ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆ ಮಂಟಪಕ್ಕೆ ಅಪರೂಪದ ಅತಿಥಿ!

Last Updated 3 ಡಿಸೆಂಬರ್ 2019, 9:29 IST
ಅಕ್ಷರ ಗಾತ್ರ

ಬಾಗಲಕೋಟೆ: ಮದುವೆ ಮಂಟಪದಲ್ಲಿ ಮಂಗಳ ವಾದ್ಯದ (ಬ್ಯಾಂಡ್) ಸದ್ದು ಕೇಳಿದರೆ ಸಾಕು ಸೀದಾ ಒಳಗೆ ಬರುವ ಮಂಗವೊಂದು (ಮುಷ್ಯ) ಅರಣ್ಯ ಇಲಾಖೆಯವರ ನಿದ್ರೆ ಕೆಡಿಸಿದೆ.

ಬಾಗಲಕೋಟೆಯ ಎಪಿಎಂಸಿಯಲ್ಲಿರುವ ಪ್ರತಿಷ್ಠಿತ ಕಲ್ಯಾಣಮಂಟಪದಲ್ಲಿ ನವೆಂಬರ್ 18ರಿಂದ ಈ ವಾನರನ ಹಾವಳಿ ಆರಂಭವಾಗಿದೆ. ಮದುವೆಗಳಿಗೆ ಹಾಜರಿ ಹಾಕುವ ಈ ಅಪರೂಪದ ಅತಿಥಿ, ಸೀದಾ ವಧು–ವರರು ನಿಂತ ವೇದಿಕೆಗೆ ತೆರಳಿ ಅಲ್ಲಿಯೇ ಮುಂಭಾಗದಲ್ಲಿಯೇ ಕೆಲ ಹೊತ್ತು ಕುಳಿತುಕೊಳ್ಳುತ್ತದೆ. ಫೋಟೊ–ವಿಡಿಯೊಗೆ ಫೋಸ್ ನೀಡುತ್ತಿದೆ. ಮದುವೆ ಮಂಟಪದ ಎದುರಿನ ಕುರ್ಚಿಗಳಲ್ಲಿ ಅತಿಥಿ–ಅಭ್ಯಾಗತ ಪಕ್ಕದಲ್ಲಿ ಕುಳಿತು ಕಾಲ ಕಳೆಯುತ್ತದೆ. ಇದು ಮದುವೆ ಆಯೋಜಿಸಿದವರನ್ನು ಪೇಚಿಗೆ ಸಿಲುಕಿಸುತ್ತಿದೆ.

ಮಂಗ ಏನಾದರೂ ತರಲೆ ಮಾಡಿಬಿಡಬಹುದು ಇಲ್ಲವೇ ಯಾರ ಮೇಲಾದರೂ ದಾಳಿ ನಡೆಸಬಹುದು ಎಂಬ ಆತಂಕದಲ್ಲಿಯೇ ಅವರು ಮದುವೆ ಶಾಸ್ತ್ರಗಳನ್ನು ಮಾಡಬೇಕಿದೆ. ಹೀಗಾಗಿ ಕಲ್ಯಾಣಮಂಟಪದ ಕಿಟಕಿ–ಬಾಗಿಲು ಹಾಕಿಯೇ ಮದುವೆ ಕಾರ್ಯ ನೆರವೇರಿಸುತ್ತಿದ್ದಾರೆ.

ನಿರುಪದ್ರವಿ ವಾನರ:

ಮದುವೆಗಳು ಇದ್ದಾಗ ಮಾತ್ರ ಕಲ್ಯಾಣಮಂಟಪದತ್ತ ಮಂಗ ಮುಖ ಮಾಡುತ್ತದೆ. ಉಳಿದ ದಿನ ಇತ್ತ ತಲೆ ಹಾಕುವುದಿಲ್ಲ. ಯಾರಿಗೂ ತೊಂದರೆ ಕೊಡುವುದಿಲ್ಲ. ತನ್ನ ಪಾಡಿಗೆ ತಾನಿರುತ್ತದೆ ಎಂದು ವ್ಯವಸ್ಥಾಪಕ ಮುರುಗೇಶ ಕುಂದರಗಿ ಹೇಳುತ್ತಾರೆ.

‘ಗಂಟೆಗಟ್ಟಲೇ ಮದುವೆ ಮನೆಯಲ್ಲಿ ಇದ್ದರೂ ಯಾರ ಮೇಲೂ ದಾಳಿ ಮಾಡಿಲ್ಲ. ಏನೂ ತಿನ್ನುವುದಿಲ್ಲ. ಆದರೆ ಮದುವೆಗೆ ಬಂದವರೇ ಹೆದರಿಕೊಂಡು ಅದನ್ನು ಓಡಿಸಲು, ಹೊಡೆಯಲು ಮುಂದಾದಾಗ ಮಾತ್ರ ಗುರುಗುಡುತ್ತದೆ. ಖಂಡಿತವಾಗಿಯೂ ಅದು ನಿರುಪದ್ರವಿ ಮಂಗ’ ಎನ್ನುತ್ತಾರೆ.

ಕಲ್ಯಾಣಮಂಟಪದಲ್ಲಿ ಸೋಮವಾರ ಮದುವೆ ನೆರವೇರಿದ್ದು, ಈ ವೇಳೆ ಮಂಗನ ಭಯಕ್ಕೆ ಅತಿಥಿಗಳು ಗಂಟೆಗಟ್ಟಲೆ ಬಾಗಿಲು ಹಾಕಿಕೊಂಡೇ ಒಳಗೆ ಇರಬೇಕಾಯಿತು. ಹೀಗಾಗಿ ಅದನ್ನು ಹಿಡಿದು ಬೇರೆಡೆಗೆ ಸಾಗಿಸಲು ಅರಣ್ಯ ಇಲಾಖೆ ಅಧಿಕಾರಿಗಳ ಮೊರೆ ಹೋದರು. ಹಂದಿ ಹಿಡಿಯುವವರೊಂದಿಗೆ ಬೋನು, ಬಲೆಯೊಂದಿಗೆ ಅಧಿಕಾರಿಗಳು ಬಂದು ರಾತ್ರಿಯವರೆಗೆ ಪ್ರಯತ್ನಿಸಿದರೂ ಚಾಲಾಕಿ ಮಂಗ ಅವರ ಕೈಗೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT