ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ ಸಂಕಲ್ಪಕ್ಕೆ ಮೋದಿ ಮುನ್ನುಡಿ ಇಂದು

Last Updated 12 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ನಾಲ್ಕು ಲೋಕಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಚುನಾವಣಾ ಪ್ರಚಾರ ನಡೆಸಲಿದ್ದಾರೆ.

ಸಂಜೆ 5.30ಕ್ಕೆ ನಗರದ ಅರಮನೆ ಮೈದಾನದಲ್ಲಿ ವಿಜಯ ಸಂಕಲ್ಪ ಸಮಾವೇಶ ನಡೆಯಲಿದ್ದು, ಸುಮಾರು ಎರಡು ಲಕ್ಷ ಜನರು ಸೇರುವ ನಿರೀಕ್ಷೆಯಲ್ಲಿ ಬಿಜೆಪಿ ನಾಯಕರಿದ್ದಾರೆ. ಸಮಾವೇಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಭರದ ಸಿದ್ಧತೆ ನಡೆದಿದೆ. ಮಂಗಳೂರಿನಲ್ಲಿ ಚುನಾವಣಾ ಪ್ರಚಾರ ಮುಗಿಸಿ ಅವರು ಇಲ್ಲಿಗೆ ಬರಲಿದ್ದಾರೆ.

ಭವ್ಯ ವೇದಿಕೆ: ಅರ್ಧ ಕಿ.ಮೀ ದೂರದಲ್ಲಿ ನಿಂತರೂ ವೇದಿಕೆ ಕಾಣುವಂತೆ 8 ಅಡಿ ಎತ್ತರದ ಬೃಹತ್ ವೇದಿಕೆ ನಿರ್ಮಿಸಲಾಗಿದೆ. ವೇದಿಕೆ 80 X40 ಅಡಿ ಇದೆ. ವೇದಿಕೆಯಲ್ಲಿ 40x 13 ಅಡಿಯ ಡಿಜಿಟಲ್‌ ಪರದೆ ಅಳವಡಿಸಲಾಗಿದೆ. ಕಾರ್ಯಕರ್ತರು ಭಾಷಣ ವೀಕ್ಷಿಸಲು 20X16 ಅಡಿಯ 10 ಡಿಜಿಟಲ್‌ ಪರದೆಗಳನ್ನು ಅರಮನೆ ಮೈದಾನದಲ್ಲಿ ಹಾಕಲಾಗಿದೆ.

ಮೋದಿ ಜತೆಯಲ್ಲಿ ಬಿ.ಎಸ್. ಯಡಿಯೂರಪ್ಪ, ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರ ರಾವ್‌, ಅಭ್ಯರ್ಥಿಗಳಾದ ಡಿ.ವಿ.ಸದಾನಂದ ಗೌಡ, ಪಿ.ಸಿ.ಮೋಹನ್‌, ತೇಜಸ್ವಿ ಸೂರ್ಯ, ಅಶ್ವತ್ಥನಾರಾಯಣ ಗೌಡ, ಶಾಸಕರಾದ ಆರ್‌.ಅಶೋಕ್‌, ಅರವಿಂದ ಲಿಂಬಾವಳಿ ಸೇರಿದಂತೆ ಬೆಂಗಳೂರಿನ ಶಾಸಕರು, ವಿಧಾನ ಪರಿಷತ್‌ ಸದಸ್ಯರು ಬೆಂಗಳೂರಿನ ಪಕ್ಷದ ಪ್ರಮುಖರು ಸೇರಿ 35 ಜನರಿಗೆ ವೇದಿಕೆಯಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ.

40 ಸಾವಿರ ಕುರ್ಚಿಗಳನ್ನು ಸಭಿಕರಿಗಾಗಿ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕರ್ತರನ್ನು ಕರೆತರಲು ಪ್ರತಿ ವಿಧಾನಸಭಾ ಕ್ಷೇತ್ರದಿಂದ 40 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು, ಅದಕ್ಕಾಗಿ ಶನಿವಾರ ಸಮಾವೇಶ ಸಂಘಟಿಸಲಾಗಿದೆ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದರು.

‘ಇದು ಅದೃಷ್ಟದ ಮೈದಾನ. 2014ರ ಲೋಕಸಭಾ ಚುನಾವಣೆ ವೇಳೆ ಮೋದಿ ಅವರು ಇದೇ ಮೈದಾನದಲ್ಲಿ ಪ್ರಚಾರ ಭಾಷಣ ಮಾಡಿದ್ದರು. ಬಳಿಕ ಅವರು ಪ್ರಧಾನಿಯಾದರು. ಈ ಸಲ ಮತ್ತೆ ಪ್ರಧಾನಿಯಾಗಲಿದ್ದಾರೆ’ ಎಂದು ಆರ್‌.ಅಶೋಕ್‌ ತಿಳಿಸಿದರು.

‘ಸಮಾವೇಶದಲ್ಲಿ ಭಾಗವಹಿಸಲು ಜನರು ಸ್ವಯಂಪ್ರೇರಣೆಯಿಂದ ಮುಂದೆ ಬರುತ್ತಿದ್ದಾರೆ. ಎರಡು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ನೋಂದಣಿ ಪ್ರಕ್ರಿಯೆ ಆರಂಭಿಸಿದ್ದೆವು. 11 ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಜನರಿಗೆ ಮುಕ್ತ ಪ್ರವೇಶ ಇದೆ. ಸಂಜೆ 4.30ರೊಳಗೆ ಮೈದಾನಕ್ಕೆ ಬರಬೇಕು’ ಎಂದು ಅವರು ಮನವಿ ಮಾಡಿದರು.

ಬಿಗಿ ಬಂದೋಬಸ್ತ್‌: ನಗರ ಪೊಲೀಸ್ ಕಮಿಷನರ್ ಟಿ.ಸುನಿಲ್ ಕುಮಾರ್ ನೇತೃತ್ವದಲ್ಲಿ ಮೂವರು ಹೆಚ್ಚುವರಿ ಪೊಲೀಸ್ ಕಮಿಷನರ್‌ಗಳು, 11 ಡಿಸಿಪಿ, 33 ಎಸಿಪಿ ಸೇರಿ ಒಟ್ಟು 3000 ಸಿಬ್ಬಂದಿ ಭದ್ರತೆಯ ಕಾರ್ಯನಿರ್ವಹಿಸಲಿದ್ದಾರೆ. ಜತೆಗೆ ಕೆಎಸ್‌ಆರ್‌ಪಿಯ 50 ಹಾಗೂ ಸಿಎಆರ್‌ನ 30 ತುಕಡಿಗಳನ್ನು ನಿಯೋಜಿಸಲಾಗಿದೆ. ಅರಮನೆ ಮೈದಾನ ಸುತ್ತಮುತ್ತ ವಾಹನ ದಟ್ಟಣೆಯ ನಿರ್ವಹಣೆಯ ಜವಾಬ್ದಾರಿಯನ್ನು ಸಂಚಾರ ವಿಭಾಗದ 1,200 ಪೊಲೀಸರಿಗೆ ವಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT