ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದರಿ ವೈಮಾನಿಕ ಯೋಜನೆಗೆ ಮೊಳೆ

ಕೇಂದ್ರ ಸರ್ಕಾರದ ₹12.80 ಕೋಟಿ ಅನುದಾನ ವಾಪಸ್‌
Last Updated 20 ಮೇ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರ ನೆರವಿನಲ್ಲಿ ಸ್ಥಾ‍‍ಪನೆಗೊಳ್ಳಬೇಕಾಗಿದ್ದ ₹90 ಕೋಟಿ ವೆಚ್ಚದ ‘ವಿಮಾನ ಬಿಡಿಭಾಗಗಳ ತಯಾರಿಕೆ ಕೇಂದ್ರ’ಕ್ಕೆ (ಎಸಿಎಫ್‌ಎಫ್‌) ಕೊನೆ ಮೊಳೆ ಬಿದ್ದಿದೆ. ಉತ್ತರ ಭಾರತ ಮೂಲದ ಅಧಿಕಾರಿಗಳಿಬ್ಬರ ಪ್ರತಿಷ್ಠೆಗೆ ಯೋಜನೆ ಬಲಿಯಾಗಿದೆ.

ದೇಶದಲ್ಲೇ ವಿಶಿಷ್ಟ ಹಾಗೂ ರಾಜ್ಯಕ್ಕೆ ಕೀರ್ತಿ ತರುವ ಯೋಜನೆಯನ್ನು ಸದ್ಯ ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇದರಿಂದಾಗಿ, ಯೋಜನೆಗೆ ನೀಡಿರುವ ₹12.80 ಕೋಟಿ ಅನುದಾನವನ್ನು ಕೇಂದ್ರ ಸರ್ಕಾರಕ್ಕೆ ಮರಳಿಸಬೇಕಿದೆ.

ವಿಮಾನಯಾನ ಸಂಸ್ಥೆಗಳ ಅಗತ್ಯಕ್ಕೆ ತಕ್ಕಂತೆ ವಿಮಾನಗಳ ಬಿಡಿಭಾಗಗಳನ್ನು ರಾಜ್ಯದಲ್ಲೇ ತಯಾರಿಸುವ ಉದ್ದೇಶದಿಂದ ಚಾಲನೆ ಕೊಟ್ಟ ಈ ಯೋಜನೆ 2019ರ ಮಾರ್ಚ್‌ನಲ್ಲಿ ಪೂರ್ಣಗೊಳ್ಳಬೇಕಿತ್ತು. ಯೋಜನೆ ಅನುಷ್ಠಾನಕ್ಕೆ ಟೆಂಡರ್‌ ಕರೆದು ಒಂದು ಸಂಸ್ಥೆಗೆ ಹೊಣೆ ವಹಿಸಲಾಗಿತ್ತು. ಬಳಿಕ ಅದನ್ನು ರದ್ದುಪಡಿಸಿ ನಾಲ್ಕು ಕಂಪನಿಗಳಿಗೆ ಜವಾಬ್ದಾರಿ ವಹಿಸಲಾಗಿತ್ತು. ಈ ಪೈಕಿ ನಾಲ್ಕು ಕಂಪನಿಗಳಿಗೆ ಈಗಾಗಲೇ ₹2.84 ಕೋಟಿ ಪಾವತಿಸಲಾಗಿದೆ. ಇದರ ನಡುವೆಯೇ, ಕೇಂದ್ರ ಸ್ಥಾಪನೆಯ ಪ್ರಕ್ರಿಯೆಯನ್ನು ಸದ್ಯಕ್ಕೆ ಕೈಬಿಡುವ ತೀರ್ಮಾನಕ್ಕೆ ವಾಣಿಜ್ಯ ಹಾಗೂ ಕೈಗಾರಿಕಾ ಇಲಾಖೆ ಬಂದಿದೆ.

‘ಕೆಐಎಬಿಡಿಯಲ್ಲಿದ್ದ ಹಿರಿಯ ಅಧಿಕಾರಿಯೊಬ್ಬರು ತಮಗೆ ಬೇಕಾದವರಿಗೆ ಟೆಂಡರ್‌ ನೀಡಿದ್ದಾರೆ ಎಂಬ ಕಾರಣಕ್ಕೆ ಮತ್ತೊಬ್ಬ ಹಿರಿಯ ಅಧಿಕಾರಿ ಯೋಜನೆಗೆ ತಡೆ ನೀಡುವಂತೆ ಸೂಚನೆ ನೀಡಿದರು. ಹೀಗಾಗಿ, ಕೈಬಿಡಲಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ಯೋಜನೆಗೆ ಸರ್ಕಾರವೇ ಅನುದಾನ ನೀಡಲಿದೆ. ಆದರೆ, ಕೇಂದ್ರ ಸ್ಥಾಪನೆ ಹಾಗೂ ನಿರ್ವಹಣೆ ಹೊಣೆಯನ್ನು ಖಾಸಗಿಯವರಿಗೆ ನೀಡಲು ನಿರ್ಧರಿಸಲಾಗಿತ್ತು. ಇದು ಮುಂದೊಂದು ದಿನ ದೊಡ್ಡ ಹಗರಣಕ್ಕೆ ಕಾರಣವಾಗಬಹುದು ಎಂಬ ಕಾರಣಕ್ಕೆ ತಡೆ ನೀಡಲಾಗಿದೆ. ಎಚ್‌ಎಎಲ್‌, ಎನ್‌ಎಎಲ್‌ನಂತಹ ಸಂಸ್ಥೆಗಳ ನೆರವು ಪಡೆದು ಯೋಜನೆ ಅನುಷ್ಠಾನಕ್ಕೆ ಉದ್ದೇಶಿಸಲಾಗಿದೆ’ ಎಂದುರಾಜ್ಯ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ದೇವನಹಳ್ಳಿಯಲ್ಲಿರುವ ಏರೋಸ್ಪೇಸ್‌ ಪಾರ್ಕ್‌ನಲ್ಲಿ ಈ ಕೇಂದ್ರ ಸ್ಥಾಪನೆ ಮಾಡಲಾಗುತ್ತದೆ ಎಂದು 2015–16ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಪ್ರಕಟಿಸಲಾಗಿತ್ತು. ದೇಶಿ ಉದ್ಯಮ ಸಂಸ್ಥೆಗಳು ಆಮದು ಮಾಡಿಕೊಳ್ಳುತ್ತಿರುವ ಸಾಮಗ್ರಿಗಳನ್ನು ಇಲ್ಲೇ ತಯಾರಿಸುವುದರಿಂದ ಹೊರದೇಶಗಳ ಮೇಲಿನ ಅವಲಂಬನೆ ತಪ್ಪುತ್ತದೆ. ರಾಜ್ಯದ ಸಾವಿರಾರು ಮಂದಿಗೆ ಉದ್ಯೋಗ ಸಿಗಲಿದೆ’ ಎಂದು ತಿಳಿಸಲಾಗಿತ್ತು. ಇದಕ್ಕೆ ಕೇಂದ್ರ ಸರ್ಕಾರದ ಪರಿಷ್ಕೃತ ಕೈಗಾರಿಕಾ ಮೂಲಸೌಕರ್ಯ ಮೇಲ್ದರ್ಜೆಗೇರಿಸುವ ಯೋಜನೆಯ (ಎಂಐಐಯುಎಸ್‌) ಅನುದಾನ ಪಡೆಯಲು ನಿರ್ಧರಿಸಲಾಗಿತ್ತು. ಈ ಯೋಜನೆಗೆ ಅನುದಾನ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಮೂಲಕ ಯೋಜನೆ ಅನುಷ್ಠಾನ ಮಾಡಲು ತೀರ್ಮಾನಿಸಲಾಗಿತ್ತು. ಆರಂಭದಲ್ಲಿ ಕೇಂದ್ರಕ್ಕೆ 25 ಎಕರೆ ಜಾಗ ಮೀಸಲು ಇಡಲಾಗಿತ್ತು. ನಂತರ ಅದನ್ನು 10 ಎಕರೆಗೆ ಇಳಿಸಲಾಗಿತ್ತು. ಬಳಿಕ ಅದನ್ನು 5 ಎಕರೆಗೆ ಕಡಿಮೆ ಮಾಡಲಾಗಿತ್ತು.

ಯೋಜನೆ ಅನುಷ್ಠಾನದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರಕ್ಕೆ ಕೆಲವರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಕೈಗಾರಿಕಾ ಮಂತ್ರಾಲಯವು ತನಿಖೆಗಾಗಿ ನ್ಯಾಷನಲ್‌ ಪ್ರೊಡಕ್ಟಿವಿಟಿ ಕೌನ್ಸಿಲ್‌ನ ತಂಡವನ್ನು ಕಳುಹಿಸಿತ್ತು. ಈ ತಂಡವು 2018ರ ಆಗಸ್ಟ್‌ನಲ್ಲಿ ರಾಜ್ಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಿತ್ತು. 2019ರ ಗಡುವಿನೊಳಗೆ ಯೋಜನೆ ಪೂರ್ಣಗೊಳಿಸುವಂತೆ ಸೂಚಿಸಿತ್ತು. ಬಳಿಕ ಹಿರಿಯ ಐಎಎಸ್‌ ಅಧಿಕಾರಿ ಶೈಲೇಂದ್ರ ಸಿಂಗ್‌ ಅವರೂ ರಾಜ್ಯಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು.

‘ಯೋಜನೆ ಅನುಷ್ಠಾನದಲ್ಲಿ ರಾಜ್ಯ ಸರ್ಕಾರ ಸಾಕಷ್ಟು ವಿಳಂಬ ಮಾಡಿದೆ. ಪರಿಷ್ಕೃತ ಕೈಗಾರಿಕಾ ಮೂಲಸೌಕರ್ಯ ಮೇಲ್ದರ್ಜೆಗೇರಿಸುವ ಯೋಜನೆಯು ಎರಡು ವರ್ಷಗಳ ಹಿಂದೆಯೇ ಮುಕ್ತಾಯಗೊಂಡಿದೆ. ಹೀಗಾಗಿ, ಕೇಂದ್ರಕ್ಕೆ ಅನುದಾನ ನೀಡಲು ಸಾಧ್ಯವಿಲ್ಲ. ಈಗಾಗಲೇ ನೀಡಿರುವ ಅನುದಾನವನ್ನು ಮರಳಿಸುವಂತೆ ಕೇಂದ್ರ ಸೂಚಿಸಿದೆ’ ಎಂದು ಮೂಲಗಳು ತಿಳಿಸಿವೆ.

‘ಖಾಸಗಿ ಕಂಪನಿಗಳಿಗೆ ₹2.84 ಕೋಟಿ ಪಾವತಿಸಲಾಗಿದೆ. ಮೂಲಸೌಕರ್ಯ ಅಭಿವೃದ್ಧಿಯ ಕಾಮಗಾರಿ ನಡೆಸಿದ್ದೇವೆ ಎಂಬ ಕಾರಣ ಹೇಳಿ ಕಂಪನಿಗಳು ಹಣ ಮರಳಿಸುವುದು ಅನುಮಾನ. ತೆರಿಗೆದಾರರ ಹಣ ವ್ಯರ್ಥವಾದಂತೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

***

ರಾಜ್ಯ ಸರ್ಕಾರದ ಅನುದಾನದಿಂದಲೇ ಯೋಜನೆ ಅನುಷ್ಠಾನಕ್ಕೆ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಬೇಕಿದೆ.

–ಡಾ.ಎನ್‌.ಶಿವಶಂಕರ್‌, ಕೆಐಎಡಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT