ಭಾನುವಾರ, ಅಕ್ಟೋಬರ್ 20, 2019
27 °C
ಸರ್ಕಾರಿ ಶಾಲಾ ಮಕ್ಕಳಿಗೆ ಡಾನ್ ಬಾಸ್ಕೊ ಸಂಸ್ಥೆ ತರಬೇತಿ

ಕಂಪ್ಯೂಟರ್‌ ಸಾಕ್ಷರತೆಗೆ ಸಂಚಾರಿ ಲ್ಯಾಬ್‌

Published:
Updated:
Prajavani

ಯಾದಗಿರಿ: ನಗರದ ಡಾನ್ ಬಾಸ್ಕೊ  ಸಂಸ್ಥೆಯು ಸೂರ್ಯಕಿರಣ್ ಯೋಜನೆಯಡಿ ಜಿಲ್ಲೆಯ ವಿವಿಧ ಸರ್ಕಾರಿ ಶಾಲೆಯ ಮಕ್ಕಳಿಗೆ ಸೌರಶಕ್ತಿ ಘಟಕವುಳ್ಳ ಸಂಚಾರಿ ವಾಹನದಲ್ಲಿ (ಮೊಬೈಲ್‌ ಸೋಲಾರ್‌ ಕಂಪ್ಯೂಟರ್‌ ಲ್ಯಾಬ್‌)  ಕಂಪ್ಯೂಟರ್ ಬಳಕೆ ಕುರಿತು ಉಚಿತ ತರಬೇತಿ ನೀಡುತ್ತಿದೆ.

ಜಿಲ್ಲೆಯಲ್ಲಿ 1,024 ಪ್ರಾಥಮಿಕ ಮತ್ತು 149 ಪ್ರೌಢಶಾಲೆಗಳಿವೆ. ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಜಿಲ್ಲೆ ಕೊನೆ ಸ್ಥಾನದಲ್ಲಿರುತ್ತದೆ. ಶಿಕ್ಷಣ ಕೌಶಲದ ಜೊತೆಗೆ ಮಕ್ಕಳಿಗೆ ಕಂಪ್ಯೂಟರ್‌ ಜ್ಞಾನ ವೃದ್ಧಿಸುವುದು ಡಾನ್‌ ಬಾಸ್ಕೊ ಸಂಸ್ಥೆಯ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.  ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕೊರತೆ, ಲೋಡ್‌ ಶೆಡ್ಡಿಂಗ್‌ ಪರಿಣಾಮ ಹಿರಿಯ ಪ್ರಾಥಮಿಕ, ಪ್ರೌಢ ಶಾಲೆಯಲ್ಲಿ ಕಂಪ್ಯೂಟರ್‌ ಕಲಿಕೆ ಕಷ್ಟವಾಗುತ್ತಿದೆ. ಅದಕ್ಕೆಂದೇ ವಾಹನದಲ್ಲೇ ಐದು ಲ್ಯಾಪ್‌ಟಾಪ್‌ಗಳನ್ನು ಇರಿಸಿಕೊಂಡು ಶಾಲೆಗೆ ತೆರಳಿ ತರಬೇತಿ ನೀಡುವ ಯೋಜನೆಯನ್ನು ಸಂಸ್ಥೆ ಕಂಡುಕೊಂಡಿದೆ.

6ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಮತ್ತು ಅಗತ್ಯ ಶಿಕ್ಷಕರಿಗೆ ಉಚಿತವಾಗಿ ಬೇಸಿಕ್ ಕಂಪ್ಯೂಟರ್ ಜ್ಞಾನ, ಅಂತರ್ಜಾಲ ಬಳಕೆ ವಿಧಾನ ಬೋಧಿಸಲಾಗುತ್ತದೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಅಂತರ್ಜಾಲದ ಮೂಲಕ ಪಠ್ಯಪುಸ್ತಕಕ್ಕೆ ಪೂರಕವಾದ ಗಣಿತ/ಇಂಗ್ಲಿಷ್ ಹಾಗೂ ಇತರ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತದೆ. 

ಸಂಚಾರಿ ತರಬೇತಿ ವಾಹನವು ವಿವಿಧ ಶಾಲೆಗಳಿಗೆ 2022ರ ಡಿಸೆಂಬರ್‌ವರೆಗೆ ಭೇಟಿ ನೀಡಿ, ಕಂಪ್ಯೂಟರ್‌ ಕುರಿತು ತರಬೇತಿ, ಮಾರ್ಗದರ್ಶನ ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಅವಕಾಶ ಕಲ್ಪಿಸಿದೆ.  ಮುದ್ನಾಳ, ಅಲ್ಲಿಪುರ ಮತ್ತು ಕಂಚಗಾರನಹಳ್ಳಿಯ ಶಾಲೆಗಳಲ್ಲಿ ಈಗಾಗಲೇ ತರಬೇತಿ ಪೂರ್ಣಗೊಂಡಿದೆ. 

***
ಬೇಸಿಕ್ ಕಂಪ್ಯೂಟರ್, ಅಂತರ್ಜಾಲ ಬಳಕೆ, ಫೈಲ್ ಡೌನ್‌ಲೋಡ್‌ ಮಾಡುವುದು ಮುಂತಾದ ವಿಷಯಗಳನ್ನು ತಿಳಿದುಕೊಂಡಿದ್ದೇವೆ. ಇನ್ನಷ್ಟು ಕಲಿಯಬೇಕಿದೆ.

-ರಾಜಶ್ರೀ ಸಾಬಣ್ಣ, ವಿದ್ಯಾರ್ಥಿನಿ

***

ಜಿಲ್ಲೆಯ ಸರ್ಕಾರಿ ಶಾಲೆಗಳ ಮಕ್ಕಳಿಗೆ ತಂತ್ರಜ್ಞಾನ ಪರಿಚಯಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ.

- ಫಾ. ಜಾರ್ಜ್ ಕೊಲ್ಲಶಾನಿ, ನಿರ್ದೇಶಕ, ಡಾನ್‌ ಬಾಸ್ಕೊ ಸಾಮಾಜಿಕ ಕೇಂದ್ರ 

Post Comments (+)