ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಳಗೋಡಿಗೆ ಮಂಗನ ಕಾಯಿಲೆ ಮಂಕು

ಸಾಂಸ್ಕೃತಿಕ ಗ್ರಾಮದಲ್ಲಿ ಕೃಷಿ, ಸಾಹಿತ್ಯವೂ ಶ್ರೀಮಂತ
Last Updated 17 ಜನವರಿ 2019, 20:19 IST
ಅಕ್ಷರ ಗಾತ್ರ

ಕಾರ್ಗಲ್: ಸಾಗರ ತಾಲ್ಲೂಕಿನಲ್ಲಿ ಸಹಜ ಕೃಷಿ ಚಟುವಟಿಕೆ ಜತೆಗೆ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದ ಅರಲಗೋಡು ಗ್ರಾಮ ಪಂಚಾಯಿತಿ. ಆದರೆ, ಸದ್ಯ ಈ ಗ್ರಾಮದಲ್ಲಿ ಮಂಗನಕಾಯಿಲೆ ಆತಂಕ ಆವರಿಸಿದೆ.

ಯಕ್ಷಗಾನ, ಜಾನಪದ ಕಲೆ, ಸಾಹಿತ್ಯ ಚಟುವಟಿಕೆಗೆ ಅರಲಗೋಡು ಹೆಸರುವಾಸಿ. ಕೃಷಿಯಲ್ಲಿ ಸಂಶೋಧನೆ ನಡೆಸುವ, ಕೃಷಿ ಪದಾರ್ಥಗಳ ಮೂಲಕ ಆರ್ಥಿಕ ಸ್ವಾವಲಂಬನೆ ಕಂಡುಕೊಳ್ಳುವ ಮಾದರಿ ಊರೆಂದೇ ಖ್ಯಾತಿ ಪಡೆದಿತ್ತು. ಆದರೆ, ಮಂಗನ ಕಾಯಿಲೆಯಿಂದ ಗಮನಸೆಳೆದಿರುವ ಅರಲಗೋಡು ತನ್ನೆಲ್ಲಾ ಶ್ರೀಮಂತಿಕೆಯನ್ನು ಮರ್ಕಟ ಬೇನೆಯ ತುಳಿತದಲ್ಲಿ ಕಳೆದುಕೊಂಡಂತೆ ಭಾಸವಾಗುತ್ತಿದೆ.

ಜೋಗ–ಭಟ್ಕಳ ಮಾರ್ಗದಲ್ಲಿ ಕಾರ್ಗಲ್ ಮೂಲಕ ಹೋಗುವಾಗ 7ನೇ ಮೈಲಿ ಕಲ್ಲಿನ ಸಮೀಪ ಸಿಗುವ ಊರು ಅರಲಗೋಡು. ಭೌಗೋಳಿಕವಾಗಿ 8,310 ಹೆಕ್ಟೇರ್ ಭೂಭಾಗ ಹೊಂದಿರುವ ಈ ಗ್ರಾಮದ ನಿವಾಸಿಗಳಲ್ಲಿ ಸತತ ಮೂರು ಬಾರಿ ಮುಳುಗ
ಡೆಯ ಕಹಿ ಅನುಭವಿಸಿದವರೇ ಹೆಚ್ಚು. ಹಿರೇಭಾಸ್ಕರ, ಲಿಂಗನಮಕ್ಕಿ, ತಳಕಳಲೆ ಅಣೆಕಟ್ಟು ನಿರ್ಮಾಣ ಕಾಲದಲ್ಲಿ ನಾಡಿಗೆ ಬೆಳಕನ್ನು ನೀಡಲು ಸರ್ವಸ್ವ ಕಳೆದುಕೊಂಡವರು ಇಲ್ಲಿದ್ದಾರೆ. ಕಾಡಿನೊಂದಿಗೆ ಕೂಡು ಬಾಳ್ವೆ ನಡೆಸುವ ಅಪರೂಪದ ಜೀವನಶೈಲಿ ಇಲ್ಲಿಯ ನಿವಾಸಿಗಳದ್ದು.

ಪ್ರಧಾನ ಬೆಳೆಯಾಗಿ ಅಡಿಕೆ ಮತ್ತು ಭತ್ತದ ಕೃಷಿ ಬದುಕಿನ ಜೀವಾಳ. ಕೃಷಿಕರಲ್ಲಿ ಮತ್ತು ಕೂಲಿ ಕಾರ್ಮಿಕರಿಗೆ ತೋಟ, ಹೊಲ, ಗದ್ದೆಗಳು ಮತ್ತು ಸೊಪ್ಪಿನ ಬೆಟ್ಟಗಳಲ್ಲಿ ಅಡಗಿ ಕುಳಿತಿರುವ ಉಣಗುಗಳು ಜೀವವನ್ನೇ ನುಂಗಿಬಿಡಬಹುದೇನೋ ಎಂಬ ಭಯ ಮತ್ತು ಆತಂಕ ಮನೆ ಮಾಡಿದೆ.

ಶಿಕಾರಿಪುರದಲ್ಲೂ ವೈರಸ್ ಪತ್ತೆ

ಶಿವಮೊಗ್ಗ:ಇದೇ ಮೊದಲ ಬಾರಿ ಶಿಕಾರಿಪುರ ತಾಲ್ಲೂಕಿನಲ್ಲೂ ಮಂಗನ ಕಾಯಿಲೆ ವೈರಸ್‌ ಹರಡಿರುವುದು ದೃಢಪಟ್ಟಿದೆ.

ಅಂಬಾರಗೊಳ್ಳದ ಬಳಿ ಈಚೆಗೆ ದೊರೆತ ಮೃತ ಮಂಗನ ದೇಹದಲ್ಲಿ ಕಾಯಿಲೆಗೆ ಕಾರಣವಾಗುವ ವೈರಸ್‌ ಇರುವುದನ್ನು ಪುಣೆ ಪ್ರಯೋಗಾಲಯದ ವರದಿ ಖಚಿತಪಡಿಸಿದೆ.

ಇದುವರೆಗೂ ಸಾಗರ, ಹೊಸನಗರ, ಸೊರಬ ಹಾಗೂ ತೀರ್ಥಹಳ್ಳಿ ಭಾಗಗಳಲ್ಲಿ ಈ ಕಾಯಿಲೆ ಕಾಣಿಸಿಕೊಂಡಿತ್ತು.ಈಗ ಶಿಕಾರಿಪುರಕ್ಕೂ ಹಬ್ಬಿರುವುದು ಜನರ ಆತಂಕ ಹೆಚ್ಚಿಸಿದೆ.

ಮತ್ತೆ ನಾಲ್ಕು ಜನರು ಮಣಿಪಾಲಕ್ಕೆ: ಸಾಗರ ತಾಲ್ಲೂಕು ಅರಳಗೋಡು ಸಮೀಪದ ಕಂಚಿಕೈ, ಮರಾಠಿ ಕ್ಯಾಂಪ್‌ನ ನಾಲ್ವರಿಗೆ ಮಂಗನ ಕಾಯಿಲೆ ರೋಗ ಲಕ್ಷಣ ಕಾಣಿಸಿಕೊಂಡಿದೆ. ಎಲ್ಲರನ್ನೂ ಮಣಿಪಾಲದ ಕಸ್ತೂರಬಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಫೆ.16ರವರೆಗೆ ಲಸಿಕೆ ಬರುವ ಸಾಧ್ಯತೆ ಇಲ್ಲ:ಗೂಗಲ್ ಅರ್ಥ್ ನಕ್ಷೆಯಂತೆ ಆರೋಗ್ಯ ಇಲಾಖೆ ಗುರುತಿಸಿರುವ ಪ್ರಕಾರ ತಾಲ್ಲೂಕಿನ 60ಕ್ಕೂ ಹೆಚ್ಚು ಗ್ರಾಮಗಳ ನಿವಾಸಿಗಳಿಗೆ ಈಗ ಲಸಿಕೆ ಹಾಕಬೇಕಿದ್ದು, ಡಿಎಂಪಿ ತೈಲವನ್ನು ಕೂಡ ಪೂರೈಸಬೇಕು.

ಆರೋಗ್ಯ ಇಲಾಖೆ ಮೂಲಗಳ ಪ್ರಕಾರ ಸದ್ಯಕ್ಕೆ 16 ಸಾವಿರದಷ್ಟು ಲಸಿಕೆ ಮಾತ್ರ ಸಂಗ್ರಹದಲ್ಲಿದೆ. ಈಗ ಅಂದಾಜಿಸಿರುವ ಪ್ರಕಾರ ಒಂದು ಲಕ್ಷಕ್ಕೂ ಹೆಚ್ಚಿನ ಜನರಿಗೆ ಲಸಿಕೆ ಹಾಕಬೇಕಿದೆ. ಆರೋಗ್ಯ ಇಲಾಖೆ ಅಧಿಕಾರಿಗಳೆ ಹೇಳುವಂತೆ ಫೆ. 16ರವರೆಗೆ ಲಸಿಕೆ ಬರುವ ಸಾಧ್ಯತೆ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT