ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಣಕು ಮತ’ಗಳನ್ನು ಅಳಿಸದೇ ಮತದಾನ!

ಚಿಕ್ಕೋಡಿ ಕ್ಷೇತ್ರದ 2 ಮತಟ್ಟೆಗಳಲ್ಲಿ ಪ್ರಮಾದ; ಆಯೋಗಕ್ಕೆ ವರದಿ
Last Updated 29 ಏಪ್ರಿಲ್ 2019, 18:20 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಏ. 23ರಂದು ಮತದಾನಕ್ಕೆ ಮುನ್ನ ನಡೆಸಿದ ‘ಅಣಕು ಮತದಾನ’ದ ವೇಳೆ ಚಲಾಯಿಸಲಾದ ಮತಗಳನ್ನು, 2 ಮತಗಟ್ಟೆಗಳ ಕಂಟ್ರೋಲ್ ಯುನಿಟ್‌ಗಳಲ್ಲಿ ಅಳಿಸದೇ ಸಿಬ್ಬಂದಿಯು ನಿರ್ಲಕ್ಷ್ಯ ವಹಿಸಿರುವುದು ಬೆಳಕಿಗೆ ಬಂದಿದೆ.

ಈ ಕುರಿತು ಚುನಾವಣಾಧಿಕಾರಿ ಕೆ.ವಿ. ರಾಜೇಂದ್ರ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಿದ್ದಾರೆ.

‘ಅಣಕು ಮತದಾನದ ವೇಳೆ ಮತಗಟ್ಟೆಗಳಲ್ಲಿ ತಲಾ 50 ಮತಗಳನ್ನು ಚಲಾಯಿಸಲಾಗಿತ್ತು. ಇದನ್ನು ಡಿಲೀಟ್ ಮಾಡುವ ಕರ್ತವ್ಯ ಮತಗಟ್ಟೆ ಸಿಬ್ಬಂದಿಯದು. ಆದರೆ, ಅವರು ಅಳಿಸದೇ ಮತದಾನ ಮುಂದುವರಿಸಿದ್ದಾರೆ. ಇದು ಒತ್ತಡದಲ್ಲಾದ ಮಾನವ ಸಹಜ ತಪ್ಪಾಗಿದ್ದು, ಗಂಭೀರವಾಗಿ ಪರಿಗಣಿಸಬೇಕಿಲ್ಲ. ಏಕೆಂದರೆ, ವಿವಿಪ್ಯಾಟ್‌ಗಳ ಮಾಹಿತಿ ಸಂಗ್ರಹಿಸಿಡಲಾಗಿದೆ. ಮತ ಎಣಿಕೆ ಸಂದರ್ಭದಲ್ಲಿ ವಿವಿಪ್ಯಾಟ್‌ನಲ್ಲಿನ ಸ್ಲಿಪ್‌ಗಳನ್ನು ಎಣಿಸಲಾಗುವುದು. ಈ ವಿಷಯವನ್ನು ಅಭ್ಯರ್ಥಿಗಳ ಗಮನಕ್ಕೂ ತರಲಾಗಿದೆ. ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಕ್ರಮ ವಹಿಸುವುದು ಆಯೋಗದ ವ್ಯಾಪ್ತಿಗೆ ಸೇರಿದೆ’ ಎಂದು ರಾಜೇಂದ್ರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಯಾವ್ಯಾವ ಮತಗಟ್ಟೆಗಳಲ್ಲಿ ಹೀಗಾಗಿದೆ ಎನ್ನುವ ಮಾಹಿತಿ ನೀಡಲು ನಿರಾಕರಿಸಿದ ಅವರು, ‘ನಮ್ಮಲ್ಲಷ್ಟೇ ಮೊದಲ ಹಂತದಲ್ಲಿ ರಾಜ್ಯದ ಕೆಲವೆಡೆ ಇಂಥ ಪ್ರಕರಣಗಳು ವರದಿಯಾಗಿವೆ ಎಂದು ಗೊತ್ತಾಗಿದೆ’ ಎಂದರು.

‘ಅಣಕು ಮತದಾನದ ಮತಗಳನ್ನು ಅಳಿಸದಿರುವುದು ಗಂಭೀರ ಪ್ರಮಾದವಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ರಾಜ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

‘ಮತಗಟ್ಟೆ ಸಿಬ್ಬಂದಿ ಮತ್ತು ಅಧಿಕಾರಿಗಳು ಅಣುಕು ಮತದಾನದ ಮತಗಳನ್ನು ಅಳಿಸಿ ಹಾಕದಿರಲು ಕಾರಣವೇನು, ಯಾರದಾದರೂ ಒತ್ತಡಕ್ಕೆ ಸಿಬ್ಬಂದಿ ಒಳಗಾದರೇ? ಅಣುಕು ಮತದಾನದ ಮತಗಳನ್ನು ಸೇರಿಸಿ ಎಣಿಸಿದರೆ ಫಲಿತಾಂಶವೇ ಏರುಪೇರಾಗುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ, ರಾಜ್ಯದ ಎಲ್ಲ ಲೋಕಸಭೆ ಕ್ಷೇತ್ರಗಳಲ್ಲಿ ಶೇ 25ರಷ್ಟು ಮತಗಟ್ಟೆಗಳಲ್ಲಿ ಅಣುಕು ಮತದಾನದ ಮತಗಳನ್ನು ಅಳಿಸಿ ಹಾಕಲಾಗಿದೆಯೇ, ಇಲ್ಲವೇ ಎನ್ನುವುದನ್ನು ದೃಢಪಡಿಸಿಕೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

‘ಒಂದು ವೇಳೆ ಅಧಿಕ ಮತಗಟ್ಟೆಗಳಲ್ಲಿ ಅಳಿಸಿ ಹಾಕದೇ ಇರುವುದು ಕಂಡುಬಂದಲ್ಲಿ ಮರು ಮತದಾನಕ್ಕೆ ಆದೇಶ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT