ಹುಲಿಗಳ ಸಂಖ್ಯೆ ಮೂರು ಪಟ್ಟು ಹೆಚ್ಚಳ

ಮಂಗಳವಾರ, ಜೂನ್ 25, 2019
27 °C
ಮಲೆಮಹದೇಶ್ವರ ವನ್ಯಧಾಮ: 2018ರ ಜನವರಿಯಲ್ಲಿ ನಡೆದಿದ್ದ ಗಣತಿ

ಹುಲಿಗಳ ಸಂಖ್ಯೆ ಮೂರು ಪಟ್ಟು ಹೆಚ್ಚಳ

Published:
Updated:
Prajavani

ಹನೂರು: ಚಾಮರಾಜನಗರ ಜಿಲ್ಲೆಯ ನಾಲ್ಕು ರಕ್ಷಿತಾರಣ್ಯಗಳಲ್ಲಿ ಒಂದಾಗಿರುವ ಮಲೆಮಹದೇಶ್ವರ ವನ್ಯಧಾಮದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಮೂರು ಪಟ್ಟು ಏರಿಕೆಯಾಗಿದೆ.

2013ರಲ್ಲಿ ವನ್ಯಧಾಮ ಎಂದು ಘೋಷಣೆ ಆಗುವುದಕ್ಕೂ ಮೊದಲು ಇದು ಮೀಸಲು ಅರಣ್ಯ ಪ್ರದೇಶವಾಗಿತ್ತು. ಆಗ 6 ಹುಲಿಗಳಿವೆ ಎಂದು ಅಂದಾಜಿಸಲಾಗಿತ್ತು. ಆರು ವರ್ಷಗಳಲ್ಲಿ ಈ ಸಂಖ್ಯೆ 18ಕ್ಕೆ ಏರಿದೆ. ವನ್ಯಧಾಮದ ವ್ಯಾಪ್ತಿಯಲ್ಲಿ ಅಳವಡಿಸಿರುವ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ಚಿತ್ರಗಳು ವ್ಯಾಘ್ರಗಳ ಸಂಖ್ಯೆ ಹೆಚ್ಚಾಗಿರುವುದನ್ನು ದೃಢಪಡಿಸಿವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

2018ರ ಜನವರಿಯಲ್ಲಿ ರಾಷ್ಟ್ರದ ಎಲ್ಲೆಡೆ ನಡೆದಂತೆ ವನ್ಯಧಾಮದ ಆರು ವಲಯಗಳಲ್ಲಿ 9 ದಿನ ಹುಲಿಗಣತಿ ನಡೆದಿತ್ತು. ಇದರ ವರದಿ ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ. 

ಮಹದೇಶ್ವರ ಬೆಟ್ಟ, ಹನೂರು ಹಾಗೂ ಯಡೆಯಾರಳ್ಳಿ ಮೀಸಲು ರಕ್ಷಿತಾರಣ್ಯವನ್ನು ಒಂದುಗೂಡಿಸಿ 906 ಚದರ ಕಿ.ಮೀ. ವಿಸ್ತೀರ್ಣದ ಅರಣ್ಯವನ್ನು ಮಲೆಮಹದೇಶ್ವರ ವನ್ಯಧಾಮ ಎಂದು 2013ರಲ್ಲಿ ಘೋಷಿಸಲಾಯಿತು.

‘ವನ್ಯಧಾಮ ಎಂದು ಘೋಷಣೆಯಾದ ಬಳಿಕ ಅರಣ್ಯ ಸಂರಕ್ಷಣೆಗೆ ಒತ್ತು ನೀಡಿರುವುದರಿಂದ ಹುಲಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ಇತರೆ ಹುಲಿ ರಕ್ಷಿತಾರಣ್ಯಗಳಿಂದ ವಲಸೆ ಬರುವ ಹುಲಿಗಳ ಸಂತಾನೋತ್ಪತ್ತಿಗೆ ನಮ್ಮ ವನ್ಯಧಾಮ ಅತ್ಯಂತ ಸೂಕ್ತವಾಗಿದೆ’ ಎಂದು ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಉತ್ತರಕ್ಕೆ ಕಾವೇರಿ ವನ್ಯಧಾಮ, ದಕ್ಷಿಣಕ್ಕೆ ತಮಿಳುನಾಡಿನ ಸತ್ಯಮಂಗಲ ಹುಲಿರಕ್ಷಿತಾರಣ್ಯ ಹಾಗೂ ಪೂರ್ವಕ್ಕೆ ಬಿಳಿಗಿರಿರಂಗನಾಥಸ್ವಾಮಿ ಹುಲಿರಕ್ಷಿತಾರಣ್ಯದೊಂದಿಗೆ ಬೆಸೆದುಕೊಂಡಿರುವ ಈ ವನ್ಯಧಾಮ, ಹುಲಿಗಳ ಆವಾಸಕ್ಕೆ ಯೋಗ್ಯವಾದ ವಾತಾವರಣ ಹೊಂದಿದೆ. ಈಚೆಗೆ ರಾಜ್ಯ ವನ್ಯಜೀವಿ ಮಂಡಳಿ ಕೂಡ ಈ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲು ನಿರ್ಧಾರ ಕೈಗೊಂಡಿದೆ.

ಬಲಿ ಪ್ರಾಣಿಗಳ ಸಂಖ್ಯೆ ಹೆಚ್ಚಳ: ವನ್ಯಧಾಮದಲ್ಲಿ ಬಲಿ ಪ್ರಾಣಿಗಳ (ಸಸ್ಯಾಹಾರಿಗಳು) ಸಂಖ್ಯೆ ಹೆಚ್ಚಿರುವುದು ಕೂಡ ಹುಲಿಗಳ ಸಂಖ್ಯೆ ಹೆಚ್ಚಾಗಿದೆ ಎಂಬುದಕ್ಕೆ ಪುಷ್ಟಿ ನೀಡಿದೆ. 

ವನ್ಯಧಾಮದಲ್ಲಿರುವ ಸಸ್ಯಾಹಾರಿ ಪ್ರಾಣಿಗಳ ಸಂತತಿ ಬೆಳವಣಿಗೆ ಅರಿಯುವ ಸಲುವಾಗಿ 2017ರಲ್ಲಿ ಗಣತಿ ನಡೆಸಲಾಗಿತ್ತು.

ಕುರುಚಲು ಗಿಡಗಳು ಹಾಗೂ ಹುಲ್ಲುಗಾವಲಿನಿಂದ ಆವೃತವಾಗಿರುವ ಮಲೆಮಹದೇಶ್ವರ ವನ್ಯಧಾಮದಲ್ಲಿ ಜಿಂಕೆ, ಕಡವೆ, ಕೊಂಡುಕುರಿ ಹಾಗೂ ಕಾಟಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿದ್ದವು.

ಪಿ.ಜಿ.ಪಾಳ್ಯ ವನ್ಯಜೀವಿ ವಲಯವು ಸತ್ಯಮಂಗಲ ಹುಲಿ ರಕ್ಷಿತಾರಣ್ಯ ಹಾಗೂ ಬಿಆರ್‌ಟಿ ಹುಲಿ ರಕ್ಷಿತಾರಣ್ಯದೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ಹೀಗಾಗಿ, ಇದು ಪ್ರಾಣಿಗಳ ಸಂಚಾರಕ್ಕೆ ಕಾರಿಡಾರ್‌ನಂತಾಗಿದೆ. ಈ ಎರಡು ಹುಲಿ ಸಂರಕ್ಷಿತ ಪ್ರದೇಶಗಳಿಂದ ಹುಲಿಗಳು ಆಹಾರ ಮತ್ತು ನೀರನ್ನು ಅರಸಿ ಮಲೆಮಹದೇಶ್ವರ ವನ್ಯಧಾಮಕ್ಕೆ ಬರುವ ಸಾಧ್ಯತೆ ಇದೆ ಎಂದು ವನ್ಯಜೀವಿ ತಜ್ಞರು, ಅಧಿಕಾರಿಗಳು ಹೇಳುತ್ತಾರೆ.

ರಾಮಾಪುರ ವನ್ಯಜೀವಿ ವಲಯದಲ್ಲೂ ಹುಲಿಗಳ ಚಲನವಲನ ಹೆಚ್ಚಾಗಿರುವುದು ಗಣತಿಯಿಂದ ಗೊತ್ತಾಗಿದೆ. ಗಣತಿ ಸಂದರ್ಭದಲ್ಲಿ ನಾಲ್ಕು ಮರಿಗಳೊಂದಿಗೆ ತಾಯಿ ಹುಲಿ ಕಾಣಿಸಿಕೊಂಡಿರುವುದು ಇದಕ್ಕೆ ಪುಷ್ಟಿ ನೀಡುತ್ತದೆ.

‘ಅರಣ್ಯ ರಕ್ಷಣೆಗೆ ಒತ್ತು’

‘ವನ್ಯಧಾಮ ಎಂದು ಘೋಷಣೆಯಾದ ಬಳಿಕ ಅರಣ್ಯ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಲಾಗಿದೆ. ಹಿಂದೆ 34 ಇದ್ದ ಕಳ್ಳ ಬೇಟೆ ತಡೆ ಶಿಬಿರದ ಜತೆಗೆ ಈ ಬಾರಿ ಮೂರು ಹೊಸ ಶಿಬಿರಗಳನ್ನು ನಿರ್ಮಾಣ ಮಾಡಲಾಗಿದೆ. ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವುದಕ್ಕಾಗಿ ಅರಣ್ಯ ವೀಕ್ಷಕರನ್ನು ನೇಮಿಸಲಾಗಿದೆ’ ಎಂದು ಹೇಳುತ್ತಾರೆ ಅಧಿಕಾರಿಗಳು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 26

  Happy
 • 2

  Amused
 • 0

  Sad
 • 3

  Frustrated
 • 1

  Angry

Comments:

0 comments

Write the first review for this !