ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡೂವರೆ ಮುಖ್ಯಮಂತ್ರಿಗಳ ಸರ್ಕಾರ: ಅಮಿತ್ ಶಾ ಟೀಕೆ

ಮೋದಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಅಮಿತ್ ಶಾ ಟೀಕಾಪ್ರಹಾರ
Last Updated 26 ಮಾರ್ಚ್ 2019, 12:59 IST
ಅಕ್ಷರ ಗಾತ್ರ

ಬೆಂಗಳೂರು: ‘ಕ್ಲರ್ಕ್‌ ರೀತಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಎಚ್‌.ಡಿ.ಕುಮಾರಸ್ವಾಮಿ ಅವರೇ ಹೇಳಿಕೊಂಡಿದ್ದಾರೆ. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೂಪರ್‌ ಮುಖ್ಯಮಂತ್ರಿ ಇದ್ದಂತೆ. ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅರ್ಧ ಮುಖ್ಯಮಂತ್ರಿಯಂತೆ. ಇದು ಎರಡೂವರೆ ಮುಖ್ಯಮಂತ್ರಿಗಳ ಸರ್ಕಾರ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಲೇವಡಿ ಮಾಡಿದರು.

ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕನಿಷ್ಠ 22 ಸ್ಥಾನಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡು ಬಿಜೆಪಿ ರಾಜ್ಯ ಘಟಕ ಆರಂಭಿಸಿರುವ ‘ಮೋದಿ ವಿಜಯ ಸಂಕಲ್ಪ ಯಾತ್ರೆ’ಯ ಭಾಗವಾಗಿ ದೇವನಹಳ್ಳಿಯಲ್ಲಿ ಗುರುವಾರ ನಡೆದ ‘ಶಕ್ತಿ ಕೇಂದ್ರ ಪ್ರಮುಖರ ಸಭೆ’ಯಲ್ಲಿ ಮಾತನಾಡಿದ ಅವರು ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು.

ವಿರೋಧ ಪಕ್ಷಗಳ ಮಹಾಮೈತ್ರಿಕೂಟವನ್ನು ಅವಕಾಶವಾದಿಗಳ ಒಕ್ಕೂಟ ಎಂದು ಜರಿದ ಅವರು, ‘ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರಿಗೂ ಪ್ರಧಾನಿಯಾಗುವ ಆಸೆ ಇದೆ’ ಎಂದು ವ್ಯಂಗ್ಯವಾಡಿದರು. ರಾಜ್ಯದ ಮೈತ್ರಿ ಸರ್ಕಾರ ಮಹಾಮೈತ್ರಿಕೂಟಕ್ಕೆ ಒಂದು ಮಾದರಿ ಎಂದೂ ಟೀಕಿಸಿದರು.

‘ತಮ್ಮನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದು ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಎಂದು ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ. ಮುಖ್ಯಮಂತ್ರಿ ನಿಷ್ಠೆ ತೋರುತ್ತಿರುವುದು ಜನರ ಮೇಲೋ ಅಥವಾ ರಾಹುಲ್‌ ಗಾಂಧಿ ಅವರ ಮೇಲೋ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಶಾ ಒತ್ತಾಯಿಸಿದರು.

‘ಮೊದಲು ಸಾಲ ಮನ್ನಾ ಮಾಡಲಿ’

‘ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವುದಾಗಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಘೋಷಿಸಿದ್ದಾರೆ. ರಾಜ್ಯದಲ್ಲಿ ₹48 ಸಾವಿರ ಕೋಟಿ ಸಾಲ ಮನ್ನಾ ಮಾಡುವುದಾಗಿ ಮೈತ್ರಿ ಸರ್ಕಾರ ಪ್ರಕಟಿಸಿತ್ತು. ಈವರೆಗೆ ₹1,500 ಕೋಟಿ ಸಾಲವನ್ನಷ್ಟೇ ಮನ್ನಾ ಮಾಡಿದೆ. ಈ ಮೂಲಕ ರೈತರಿಗೆ ಮಹಾಮೋಸ ಮಾಡಿದೆ. ರಾಹುಲ್‌ ಗಾಂಧಿ ಅವರು ಮೊದಲು ರಾಜ್ಯದ ಸಾಲ ಮನ್ನಾ ಮಾಡಿಸಲಿ. ಮತ್ತೆ ಕೇಂದ್ರದ ಸಾಲ ಮನ್ನಾ ಬಗ್ಗೆ ಮಾತನಾಡಲಿ’ ಎಂದು ಅಮಿತ್ ಶಾ ಸವಾಲು ಎಸೆದರು.

‘ರಾಹುಲ್‌ ಬಾಬಾಗೆ ಗಣಿತ ಗೊತ್ತಿಲ್ಲ. ಹೀಗಾಗಿ, ಏನೇನೋ ಮಾತನಾಡುತ್ತಿದ್ದಾರೆ. ಅವರಿಗೆ ಆಲೂಗಡ್ಡೆ ನೆಲದ ಅಡಿಯಲ್ಲಿ ಬೆಳೆಯುತ್ತದೆಯೋ, ನೆಲದ ಮೇಲೆ ಬೆಳೆಯುತ್ತದೆಯೋ ಅಥವಾ ಕಾರ್ಖಾನೆಯಲ್ಲಿ ತಯಾರಾಗುತ್ತದೆಯೋ ಎಂಬುದು ಗೊತ್ತಿಲ್ಲ. ಈ ಕಾರಣಕ್ಕೆ ಅವರು ಆಗ್ರಾದಲ್ಲಿ ಆಲೂಗಡ್ಡೆ ಫ್ಯಾಕ್ಟರಿ ಆರಂಭ ಮಾಡುವುದಾಗಿ ಘೋಷಿಸಿದ್ದಾರೆ’ ಎಂದು ಅವರು ವ್ಯಂಗ್ಯವಾಡಿದರು.

**

ಶುಕ್ರವಾರದಿಂದ ರಾಜ್ಯದಾದ್ಯಂತ ಪ್ರವಾಸ ಮಾಡಲಿದ್ದೇನೆ. ಲೋಕಸಭಾ ಚುನಾವಣೆ ಮುಗಿಯುವವರೆಗೆ ಮನೆಗೆ ಹೋಗುವುದಿಲ್ಲ. 22ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಿಸುವುದೇ ನನ್ನ ಗುರಿ.
- ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT