ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಪ್ಪು ಪೆಟ್ಟಿಗೆ’, ಹೆಲಿಕಾಪ್ಟರ್‌ ಪರಿಶೀಲಿಸಿಲ್ಲ: ಜಿಲ್ಲಾ ಚುನಾವಣಾ ಅಧಿಕಾರಿ

Last Updated 15 ಏಪ್ರಿಲ್ 2019, 9:48 IST
ಅಕ್ಷರ ಗಾತ್ರ

ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಸಮಾವೇಶಕ್ಕೆ ‘ಕಪ್ಪು ಬಣ್ಣದ ಪೆಟ್ಟಿಗೆ’ ಹೊತ್ತು ಬಂದಿದ್ದ ಹೆಲಿಕಾಪ್ಟರ್‌ ಪರಿಶೀಲನೆ ಮಾಡಿಲ್ಲ. ಇದಕ್ಕೆ ವಿಶೇಷ ಭದ್ರತಾ ಪಡೆ (ಎಸ್‌ಪಿಜಿ) ಅವಕಾಶ ನೀಡಿರಲಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್‌.ವಿನೋತ್‌ ಪ್ರಿಯಾ ತಿಳಿಸಿದರು.

‘ಹೆಲಿಕಾಪ್ಟರ್‌ ಸೇರಿ ಎಲ್ಲ ವಾಹನ ತಪಾಸಣೆ ಮಾಡುವಂತೆ ವಿಚಕ್ಷಣಾ ದಳಕ್ಕೆ ಸೂಚನೆ ನೀಡಲಾಗಿತ್ತು. ಮೋದಿ ಅವರನ್ನು ಕರೆತಂದ ಹೆಲಿಕಾಪ್ಟರ್‌ ಪರಿಶೀಲಿಸಲು ಎಸ್‌ಪಿಜಿ ನಿರಾಕರಿಸಿತು. ಭಯೋತ್ಪಾದಕರಿಂದ ಜೀವ ಬೆದರಿಕೆ ಎದುರಿಸುತ್ತಿರುವ ರಾಜಕೀಯ ನಾಯಕರು ಹಾಗೂ ಪ್ರಧಾನಿ ಅವರ ಹೆಲಿಕಾಪ್ಟರ್‌ ತಪಾಸಣೆಗೆ ಚುನಾವಣಾ ಆಯೋಗ ವಿನಾಯಿತಿ ನೀಡಿರುವುದು ಬಳಿಕ ತಿಳಿಯಿತು’ ಎಂದು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದರು.

‘ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಜಿಲ್ಲೆಗೆ ಆರು ಹೆಲಿಕಾಪ್ಟರ್‌ ಬಂದಿವೆ. ವಿಶೇಷ ಭದ್ರತಾ ‍ಪಡೆಯ ಕಣ್ಗಾವಲಿನಲ್ಲಿ ಇದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಯಾಣಿಸಿದ ಹೆಲಿಕಾಪ್ಟರ್‌ ಹೊರತುಪಡಿಸಿ ಉಳಿದವುಗಳನ್ನು ಪರಿಶೀಲನೆ ಮಾಡಲಾಗಿದೆ. ಈವರೆಗೆ ಯಾವುದೇ ನಿಯಮ ಉಲ್ಲಂಘನೆ ಆಗಿಲ್ಲ’ ಎಂದು ಮಾಹಿತಿ ಒದಗಿಸಿದರು.

‘ಕಪ್ಪು ‍ಪೆಟ್ಟಿಗೆಯನ್ನು ಕಾರಿಗೆ ಹಾಕಿ, ಮೈದಾನಕ್ಕೆ ಸಾಗಿಸಿದ್ದನ್ನು ವಿಡಿಯೊ ಚಿತ್ರೀಕರಣ ಮಾಡಲಾಗಿದೆ. ಭದ್ರತೆಗೆ ಸಂಬಂಧಿಸಿದ ಉಪಕರಣ ಅದರೊಳಗೆ ಇದ್ದವು ಎಂಬುದು ಗೊತ್ತಾಗಿದೆ. ಪ್ರಧಾನಿಯ ಜೊತೆಗೆ ಇದೇ ಪೆಟ್ಟಿಗೆಯನ್ನು ಮೈಸೂರಿಗೆ ಕೊಂಡೊಯ್ಯಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ಚಾಲಕನ ಹೇಳಿಕೆ ದಾಖಲು:ಕಪ್ಪು ಪೆಟ್ಟಿಗೆಯಲ್ಲಿ ಹಣ ರವಾನೆ ಆಗಿರುವ ಅನುಮಾನ ವ್ಯಕ್ತಪಡಿಸಿ ಕಾಂಗ್ರೆಸ್‌ ನೀಡಿದ ದೂರು ಸ್ವೀಕರಿಸಿದ ಜಿಲ್ಲಾ ಚುನಾವಣಾಧಿಕಾರಿ, ತನಿಖೆ ಪ್ರಾರಂಭಿಸಿದ್ದಾರೆ. ಕಪ್ಪು ಪೆಟ್ಟಿಗೆಯನ್ನು ಸಾಗಿಸಿದ ಕಾರು ಚಾಲಕನ ಹೇಳಿಕೆಯನ್ನು ಸೋಮವಾರ ದಾಖಲು ಮಾಡಿಕೊಂಡಿದ್ದಾರೆ.

‘ಏ.9ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಿತ್ರದುರ್ಗಕ್ಕೆ ಬಂದಿದ್ದಾಗ 11 ವಾಹನಗಳಿಗೆ ಅನುಮತಿ ನೀಡಲಾಗಿತ್ತು. ಎಲ್ಲ ವಾಹನಗಳನ್ನು ವಿಚಕ್ಷಣಾ ದಳ ಹಾಗೂ ಪೊಲೀಸರು ತಪಾಸಣೆ ಮಾಡಿದ್ದಾರೆ. ಕಪ್ಪು ಪೆಟ್ಟಿಗೆ ಹೊರತುಪಡಿಸಿ ಹೆಲಿಕಾಪ್ಟರ್‌ನಿಂದ ಕೆಳಗೆ ಇಳಿಸಿದ ಎಲ್ಲ ವಸ್ತುವನ್ನು ಪರಿಶೀಲಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಆದರೆ, ಕಾರು ಚಾಲಕನ ಹೆಸರು ಹಾಗೂ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT