ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗನ ಕಾಯಿಲೆ: ಮಲೆನಾಡಿಗೆ ಬರಲು ಪ್ರವಾಸಿಗರ ಹಿಂದೇಟು

ಪ್ರಸಿದ್ಧ ಪ್ರವಾಸಿ ತಾಣಗಳ ಸುತ್ತಮುತ್ತ ಹರಡುತ್ತಿರುವ ಮಂಗನ ಕಾಯಿಲೆ: ಜೋಗದ ಸಮೀಪವೂ ಆತಂಕ
Last Updated 11 ಜನವರಿ 2019, 3:11 IST
ಅಕ್ಷರ ಗಾತ್ರ

ಶಿವಮೊಗ್ಗ:ಬೇಸಿಗೆಗೂ ಮೊದಲೇ ಮಲೆನಾಡಿನಲ್ಲಿ ಮಂಗನ ಕಾಯಿಲೆ ವ್ಯಾಪಿಸುತ್ತಿರುವ ಪರಿಣಾಮ ವಿಶ್ವ ಪ್ರಸಿದ್ಧ ಜೋಗ ಜಲಪಾತ ಸೇರಿ ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಪ್ರವಾಸಿಗರು ಹಿಂದೇಟು ಹಾಕುತ್ತಿದ್ದಾರೆ.

ಮೊದಲ ಬಾರಿ 1956ರಲ್ಲಿ ಸೊರಬ ತಾಲ್ಲೂಕು ಕ್ಯಾಸನೂರು ಅರಣ್ಯ ಪ್ರದೇಶದಲ್ಲಿ (ಕೆಎಫ್‌ಡಿ) ಕಾಣಿಸಿಕೊಂಡ ಈ ಕಾಯಿಲೆ ಇದುವರೆಗೂ ಚಳಿಗಾಲ ಮುಗಿದ ನಂತರ ಕಾಣಿಸಿಕೊಂಡು ಮುಂಗಾರು ಆರಂಭವಾಗುತ್ತಿದ್ದಂತೆ ಮರೆಯಾಗುತ್ತಿತ್ತು. ಜಿಲ್ಲೆಯ ತೀರ್ಥಹಳ್ಳಿ, ಸಾಗರ, ಹೊಸನಗರ ಭಾಗಗಳಲ್ಲಿ ದಾಳಿ ಇಡುತ್ತಿತ್ತು.

1991ರಿಂದ ರೋಗ ಕಾಣಿಸಿಕೊಳ್ಳುವ ಪ್ರದೇಶದ ವ್ಯಾಪ್ತಿಯ ಗ್ರಾಮಗಳ ಜನರಿಗೆ ರೋಗ ನಿರೋಧಕ ಲಸಿಕೆ ಹಾಕಲು ಆರಂಭಿಸಿದ ನಂತರ ಸಾಕಷ್ಟು ನಿಯಂತ್ರಣಕ್ಕೆ ಬಂದಿತ್ತು. ಎರಡು ವರ್ಷಗಳಿಂದ ಚಳಿಗಾಲದಲ್ಲೇ ಹಬ್ಬುತ್ತಿರುವುದು ಮಲೆನಾಡಿಗರ ಜತೆಗೆ, ಜಿಲ್ಲೆಗೆ ಬರುವ ಪ್ರವಾಸಿಗರಲ್ಲೂ ಆತಂಕ ಸೃಷ್ಟಿಸಿದೆ.

ಜೋಗದ ಸಮೀಪವೂ ಆತಂಕ: ಪ್ರಸಕ್ತ ವರ್ಷ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಜೋಗದ ಸುತ್ತಲೂ ಇರುವ ಹಲವು ಗ್ರಾಮಗಳಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿದೆ. ಕೂಗಳತೆ ದೂರದ ಅರಳಗೋಡಿನಲ್ಲಿ 6 ಜನರು ಬಲಿಯಾಗಿದ್ದಾರೆ. ಪ್ರಸಿದ್ಧ ಧಾರ್ಮಿಕ ತಾಣ ಸಿಗಂದೂರು ಮಾರ್ಗದ ಶರಾವತಿ ಹಿನ್ನೀರ ಸಮೀಪವೂ ಸತ್ತ ಮಂಗಗಳು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗಿವೆ. ಜಿಲ್ಲೆಯ ಅತಿ ಎತ್ತರದ ಬೆಟ್ಟ, ಸಾಹಸಪ್ರಿಯರ ಸ್ವರ್ಗ ಕೊಡಚಾದ್ರಿ ಸಮೀಪದಲ್ಲೂ ಮಂಗಗಳ ಮೃತದೇಹಗಳು ಪತ್ತೆಯಾಗಿವೆ.

ಜೋಗ ಜಲಪಾತ ವೀಕ್ಷಣೆಗೆ ಜುಲೈನಿಂದ ಸೆಪ್ಟೆಂಬರ್‌ವರೆಗೆ ಪ್ರತಿ ದಿನ ಸರಾಸರಿ 25 ಸಾವಿರ ಪ್ರವಾಸಿಗರು ಭೇಟಿ ನೀಡು
ತ್ತಾರೆ. ನವೆಂಬರ್–ಡಿಸೆಂಬರ್‌ನಲ್ಲಿ ಈ ಸಂಖ್ಯೆ 15 ಸಾವಿರ ಇರುತ್ತದೆ. ಜನವರಿಯಿಂದ ಮೇವರೆಗೆ ನಿತ್ಯವೂ ಸರಾಸರಿ 3 ಸಾವಿರದಿಂದ 4 ಸಾವಿರ ಇರುತ್ತದೆ. ಆದರೆ, ಈ ವರ್ಷದಆರಂಭದಲ್ಲೇ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಕುಸಿತ ಕಂಡಿದೆ.

‘ಪ್ರವಾಸಿಗರು ಕರೆ ಮಾಡಿ ಮಂಗನ ಕಾಯಿಲೆ ಕುರಿತು ವಿಚಾರಿಸುತ್ತಿದ್ದಾರೆ. ಭೇಟಿ ನೀಡಬಹುದೇ ಎಂದು ಮಾಹಿತಿ ಪಡೆಯುತ್ತಿದ್ದಾರೆ. ಮುನ್ನೆಚ್ಚರಿಕೆ ವಹಿಸಿದರೆ ಯಾವುದೇ ಸಮಸ್ಯೆ ಇಲ್ಲ ಎಂದು ಮಾಹಿತಿ ನೀಡುತ್ತಿದ್ದೇವೆ’ ಎನ್ನುತ್ತಾರೆ ಜೋಗ ಪ್ರಾಧಿಕಾರದ ಅಧಿಕಾರಿಗಳು.

ಮುಪ್ಪಾನೆಗೆ ಪ್ರವೇಶ ನಿಷಿದ್ಧ: ಪ್ರಕೃತಿಯ ಮಡಿಲು ಎಂದೇ ಖ್ಯಾತಿ ಪಡೆದ ಶರಾವತಿ ಹಿನ್ನೀರಿನ ನೈಸರ್ಗಿಕ ತಾಣ ಮುಪ್ಪಾನೆ ಪ್ರದೇಶದಲ್ಲಿ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ. ಈ ಪ್ರದೇಶದಲ್ಲಿ ಮಂಗನ ಕಾಯಿಲೆ ವ್ಯಾಪಕವಾಗಿ ಹಬ್ಬುತ್ತಿದ್ದು, ಪ್ರವಾಸಿಗರು ಅರಣ್ಯ ಪ್ರವೇಶಿಸಬಾರದು ಎಂದು ಮಾರ್ಗದ ಮುಖ್ಯರಸ್ತೆಯಲ್ಲೇ ಫಲಕ ಅಳವಡಿಸಲಾಗಿದೆ.

ಎಚ್ಚರಿಕೆ ನಾಮಫಲಕ ಅಳವಡಿಕೆಗೆ ಸಿದ್ಧತೆ: ಮಂಗನ ಕಾಯಿಲೆ ವ್ಯಾಪಕವಾಗಿ ಹರಡುತ್ತಿರುವ ಕಾರಣ ಪ್ರವಾಸಿ ತಾಣಗಳ ಬಳಿ ಎಚ್ಚರಿಕೆ ಫಲಕ ಅಳವಡಿಸಲು ಜಿಲ್ಲಾಡಳಿತ ಸೂಚಿಸಿದೆ. ಪ್ರವಾಸಿಗರು ಅರಣ್ಯ ಪ್ರದೇಶದ ಒಳಗೆ ಹೋಗಬಾರದು. ತಂಗಬಾರದು, ಊಟ ಸೇವಿಸಬಾರದು. ಮಂಗಗಳಿಗೆ ಆಹಾರ ಪದಾರ್ಥ ನೀಡಬಾರದು ಎಂಬ ಮಾಹಿತಿ ಫಲಕಗಳಲ್ಲಿ ಇರುತ್ತದೆ.

‘ಬೇರೆ ಪ್ರದೇಶಗಳಿಂದ ಜಿಲ್ಲೆಗೆ ಪ್ರವಾಸಕ್ಕಾಗಿ ಬರುವ ಜನರಿಗೆ ಕೆಎಫ್‌ಡಿ ರೋಗನಿರೋಧಕ ಲಸಿಕೆ ಹಾಕಿರುವುದಿಲ್ಲ. ಹಾಗಾಗಿ, ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಅನವಶ್ಯಕವಾಗಿ ಕಾಡಿನ ಒಳಗೆ ಹೋಗದಂತೆ ಸೂಚಿಸಲಾಗಿದೆ. ಅದಕ್ಕಾಗಿ ಎಲ್ಲೆಡೆ ಎಚ್ಚರಿಕೆಯ ಫಲಕ ಅಳವಡಿಸಲಾಗುತ್ತಿದೆ’ ಎನ್ನುತ್ತಾರೆ ಜಿಲ್ಲಾಧಿಕಾರಿ ಕೆ.ಎ. ದಯಾನಂದ.

ಮುಪ್ಪಾನೆಗೆ ಪ್ರವೇಶ ನಿಷಿದ್ಧ

ಪ್ರಕೃತಿಯ ಮಡಿಲು ಎಂದೇ ಖ್ಯಾತಿ ಪಡೆದ ಶರಾವತಿ ಹಿನ್ನೀರಿನ ನೈಸರ್ಗಿಕ ತಾಣ ಮುಪ್ಪಾನೆ ಪ್ರದೇಶದಲ್ಲಿ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ. ಈ ಪ್ರದೇಶದಲ್ಲಿ ಮಂಗನ ಕಾಯಿಲೆ ವ್ಯಾಪಕವಾಗಿ ಹಬ್ಬುತ್ತಿದ್ದು, ಪ್ರವಾಸಿಗರು ಅರಣ್ಯ ಪ್ರವೇಶಿಸಬಾರದು ಎಂದು ಮಾರ್ಗದ ಮುಖ್ಯರಸ್ತೆಯಲ್ಲೇ ಫಲಕ ಅಳವಡಿಸಲಾಗಿದೆ.

ಕವಿ ಮನೆಗಿಲ್ಲ ತೊಂದರೆ

ನಿರಂತರ ಮುಂಜಾಗ್ರತಾ ಕ್ರಮಗಳ ಫಲವಾಗಿ ಈ ಬಾರಿ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಮಂಗನ ಕಾಯಿಲೆ ವ್ಯಾಪಿಸಿಲ್ಲ. ಹಾಗಾಗಿ, ಕುವೆಂಪು ಅವರ ಊರು ಕುಪ್ಪಳಿ, ಕವಿಶೈಲಕ್ಕೆ ಹೋಗಿಬರುವವರಿಗೆ ಯಾವುದೇ ತೊಂದರೆಯಾಗಿಲ್ಲ.

‘ಪ್ರತಿ ವರ್ಷ ಕವಿ ಮನೆಗೆ ಸರಾಸರಿ 1.40 ಲಕ್ಷ ಜನರು ಭೇಟಿ ನೀಡುತ್ತಾರೆ. ಮಂಗನ ಕಾಯಿಲೆ ಈ ಪ್ರದೇಶದಲ್ಲಿ ಕಾಣಿಸಿಕೊಂಡಿಲ್ಲ. ಹಾಗಾಗಿ, ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಿಲ್ಲ’ ಎಂದು ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಮಾಹಿತಿ ನೀಡಿದರು.

ಮಣಿಪಾಲ ಆಸ್ಪತ್ರೆಗೆ ಮತ್ತಿಬ್ಬರು

ಸಾಗರ: ತಾಲ್ಲೂಕಿನ ಇಬ್ಬರು ಮಂಗನ ಕಾಯಿಲೆ ಶಂಕಿತ ರೋಗಿಗಳನ್ನು ಗುರುವಾರ ಮಣಿಪಾಲದ ಆಸ್ಪತ್ರೆಗೆ ಕಳುಹಿಸಲಾಗಿದೆ.

ಕಂಚಿಕೈ ಗ್ರಾಮದ ಗಣಪತಿ ಭಟ್, ಕಾರ್ಗಲ್ ಪರಶುರಾಮ್ ಅವರಿಗೆ ಅರಲಗೋಡು ಗ್ರಾಮದ ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ನೀಡಿದ ನಂತರ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಣ್ಣುಮನೆ ಗ್ರಾಮದ ಗಿಡ್ಡಪ್ಪ ಎಂಬುವವರು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾಯಿಲೆಯಿಂದ ಗುಣಮುಖರಾಗಿರುವ 20 ಮಂದಿ ಮಣಿಪಾಲ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಗುರುವಾರ ತಾಲ್ಲೂಕಿನಲ್ಲಿ ಮೂರು ಮಂಗಗಳ ಶವ ಪತ್ತೆಯಾಗಿದೆ.

ಗುಣಮುಖರಾಗಿರುವ ರೋಗಿಗಳ ಚಿಕಿತ್ಸಾ ವೆಚ್ಚವನ್ನು ಜಿಲ್ಲಾಡಳಿತ ಭರಿಸುತ್ತಿದೆ. ಈಗಾಗಲೇ ಆಸ್ಪತ್ರೆಯ ಬಿಲ್ ಪಾವತಿಸಿ, ಬಿಡುಗಡೆಯಾಗಿರುವ ರೋಗಿಗಳ ಚಿಕಿತ್ಸಾ ವೆಚ್ಚವನ್ನೂ ಸರ್ಕಾರ ಮರು ಪಾವತಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

ಇನ್ನೊಂದು ಪ್ರಕರಣ ಬೆಳಕಿಗೆ

ತೀರ್ಥಹಳ್ಳಿ ತಾಲ್ಲೂಕಿನ ತೋಟದಕೊಪ್ಪ ಗ್ರಾಮದ ಒಬ್ಬರಿಗೆ ಗುರುವಾರ ಮಂಗನ ಕಾಯಿಲೆ ಕಂಡುಬಂದಿದೆ.

ಹೊಸನಗರ ಪಟ್ಟಣದ ಕಾಲೇಜು ಬಳಿ ಸತ್ತ ಮಂಗ ಪತ್ತೆಯಾಗಿರುವುದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.

ಕಾರ್ಕಳದಲ್ಲಿ ಮತ್ತೊಂದು ಮಂಗನ ಶವ ಪತ್ತೆ

ಉಡುಪಿ: ಕಾರ್ಕಳ ತಾಲ್ಲೂಕಿನ ಹಿರ್ಗಾನ ಗ್ರಾಮದಲ್ಲಿ ಗುರುವಾರ ಮತ್ತೊಂದು ಮಂಗನ ಶವ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಮಂಗನ ಕಾಯಿಲೆ ಭೀತಿ ಹೆಚ್ಚಾಗಿದೆ.

ಎರಡು ದಿನಗಳ ಹಿಂದೆ ಕುಂದಾಪುರ ತಾಲ್ಲೂಕಿನ ಸಿದ್ದಾಪುರ, ಹೊಸಂಗಡಿ ಹಾಗೂ ಶೀರೂರಿನಲ್ಲಿ 4 ಮಂಗಗಳ ಶವ ಪತ್ತೆಯಾಗಿತ್ತು. ದಿನೇದಿನೇ ಮಂಗಗಳ ಸಾವು ಹೆಚ್ಚುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.

ಈ ಸಂಬಂಧ ‘ಪ್ರಜಾವಾಣಿ’ ಜತೆ ಮಾತನಾಡಿದ ಡಿಎಚ್‌ಒ ಡಾ.ರೋಹಿಣಿ, ‘ಸತ್ತ ಮಂಗಗಳ ಶವಪರೀಕ್ಷೆ ನಡೆಸಲಾಗಿದ್ದು, ದೇಹದ ಭಾಗಗಳನ್ನು ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮೂರು ದಿನಗಳ ಬಳಿಕ ವರದಿ ಕೈಸೇರಲಿದ್ದು, ಮಂಗಗಳ ಸಾವಿಗೆ ನಿಖರ ಕಾರಣ ತಿಳಿಯಲಿದೆ’ ಎಂದರು.

ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಮಂಗನ ಕಾಯಿಲೆ ಹರಡುವ ಉಣ್ಣೆಗಳ ನಿಯಂತ್ರಣಕ್ಕೆ ಪಶ್ಚಿಮಘಟ್ಟಗಳ ತಪ್ಪಲಿನ ಗ್ರಾಮಗಳಲ್ಲಿ ರಾಸಾಯನಿಕ ಸಿಂಪರಣೆ ಮಾಡಲಾಗುತ್ತಿದೆ ಎಂದರು.

21 ಮಂದಿಗೆ ಮಂಗನ ಕಾಯಿಲೆ ದೃಢ: ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದ ಎಲ್ಲ 59 ರೋಗಿಗಳು ಶಿವಮೊಗ್ಗ ಜಿಲ್ಲೆಯವರು. ಈ ಪೈಕಿ 21 ಮಂದಿಗೆ ಮಂಗನಕಾಯಿಲೆ ಇರುವುದು ದೃಢಪಟ್ಟಿದೆ. 4 ಮಂದಿಯನ್ನು ನಿಗಾ ಘಟಕದಲ್ಲಿ ಇರಿಸಲಾಗಿದೆ. ಆಸ್ಪತ್ರೆಯಲ್ಲಿ ಇದೀಗ 26 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 33 ಮಂದಿ ಈಗಾಗಲೇ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ ಎಂದು ಕೆಎಂಸಿ ಆಸ್ಪತ್ರೆ ಸಿಬ್ಬಂದಿ ತಿಳಿಸಿದರು.

**

ಮಂಗನ ಕಾಯಿಲೆಗೆ ತುತ್ತಾದ ಎಲ್ಲರ ಚಿಕಿತ್ಸಾ ವೆಚ್ಚ ಭರಿಸಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ. ತುರ್ತು ಅಗತ್ಯ ಇದ್ದವರಿಗೆ ಉನ್ನತ ಚಿಕಿತ್ಸೆಗೂ ಸರ್ಕಾರ ನೆರವು ನೀಡುತ್ತದೆ.

-ಡಿ.ಸಿ. ತಮ್ಮಣ್ಣ,ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT