ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವನ ಮಗನಿಂದ ಅಪಘಾತ ಆರೋಪ: ಬಿಜೆಪಿ ಸಂಸದನ ಅಳಿಯನಿಗೆ ಪ್ರಕರಣದ ತನಿಖೆ ಹೊಣೆ!

ಮರಿಯಮ್ಮನಹಳ್ಳಿ ಅಪಘಾತ ಪ್ರಕರಣ; ಕಮಲ ಪಕ್ಷದ ಸಚಿವನ ಮಗನ ವಿರುದ್ಧ ಗುರುತರ ಆರೋಪ
Last Updated 15 ಫೆಬ್ರುವರಿ 2020, 5:19 IST
ಅಕ್ಷರ ಗಾತ್ರ

ಹೊಸಪೇಟೆ: ಕಂದಾಯ ಸಚಿವ ಆರ್‌. ಅಶೋಕ್‌ ಅವರ ಮಗ ಅಜಾಗರೂಕತೆ, ಅತಿ ವೇಗದಿಂದ ಕಾರು ಓಡಿಸಿ, ಇಬ್ಬರ ಸಾವಿಗೆ ಕಾರಣವಾಗಿ
ದ್ದಾರೆ ಎನ್ನಲಾದ ಅಪಘಾತ ಪ್ರಕರಣ ಮತ್ತೆ ಚರ್ಚೆಗೆ ಒಳಗಾಗಿದೆ. ಇದನ್ನು ಪೊಲೀಸರು ಸರಿಯಾಗಿ ನಿಭಾಯಿಸಲು ಎಡವಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಈ ನಡುವೆಯೇ ಜಿಲ್ಲಾ ಪೊಲೀಸರು ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ.

ಪ್ರಕರಣದ ತನಿಖೆಗೆ ಬಳ್ಳಾರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಕೆ. ಬಾಬಾ ಅವರು ಶುಕ್ರವಾರ ವಿಶೇಷ ತನಿಖಾ ತಂಡ ರಚಿಸಿದ್ದಾರೆ. ಸಂಡೂರು ಸಿಪಿಐ ಎಚ್‌. ಶೇಖರಪ್ಪ ಅವರಿಗೆ ತನಿಖಾ ತಂಡದ ಮುಖ್ಯಸ್ಥರಾಗಿಸಿದ್ದಾರೆ. ಈ ಅಧಿಕಾರಿ, ಬಳ್ಳಾರಿ ಬಿಜೆಪಿ ಸಂಸದ ವೈ.ದೇವೇಂದ್ರಪ್ಪ ಅವರ ಅಳಿಯ.

‘ಶೇಖರಪ್ಪ ದಕ್ಷ ಅಧಿಕಾರಿ ಎಂಬುದ ರಲ್ಲಿ ಎರಡೂ ಮಾತಿಲ್ಲ. ಆದರೆ, ಅವರ ಮಾವ ಸಂಸದರಾಗಿ ಪ್ರತಿನಿಧಿಸುವ ಪಕ್ಷದ ಸಚಿವರ ಮಗನ ವಿರುದ್ಧ ಗಂಭೀರ ಆರೋಪವಿರುವ ಪ್ರಕರಣವಿದು. ಸಹಜವಾಗಿಯೇ ಎಂತಹವರಿಗೂ ಅನುಮಾನ ಮೂಡಿಸುತ್ತದೆ. ಅಲ್ಲದೇ ತನಿಖೆ ಮೇಲೆ ಪ್ರಭಾವ ಬೀರುವ ಸಾಧ್ಯತೆಯೂ ಹೆಚ್ಚಾಗಿದೆ. ಶೇಖರಪ್ಪ ಬದಲು ಬೇರೊಬ್ಬರಿಗೆ ತನಿಖೆಯ ಜವಾಬ್ದಾರಿ ವಹಿಸುವುದು ಸೂಕ್ತ ಎನ್ನುತ್ತಾರೆ’ ಹೆಸರು ಹೇಳಲಿಚ್ಛಿಸದ ಹಿರಿಯ ಪೊಲೀಸ್‌ ಅಧಿಕಾರಿ.

ಅಪಘಾತಕ್ಕೆ ಸಂಬಂಧಿಸಿ ಎಫ್‌.ಐ.ಆರ್‌.ನಲ್ಲಿ ಸರಿಯಾದ ಮಾಹಿತಿ ದಾಖಲಿಸದಿರುವುದು, ಮೃತ ಸಂಬಂಧಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯ ತದ್ವಿರುದ್ಧದ ಹೇಳಿಕೆಯಿಂದ ಪೊಲೀಸರ ಮೇಲೆ ಅನುಮಾನ ಬರುವಂತಾಗಿದೆ. ಈ ಸಂಬಂಧ ಎಸ್ಪಿ ಬಾಬಾ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.

ತನಿಖೆ ಚುರುಕು: ವಿಶೇಷ ತಂಡವು ಶುಕ್ರವಾರ ತನಿಖೆ ಚುರುಕುಗೊಳಿಸಿದೆ. ಅಧಿಕಾರಿಗಳು ಬೆಂಗಳೂರಿಗೆ ಹೋಗಿ ಈಗಾಗಲೇ ತನಿಖೆ ಕೈಗೊಂಡಿದ್ದಾರೆ. ಮತ್ತೆ ಕೆಲವರು ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಬರುವ ಟೋಲ್‌ ಸಂಗ್ರಹ ಕೇಂದ್ರದ ಸಿ.ಸಿ.ಟಿ.ವಿ. ಕ್ಯಾಮೆರಾ, ಹಂಪಿ, ಆನೆಗೊಂದಿ ಸುತ್ತಮುತ್ತಲಿನ ರೆಸಾರ್ಟ್‌, ಹೋಂ ಸ್ಟೇಗಳಲ್ಲಿ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಫೆ. 10ರಂದು ಮಧ್ಯಾಹ್ನ 3ಕ್ಕೆ ಐವರು ಯುವಕರು ತಾಲ್ಲೂಕಿನ ಹಂಪಿಯಿಂದ ಬೆಂಗಳೂರಿಗೆ ವಾಪಸಾಗುತ್ತಿದ್ದರು. ತಾಲ್ಲೂಕಿನ ಮರಿಯಮ್ಮನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿಯ ಚಹಾದಂಗಡಿ ಬಳಿ ನಿಂತಿದ್ದ ರವಿ ನಾಯ್ಕ ಅವರಿಗೆ ಕಾರು ಡಿಕ್ಕಿ ಹೊಡೆದಿದೆ. ರವಿ ಸ್ಥಳದಲ್ಲೇ ಮೃತಪಟ್ಟರೆ, ಕಾರಿನೊಳಗಿದ್ದ ಸಚಿನ್‌ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಕೊನೆಯುಸಿರೆಳೆದಿದ್ದರು.

ಕಾರು ಚಾಲಕ ರಾಹುಲ್‌, ರಾಕೇಶ್‌, ಶಿವಕುಮಾರ ಹಾಗೂ ವರುಣ್‌ ಗಾಯಗೊಂಡಿದ್ದಾರೆ ಎಂದು ಎಫ್‌.ಐ.ಆರ್‌.ನಲ್ಲಿ ದಾಖಲಿಸಲಾಗಿದೆ. ಆದರೆ, ಸಚಿವ ಅಶೋಕ್‌ ಅವರ ಮಗ ಶರತ್‌ ಕಾರು ಓಡಿಸುತ್ತಿದ್ದ. ಆತನನ್ನು ಪೊಲೀಸರು ರಕ್ಷಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ಪೊಲೀಸರ ಬಗ್ಗೆಯೇ ಅನುಮಾನ: ಶಾಸಕ

‘ಇಬ್ಬರ ಸಾವಿಗೆ ಕಾರಣರಾದವರನ್ನು ಪೊಲೀಸರೇ ರಕ್ಷಿಸಿ ಅವರನ್ನು ಬೇರೆ ಕಡೆಗೆ ಕಳುಹಿಸಿಕೊಟ್ಟಿದ್ದಾರೆ. ಪ್ರಕರಣದಲ್ಲಿ ಪೊಲೀಸರ ನಡೆಯ ಬಗ್ಗೆಯೇ ಸಾಕಷ್ಟು ಅನುಮಾನ ಮೂಡಿದೆ. ಅದರ ಬಗ್ಗೆ ವಿಸ್ತೃತ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರಿಗೆ ಪತ್ರ ಬರೆಯುತ್ತೇನೆ’ ಎಂದು ಶಾಸಕ ಭೀಮಾ ನಾಯ್ಕ ರವಿ ನಾಯ್ಕ ಮನೆಗೆ ಭೇಟಿ ನೀಡಿದ ಬಳಿಕ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT