ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಪಡೆದು ಮಜಾ ಮಾಡ್ತಾರೆ, ಬಣ್ಣದ ಆಟ ನಡೆಯಲ್ಲ: ಸುಮಲತಾ ವಿರುದ್ಧ ಸಿ.ಎಂ ಗರಂ

Last Updated 2 ಮೇ 2019, 12:00 IST
ಅಕ್ಷರ ಗಾತ್ರ

ಮಂಡ್ಯ: ‘ನಯಾ ಪೈಸೆ ಹಣ ಖರ್ಚು ಮಾಡದೇ ಪಕ್ಷೇತರ ಅಭ್ಯರ್ಥಿ ಹಿಂದೆ ಜನರು ಬರುತ್ತಿದ್ದಾರೆಯೇ? ಮೈಸೂರಿನ ಯಾವ ಹೋಟೆಲ್‌ನಲ್ಲಿ, ಯಾರು, ಎಷ್ಟು ಹಣ ಸಂದಾಯ ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬುಧವಾರಗಂಭೀರ ಆರೋಪ ಮಾಡಿದರು.

ಕಾಂಗ್ರೆಸ್‌ ಮುಖಂಡ ಜಿ.ಮಾದೇಗೌಡ ಅವರ ಮನೆಗೆ ಭೇಟಿ ನೀಡಿ, ಬೆಂಬಲ ಕೋರಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದರು.

‘ಪಕ್ಷೇತರ ಅಭ್ಯರ್ಥಿಯಲ್ಲಿ ನೋವಿನ ಛಾಯೆ ಕಾಣಿಸುತ್ತಿಲ್ಲ. ತಾಯಿ ಹೃದಯ ಇರುವ ಮಹಿಳೆ ಮಾತನಾಡುವ ರೀತಿನಾ ಇದು? ಬುಧವಾರ ಅವರ ಭಾಷಣ ನೋಡಿದೆ. ನಾಟಕೀಯವಾದ ಡೈಲಾಗ್‌ ಹೇಳುತ್ತಾರೆ. ಆ್ಯಕ್ಷನ್‌ ಮಾಡುತ್ತಾರೆ. ಹಣ ತೆಗೆದುಕೊಂಡು ಓಟ್ ಹಾಕಿ ಎಂದು ಕೇಳುತ್ತಿದ್ದಾರೆ. ಅವರೇನು ಬೆವರು ಸುರಿಸಿ ಹಣ ಸಂಪಾದನೆ ಮಾಡಿದ್ದಾರಾ? ಅವರು ಇನ್ನೊಬ್ಬರಿಂದ ಹಣ ಪಡೆದ ಮಜಾ ಮಾಡುತ್ತಾರೆ. ಬಣ್ಣದ ಆಟ ಹೆಚ್ಚು ದಿನ ನಡೆಯುವುದಿಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಕುಟುಂಬ ಸದಸ್ಯರಿಗೆ ಆರ್ಥಿಕ ಸಹಾಯ ಮಾಡಿದ್ದೇನೆ. ಅವರು ಮಜಾ ಮಾಡೋಕೆ ಹಣ ಕೊಟ್ಟಿಲ್ಲ. ಬದುಕು ನಡೆಸುವುದಕ್ಕಾಗಿ ಹಣ ಕೊಟ್ಟಿದ್ದೇನೆ. ನಾನು ಜಿಲ್ಲೆಯ ಜನರ ಜೊತೆ ಆಟವಾಡಲು ಬಂದಿಲ್ಲ. ಯಾರದ್ದೋ ಹೆಸರಿನಲ್ಲಿ ಅನುಕಂಪ ಗಿಟ್ಟಿಸಿಕೊಳ್ಳಲೂ ಬಂದಿಲ್ಲ. ರೈತರ ಪರ ಕೆಲಸ ಮಾಡಲು ಬಂದಿದ್ದೇನೆ. ಕಬ್ಬು ಬೆಳೆಗಾರರ ಬಾಕಿ ಹಣ ಬಿಡುಗಡೆ ಮಾಡಲು ಚುನಾವಣಾ ಆಯೋಗದ ಅನುಮತಿ ಬೇಕು. ಈ ಕುರಿತು ಅಧಿಕಾರಿಗಳಿಗೆ ಹಣ ಬಿಡುಗಡೆ ಮಾಡುವಂತೆ ತಿಳಿಸಿದ್ದೇನೆ’ ಎಂದರು.

ಬಿಜೆಪಿ ಬೆಂಬಲಿತ ಅಭ್ಯರ್ಥಿ: ‘ನಾನೇಕೆ ಅವರ ಫೋನ್‌ ಕದ್ದಾಲಿಕೆ ಮಾಡಲಿ? ಅವರು ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಲ್ಲವೇ? ಅವರದೇ ಕೇಂದ್ರ ಸರ್ಕಾರವಿದೆ, ದೂರು ನೀಡಿ ತನಿಖೆ ಮಾಡಿಸಬಹುದು. ಚುನಾವಣಾ ಆಯೋಗವನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದು ನನಗೆ ಗೊತ್ತಿದೆ. ಬೆದರಿಕೆ ಇದ್ದರೆ ಬಿಎಸ್‌ಎಫ್‌ ಇಲ್ಲದಿದ್ದರೆ ಗಡಿ ಕಾಯುವ ಕಮಾಂಡೋಗಳಿಂದ ಭದ್ರತೆ ಪಡೆಯಲಿ. ಯಾರಿಗೆ ಮತ ಹಾಕಬೇಕು ಎಂಬುದನ್ನು ಜನರು ಈಗಾಗಲೇ ನಿರ್ಧಾರ ಮಾಡಿದ್ದಾರೆ’ ಎಂದು ಹೇಳಿದರು.

ಕಳ್ಳೆತ್ತು ಎಂದು ಹೇಳಿಲ್ಲ: ‘ನಾನು ಈವರೆಗೂ ಕಳ್ಳೆತ್ತು, ಜೋಡೆತ್ತು ಎಂದು ಹೇಳಿಲ್ಲ. ಜೋಡೆತ್ತು ಎಂದು ಹೇಳಿಕೊಂಡವರು ನಾನಲ್ಲ. ಅವು ಹೊಲ ಉಳುವ ಎತ್ತುಗಳಲ್ಲ, ಶೋಕಿ ಎತ್ತುಗಳು ಎಂದಷ್ಟೇ ನಾನು ಹೇಳಿದ್ದೇನೆ. ಮೊದಲು ಸಾ.ರಾ.ಮಹೇಶ್‌ 15 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಶೋಕಿ ಎತ್ತನ್ನು ಕರೆದುಕೊಂಡು ಹೋಗಿ ಕೇವಲ ಒಂದು ಸಾವಿರ ಮತಗಳ ಅಂತರದಿಂದ ಗೆದ್ದರು’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT