ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಬಳಿಗೇ ಸಂಚಾರಿ ಬ್ಲಡ್‌ ಬ್ಯಾಂಕ್‌

Last Updated 12 ಮೇ 2019, 20:15 IST
ಅಕ್ಷರ ಗಾತ್ರ

ಜನರ ಬಳಿಯೇ ತೆರಳಿ ರಕ್ತ ಸಂಗ್ರಹಿಸುವ ಉದ್ದೇಶದಿಂದ ಕರ್ನಾಟಕ ರೆಡ್‌ಕ್ರಾಸ್‌ ಸೊಸೈಟಿಗೆ ಸರ್ಕಾರ ಸುಸಜ್ಜಿತ ‘ಮೊಬೈಲ್‌ ಬ್ಲಡ್‌ ಬ್ಯಾಂಕ್‌’ ನೀಡಿದೆ. ಇತ್ತೀಚೆಗೆ ಇಂಥದೊಂದು ವಿಶೇಷ ಬಸ್‌ ಎಂ.ಜಿ. ರಸ್ತೆಯಮೆಟ್ರೊ ಸ್ಟೇಷನ್‌ ಎದುರಿನ ರಸ್ತೆಯಲ್ಲಿ ಠಿಕಾಣಿ ಹೂಡಿತ್ತು.

ಕೆಲಸಕ್ಕೆ ಹೊರಟವರು, ಪಾದಚಾರಿಗಳು, ಮೆಟ್ರೊ ಸ್ಟೇಷನ್‌ನಿಂದ ಹೊರ ಬಂದು ಕುತೂಹಲಕ್ಕಾಗಿ ಬಸ್‌ ಒಳ ಹೊಕ್ಕವರು ಸುಮ್ಮನೆ ಹೊರ ಬರಲಿಲ್ಲ. ರಕ್ತದಾನ ಮಾಡಿ ಹೋದರು. ಸಂಚಾರಕ್ಕೆ ಅಡ್ಡಿಯಾಗುತ್ತದೆ ಎಂದುಬಸ್‌ ತೆರವುಗೊಳಿಸಲು ಬಂದ ಟ್ರಾಫಿಕ್‌ ಪೊಲೀಸರು ಕೂಡ ರಕ್ತದಾನ ಮಾಡಿ ಹೆಮ್ಮೆಯಿಂದ ಮರಳಿದರು.

ನಗರದ ವಿವಿಧ ಬಡವಾಣೆ, ರಸ್ತೆ, ವೃತ್ತ, ಜನನಿಬಿಡ ಸಾರ್ವಜನಿಕ ಸ್ಥಳಗಳಲ್ಲಿ ಬಸ್‌ ನಿಲ್ಲಿಸಿದ ತಕ್ಷಣ ಜನರ ಗಮನವನ್ನು ತನ್ನತ್ತ ಸೆಳೆಯುತ್ತದೆ. ಕುತೂಹಲದಿಂದ ಬಸ್‌ ಒಳಗೆ ಇಣುಕುವ ಜನರು ಸ್ವಯಂ ಪ್ರೇರಿತವಾಗಿ ರಕ್ತ ಕೊಟ್ಟು ಮರಳುತ್ತಾರೆ.

ಹವಾನಿಯಂತ್ರಿತ ಬಸ್‌
ಹವಾನಿಯಂತ್ರಿತ ಬಸ್‌ನಲ್ಲಿ ಪ್ರಯೋಗಾಲಯ,ಶೌಚಾಲಯ, ಅತ್ಯಾಧುನಿಕ ಸೌಲಭ್ಯಗಳಿವೆ. ಏಕಕಕಾಲಕ್ಕೆ ನಾಲ್ಕು ಜನರು ರಕ್ತದಾನ ಮಾಡಲು ಸುಖಾಸನಗಳಿವೆ. ರಕ್ತ ನೀಡಿದ ನಂತರ ದಾನಿಗಳು ಈ ಕುರ್ಚಿಗಳಲ್ಲಿ ವಿರಮಿಸಿಕೊಳ್ಳಬಹುದು. ನಾಲ್ಕಕ್ಕಿಂತ ಹೆಚ್ಚಿನ ಜನರು ಬಂದರೆ ಕುಳಿತುಕೊಳ್ಳಲು ಆಸನಗಳಿವೆ.

ರಕ್ತ ಸಂಗ್ರಹಿಸಲು ಅತ್ಯಾಧುನಿಕ ಮಾದರಿ ನಾಲ್ಕು ಫ್ರೀಜರ್‌ಗಳಿವೆ. ನಾಲ್ಕರಿಂದ ಐದು ಗಂಟೆ ಅವಧಿಗೆ ರಕ್ತವನ್ನು ಇಲ್ಲಿ ಸಂಗ್ರಹಿಸಿ ಇಡಬಹುದು. ಅದಾದ ನಂತರ ರಕ್ತ ಭಂಡಾರಕ್ಕೆ ಅದನ್ನು ಸಾಗಿಸಲಾಗುತ್ತದೆ.

ಬಲವಂತ ಮಾಡಲ್ಲ
ಒಬ್ಬ ವೈದ್ಯ, ನರ್ಸ್‌, ಲ್ಯಾಬ್‌ ಟೆಕ್ನೀಶಿಯನ್‌ಗಳು, ಸಹಾಯಕ, ಬಸ್‌ ಚಾಲಕ ಸೇರಿದಂತೆ ಆರು ಜನ ಸಿಬ್ಬಂದಿ ಇದ್ದಾರೆ.ರಕ್ತದಾನ ಮಹಾದಾನ, ರಕ್ತದಾನ ಮಾಡಿ ಜೀವ ಉಳಿಸಿ ಎಂಬ ಫಲಕಗಳನ್ನು ಹಿಡಿದು ಜನರಲ್ಲಿ ಜಾಗೃತಿ ಮೂಡಿಸುವುದಷ್ಟೇ ಈ ಬಸ್‌ನಲ್ಲಿರುವ ಸಿಬ್ಬಂದಿಯ ಕೆಲಸ. ರಕ್ತದಾನ ಮಾಡಿದವರಿಗೆ ಬಿಸ್ಕಿತ್‌, ಜ್ಯೂಸ್‌ ಜತೆಗೆ ಪ್ರಮಾಣಪತ್ರಗಳನ್ನೂ ನೀಡಿ ಸತ್ಕರಿಸಲಾಗುತ್ತದೆ. ತುರ್ತು ಸಂದರ್ಭಗಳಲ್ಲಿ ಈ ಪ್ರಮಾಣ ಪತ್ರ ತೋರಿಸಿದರೆ ಸಾಕು ರೆಡ್‌ಕ್ರಾಸ್‌ ಉಚಿತವಾಗಿ ರಕ್ತ ನೀಡುತ್ತದೆ.

ಚಿತ್ರನಟರು, ರಾಜಕಾರಣಿಗಳ ಜನ್ಮದಿನಾಚರಣೆ, ರಕ್ತದಾನ ಶಿಬಿರ, ಕಾಲೇಜುಗಳಿಗೆ ಹೋಗಿ ರಕ್ತ ಸಂಗ್ರಹಿಸಲಾಗುತ್ತದೆ. ಕರ್ನಾಟಕ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲೂ ಸಂಚಾರಿ ರಕ್ತನಿಧಿ ಸಂಚರಿಸಿದೆ. ಜಾತ್ರೆ, ಸಮಾರಂಭಗಳಿದ್ದರೆ ಆಹ್ವಾನ ನೀಡಿದರೆ ಅಲ್ಲಿಗೂ ತೆರಳಿ ರಕ್ತಸಂಗ್ರಹಿಸುತ್ತೇವೆ ಎಂದು ಸಂಯೋಜಕ ಸಂಯೋಜಕ ಸತೀಶ್‌ ಹೇಳುತ್ತಾರೆ. ಸಂಪರ್ಕ ಸಂಖ್ಯೆ 9538711719.

*
ರಕ್ತದಾನ ಮಾಡುವಂತೆ ಯಾರನ್ನೂ ಬಲವಂತ ಮಾಡುವುದಿಲ್ಲ. ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಲು ಸಾಕಷ್ಟು ಜನರಿಗೆ ಇಷ್ಟವಿರುತ್ತದೆ. ಆದರೆ, ಸಮಯ, ಸ್ಥಳದ ಅನಾನುಕೂಲತೆ ಕಾರಣ ಅವರಿಗೆ ರಕ್ತ ನೀಡುವುದು ಸಾಧ್ಯವಾಗಿರುವುದಿಲ್ಲ. ಅಂಥವರ ಆಶಯವನ್ನು ಈ ಬಸ್‌ ಪೂರೈಸುತ್ತದೆ.
-ಡಾ. ಹೇಮಂತರಾಜ್‌ ಸಾವಳಗಿ, ಮೊಬೈಲ್‌ ಬ್ಲಡ್‌ ಬ್ಯಾಂಕ್‌ನ ವೈದ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT