ಭಾನುವಾರ, ಆಗಸ್ಟ್ 18, 2019
24 °C
ಐಟಿ ದುರ್ಬಳಕೆ– ಕೇಂದ್ರದ ವಿರುದ್ಧ ಕಾಂಗ್ರೆಸ್‌ ಟೀಕೆ

‘ತೆರಿಗೆ ಭಯೋತ್ಪಾದಕ ಸ್ಥಿತಿ ಸೃಷ್ಟಿ’

Published:
Updated:

ಬೆಂಗಳೂರು: ‘ಕೆಫೆ ಕಾಫಿ ಡೇ ಮುಖ್ಯಸ್ಥ, ಉದ್ಯಮಿ ವಿ.ಜಿ. ಸಿದ್ಧಾರ್ಥ ಸಾವಿಗೆ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳ ಕಿರುಕುಳವೇ ಕಾರಣವಾಗಿದ್ದು, ಇಲಾಖೆಯ ನಿವೃತ್ತ ಮಹಾ ನಿರ್ದೇಶಕ ಬಾಲಕೃಷ್ಣನ್‌ ಅವರನ್ನು ತಕ್ಷಣ ಬಂಧಿಸಬೇಕು' ಎಂದು ವಿಧಾನಪರಿಷತ್‌ ಕಾಂಗ್ರೆಸ್‌ ಸದಸ್ಯ ಪ್ರಕಾಶ್ ರಾಠೋಡ್‌ ಆಗ್ರಹಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಐಟಿ ಅಧಿಕಾರಿಗಳ ಮೂಲಕ ಬೆದರಿಕೆಯನ್ನು ಒಡ್ಡಿ ತೆರಿಗೆ ಭಯೋತ್ಪಾದಕ ವಾತಾವರಣವನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸೃಷ್ಟಿಸುತ್ತಿದೆ’ ಎಂದು ಗಂಭೀರ ಆರೋಪ ಮಾಡಿದರು.

‘ಸಿದ್ಧಾರ್ಥ ಅವರು ಸಾವಿಗೂ ಮೊದಲು ಬರೆದ ಪತ್ರದಲ್ಲಿ ತಮ್ಮ ಮಾನಸಿಕ ಸ್ಥಿತಿಗೆ ಐ.ಟಿ ಅಧಿಕಾರಿಗಳೇ ಕಾರಣವೆಂದು ಬರೆದಿದ್ದಾರೆ. ಇದನ್ನೇ ಆಧಾರವಾಗಿಟ್ಟು ಐ.ಟಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

‘ರಾಜ್ಯದ ಉದ್ಯಮಿಗಳನ್ನು ಗುರಿಯಾಗಿಟ್ಟು ಐಟಿ ದಾಳಿ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಲಾಖೆಯನ್ನು ದುರ್ಬಳಕೆ ಮಾಡುತ್ತಿದೆ. ಅಂಬಾನಿ ಸಹೋದರರು ಐ.ಟಿ ನಿಯಮಗಳನ್ನು ಉಲ್ಲಂಘಿಸಿಲ್ಲವೇ? ಅಂಥವರ ಮೇಲೆ ಏಕೆ ದಾಳಿ ನಡೆಯುವುದಿಲ್ಲ’ ಎಂದು ಪ್ರಶ್ನಿಸಿದರು.

‘ಐಟಿ ದಾಳಿ ಬೆದರಿಕೆ ಮೂಲಕ ಇತರೆ ಪಕ್ಷಗಳ ನಾಯಕರು ಬಿಜೆಪಿ ಬರುವಂತೆ ವಾತಾವರಣ ಸೃಷ್ಟಿಸಲಾಗುತ್ತಿದೆ. ಲೋಕಸಭೆ ಚುನಾವಣೆ  ಸಂದರ್ಭದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರ ಮನೆಗಳ ಮೇಲೆ ದಾಳಿ ನಡೆಸಿ, ಅವರ ಮನೋಸ್ಥೈರ್ಯವನ್ನೇ ಕುಗ್ಗಿಸಿದರು. ಇಂಥ ರಾಜಕೀಯ ಪ್ರೇರಿತ ದಾಳಿಗಳು ಖಂಡನೀಯ. ಇದನ್ನು ತಡೆಗಟ್ಟಲು ಕಾನೂನು ತರುವಂತೆ ಉದ್ಯಮಿಗಳು ಒತ್ತಾಯಿಸುತ್ತಿದ್ದಾರೆ’ ಎಂದರು.

Post Comments (+)