿಕಾರಕ್ಕೆ ಸಮ್ಮತಿ ಸೂಚಿಸಿರುವ ಸುಪ್ರೀಂ ಕೋರ್ಟ್‌, ಸಾಂವಿಧಾನಿಕ ಸಮತೋಲನ ಕಾಯ್ದುಕೊಳ್ಳುವಿಕೆ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಅತೃಪ್ತ ಶಾಸಕರ ಮೇಲ್ಮನವಿಯ ವಿಚಾರಣೆ ನಡೆಸಿ ಆದೇಶ ಕಾಯ್ದಿರಿಸಿದ್ದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಪೀಠವು, ಪ್ರಕರಣದಲ್ಲಿ ಸಾಂವಿಧಾನಿಕ ವಿಷಯಗಳು ಅಡಕವಾಗಿರುವುದರಿಂದ ಈ ಕುರಿತು ಇನ್ನಷ್ಟು ವಿಚಾರಣೆ ಅಗತ್ಯ ಎಂಬ ಅಂಶಗಳಿರುವ ಮಧ್ಯಂತರ ಆದೇಶವನ್ನು ಬುಧವಾರ ನೀಡಿದೆ.

‘ವಿಧಾನಸಭೆಯ ಅಧಿವೇಶನದಲ್ಲಿ ಪಾಲ್ಗೊಳ್ಳುವುದಕ್ಕೆ ಸಂಬಂಧಿಸಿದಂತೆ ಯಾರೂ ಶಾಸಕರ ಮೇಲೆ ಒತ್ತಡ ಹೇರುವಂತಿಲ್ಲ. ಕಲಾಪದಲ್ಲಿ ಭಾಗವಹಿಸುವುದು ಅವರ ವಿವೇಚನೆಗೆ ಬಿಟ್ಟ ವಿಚಾರ’ ಎಂದು ತಿಳಿಸುವ ಮೂಲಕ ನ್ಯಾಯಪೀಠವು ಮೇಲ್ಮನವಿ ಸಲ್ಲಿಸಿದ್ದ 15 ಜನ ಅತೃಪ್ತ ಶಾಸಕರಲ್ಲೂ ನಿರಾಳ ಭಾವ ಮೂಡುವಂತೆ ಮಾಡಿದೆ.

ಗುರುವಾರ ನಡೆಯಲಿರುವ ಸರ್ಕಾರದ ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡೇ ಮಧ್ಯಂತರ ಆದೇಶ ನೀಡಲಾಗಿದೆ. ಸ್ಪೀಕರ್‌ ಕೈಗೊಳ್ಳುವ ನಿರ್ಧಾರಗಳ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದೂ ಪೀಠ ಸೂಚಿಸಿದೆ.

ಸಾಂವಿಧಾನಿಕವಾದ ಸ್ಪೀಕರ್‌ ಅವರ ಅಧಿಕಾರಕ್ಕೂ ಒಂದೆಡೆ ಮನ್ನಣೆ ನೀಡಿರುವ ಪೀಠವು, ಇನ್ನೊಂದೆಡೆ ಅತೃಪ್ತ ಶಾಸಕರಿಗೆ ವಿವೇಚನೆಗೆ ಅನುಗುಣವಾಗಿ ತೀರ್ಮಾನ ಕೈಗೊಳ್ಳುವ ಹಕ್ಕನ್ನು ನೀಡುವ ಮೂಲಕ ಪ್ರಕರಣದಲ್ಲಿ ಯಾರ ಕೈ ಮೇಲಾಗಿದೆ ಎಂಬ ನಿರ್ಧಾರ ಕೈಗೊಳ್ಳುವುದನ್ನೂ ಅವರವರ ವಿವೇಚನೆಗೆ ಬಿಟ್ಟಿದೆ.

ಸಂವಿಧಾನದ ಪರಿಚ್ಛೇದ 10ರ ಅಡಿ ಸಲ್ಲಿಸಲಾದ ಅನರ್ಹತೆಯ ದೂರು ಹಾಗೂ ಅದಕ್ಕಿಂತ ಮೊದಲೇ ವಿಧಾನಸಭೆಯ ನಿಯಮ 202 ಹಾಗೂ ಸಂವಿಧಾನದ 190ನೇ ವಿಧಿಯ ಅಡಿ ಶಾಸಕರು ಸಲ್ಲಿಸಿದ ರಾಜೀನಾಮೆ ಇತ್ಯರ್ಥಕ್ಕೆ ಸ್ಪೀಕರ್‌ ಆದ್ಯತೆ ನೀಡಬೇಕೇ ಎಂಬ ಅಂಶ ಪ್ರಮುಖವಾಗಿದೆ. ಈ ಹಂತದಲ್ಲಿ ಸಾಂವಿಧಾನಿಕ ಸಮತೋಲನ ಕಾಯ್ದುಕೊಳ್ಳುವುದು ಅಗತ್ಯ ಎಂದು ನ್ಯಾಯಮೂರ್ತಿಗಳಾದ ದೀಪಕ್‌ ಗುಪ್ತಾ ಹಾಗೂ ಅನಿರುದ್ಧ ಬೋಸ್‌ ಅವರನ್ನು ಒಳಗೊಂಡ ಪೀಠ ಹೇಳಿದೆ.

ಸ್ಪೀಕರ್‌ ಅಧಿಕಾರ ವ್ಯಾಪ್ತಿ ಕುರಿತಂತೆ ಅಂತಿಮ ನಿರ್ಧಾರ ಕೈಗೊಳ್ಳಲು ಮತ್ತಷ್ಟು ಅಧ್ಯಯನ ಮತ್ತು ವಿಚಾರಣೆಯ ಅಗತ್ಯವನ್ನು ನ್ಯಾಯಪೀಠ ಪ್ರಸ್ತಾಪಿಸಿದೆ. ಅದಕ್ಕೆಂದೇ ಮಧ್ಯಂತರ ಆದೇಶ ಹೊರಡಿಸುವುದು ಅನಿವಾರ್ಯವಾಗಿದೆ ಎಂದು ಸ್ಪಷ್ಟಪಡಿಸುವ ಮೂಲಕ, ಈ ಪ್ರಕರಣದಲ್ಲಿ ಅಡಕವಾಗಿರುವ ಹಲವು ವಿಷಯಗಳನ್ನು ಪರಾಮರ್ಶಿಸುವ ನಿಟ್ಟಿನಲ್ಲಿ ಮುಂದಿನ ಹಂತದ ವಿಚಾರಣೆ ನಡೆಸುವ ಸೂಚನೆ ನೀಡಲಾಗಿದೆ.

ಆದೇಶದಲ್ಲಿ ಅನರ್ಹತೆಯ ಪ್ರಸ್ತಾಪವೇ ಇಲ್ಲದ್ದರಿಂದ ಆಡಳಿತಾರೂಢ ಜೆಡಿಎಸ್‌–ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಕುಸಿತದ ಅಂಚಿಗೆ ತಳ್ಳಿರುವ ಈ ಪ್ರಕರಣವು ಮತ್ತಷ್ಟು ಕಾನೂನಾತ್ಮಕ ಹೋರಾಟದ ಸುಳಿವನ್ನು ನೀಡಿದೆ.

**

ವಿಶ್ವಾಸಮತ ಪ್ರಕ್ರಿಯೆ ದೃಷ್ಟಿಯಲ್ಲಿ ಇರಿಸಿಕೊಂಡೇ ಕೋರ್ಟ್‌ ತನ್ನ ಆದೇಶದಲ್ಲಿ ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿದೆ. ಕಲಾಪದಲ್ಲಿ ಪಾಲ್ಗೊಳ್ಳುವಿಕೆ ಕುರಿತ ನಿರ್ಧಾರವನ್ನು ಶಾಸಕರ ವಿವೇಚನೆಗೇ ಬಿಡಲಾಗಿದೆ
– ಮುಕುಲ್‌ ರೋಹಟ್ಗಿ, ಶಾಸಕರ ಪರ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT