ಸೋಮವಾರ, ಜನವರಿ 27, 2020
27 °C
ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿ

ಗೋಲಿಬಾರ್ ಕುರಿತು ತನಿಖೆ: ಮಂಗಳೂರಿನಲ್ಲಿ ಸೋಮವಾರದಿಂದ ಕರ್ಫ್ಯೂ ಇಲ್ಲ– ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಉದ್ವಿಗ್ನಗೊಂಡಿರುವ ಮಂಗಳೂರಿನಲ್ಲಿ ಸೋಮವಾರ ಬೆಳಿಗ್ಗೆ ಕರ್ಫ್ಯೂ ಹಿಂತೆಗೆಯಲಾಗುವುದು, ಗೋಲಿಬಾರ್‌ನಲ್ಲಿ ಮೃತಪಟ್ಟ ಇಬ್ಬರು ಕುಟುಂಬಗಳಿಗೆ ಕಾನೂನು ರೀತಿಯಲ್ಲಿ ಪರಿಹಾರ ನೀಡಲು ಜಿಲ್ಲಾಧಿಕಾರಿಗೆ ಸೂಚಿಸಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಈ ಸಂಬಂಧ ಶನಿವಾರ ಪೊಲೀಸ್ ಅಧಿಕಾರಿಗಳು, ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಗುರುವಾರ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಪೊಲೀಸರು ನಡೆಸಿದ ಗೋಲಿಬಾರ್‌‌ಗೆ ಇಬ್ಬರು ಬಲಿಯಾಗಿದ್ದರು.

ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿದ ನಂತರ ಪತ್ರಕರ್ತರ ಜೊತೆ ಮಾತನಾಡಿದ ಯಡಿಯೂರಪ್ಪ, ಇಂದು 3 ರಿಂದ 6ಗಂಟೆಯವರೆಗೆ ಕರ್ಫ್ಯೂ ಸಡಿಲಿಸಲಾಗುವುದು, 6ರ ನಂತರ ರಾತ್ರಿಯವರೆಗೆ ಮುಂದುವರಿಸಲಾಗುವುದು. ಭಾನುವಾರ ಬೆಳಿಗ್ಗೆಯಿಂದ ರಾತ್ರಿಯವರೆಗೆ ಕರ್ಫ್ಯೂ ಇರುವುದಿಲ್ಲ. ರಾತ್ರಿ ಮುಂದುವರಿಯಲಿದೆ. ರಾತ್ರಿಯಿಂದ ಸೋಮವಾರ ಬೆಳಿಗ್ಗೆಯಿಂದ ಕರ್ಫ್ಯೂ ಇರುವುದಿಲ್ಲ. ಆದರೆ, ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದರು.

ಶಸ್ತ್ರಾಸ್ತ್ರ ದಾಸ್ತಾನು ಕೊಠಡಿಗೆ ನುಗ್ಗಲು ಯತ್ನ

ಪ್ರತಿಭಟನೆ ಹೆಸರಲ್ಲಿ ಕಾನೂನು ಕೈಗೆತ್ತಿಕೊಂಡಿದ್ದರಿಂದ ಗೋಲಿಬಾರ್ ನಡೆಸಬೇಕಾಯಿತು. ಗುರುವಾರ ಪ್ರತಿಭಟನಾಕಾರರು ಶಸ್ತ್ರಾಸ್ತ್ರ ದಾಸ್ತಾನು ಕೊಠಡಿಯ ಗೋಡೆ ಹೊಡೆದು ನುಗ್ಗಲು ಯತ್ನಿಸುತ್ತಿದ್ದರಿಂದ ಗೋಲಿಬಾರ್ ಮಾಡಬೇಕಾಯಿತು. ಮೃತಪಟ್ಟವರ ಕುಟುಂಬಗಳಿಗೆ ಕಾನೂನು ರೀತಿ ಪರಿಶೀಲಿಸಿ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

ನಮ್ಮ ಸರ್ಕಾರ ದೃಷ್ಟಿಯಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಎಲ್ಲರೂ ಒಂದೇ, ಎಲ್ಲರ ಏಳಿಗೆಗಾಗಿ ಸರ್ಕಾರ ಶ್ರಮವಹಿಸುತ್ತಿದೆ. ಪ್ರಧಾನಿಯವರ ಸಬ್ ಕಾ ಸಾತ್ , ಸಬ್ ವಿಕಾಸ್ ಎಂಬ ಮಾತಿನಂತೆ ನಡೆಯುತ್ತಿದ್ದೇವೆ ಎಂದರು. ಈ ಸಮಯದಲ್ಲಿ ಗೋಲಿಬಾರ್‌‌ನಲ್ಲಿ ಮೃತಪಟ್ಟ ಇಬ್ಬರು ಕುಟುಂಬದವರ ಜೊತೆ ಸುಮಾರು 30 ನಿಮಿಷಗಳ ಕಾಲ ಮಾತುಕತೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದರು. 

ಗೋಲಿಬಾರ್ ಕುರಿತು ತನಿಖೆ

ಪ್ರತಿಭಟನೆ ಸಮಯದಲ್ಲಿ ನಡೆದ ಗೋಲಿಬಾರ್ ಕುರಿತು ತನಿಖೆ ನಡೆಸಲಾಗುವುದು. ಆದರೆ, ಯಾವ ರೀತಿಯ ತನಿಖೆ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ ಎಂದರು. ಪೊಲೀಸರ ವೈಫಲ್ಯದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಈ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದರು.

ಸಿದ್ದರಾಮಯ್ಯ ಜವಾಬ್ದಾರಿಯಿಂದ ನಡೆದುಕೊಳ್ಳಲಿ

ಸಿದ್ದರಾಮಯ್ಯ ಅವರ ಟ್ವೀಟ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರು ಜವಾಬ್ದಾರಿಯಿಂದ ನಡೆದುಕೊಳ್ಳಲಿ ಎಂದರು. ಈ ಸಂದರ್ಭದಲ್ಲಿ ಗೃಹಮಂತ್ರಿ ಬಸವರಾಜ ಬೊಮ್ಮಾಯಿ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಜಿಲ್ಲೆಯ ಎಲ್ಲಾ ಶಾಸಕರು ಹಾಗೂ ಮಾಜಿ ಶಾಸಕರು ಹಾಜರಿದ್ದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು