ಮಂಗನ ಕಾಯಿಲೆ ಪರಿಹಾರ ಮರೀಚಿಕೆ

ಸೋಮವಾರ, ಮಾರ್ಚ್ 25, 2019
24 °C

ಮಂಗನ ಕಾಯಿಲೆ ಪರಿಹಾರ ಮರೀಚಿಕೆ

Published:
Updated:
Prajavani

ಕಾರ್ಗಲ್‌: ಇಲ್ಲಿಗೆ ಸಮೀಪದ ಅರಲಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಗನ ಕಾಯಿಲೆಗೆ ಬಲಿಯಾಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಮೃತರ ಕುಟುಂಬದವರಿಗೆ ಸರ್ಕಾರ ಈವರೆಗೆ ಯಾವುದೇ ಪರಿಹಾರವನ್ನು ಘೋಷಿಸಿಲ್ಲ.

ಇಲ್ಲಿಯವರೆಗೆ ಮೃತಪಟ್ಟ 11 ಮಂದಿಯೂ ಬಡತನದ ಹಿನ್ನೆಲೆ ಇರುವವರು. ಆಸರೆಯಾಗಿದ್ದವರನ್ನು ಕಳೆದುಕೊಂಡು ಹಲವು ಕುಟುಂಬಗಳು ತತ್ತರಿಸಿವೆ. ಕನಿಷ್ಠ ಮಾನವೀಯ ನೆಲೆಯಿಂದಲೂ ಸರ್ಕಾರ ಯಾವುದೇ ಪರಿಹಾರ ನೀಡಿಲ್ಲ ಎಂಬು ದೂರು ಈ ಭಾಗದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದೆ.

ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅರಲಗೋಡು ಮರಬಿಡಿ ನಿವಾಸಿ ಮಂಜಯ್ಯ ಜೈನ್ , ‘ಹಲವು ಕುಟುಂಬಗಳಿಗೆ ತುಂಬಲಾರದ ನಷ್ಟವಾಗಿದೆ. ಆ ಕುಟುಂಬಗಳು ಸರ್ಕಾರದ ಪರಿಹಾರಧನದ ನಿರೀಕ್ಷೆಯಲ್ಲಿವೆ. ಆದರೆ, ಸರ್ಕಾರ ಸೌಜನ್ಯಕ್ಕೂ ಈವರೆಗೆ ಪರಿಹಾರ ಘೋಷಿಸಿಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

‘ಸರ್ಕಾರ, ಮಲೆನಾಡಿನ ರೈತಾಪಿಗಳ, ಗುಡ್ಡಗಾಡು ನಿವಾಸಿಗಳ ಬಗ್ಗೆ ಮಲತಾಯಿ ಧೋರಣೆ ಹೊಂದಿರುವುದು ಸರಿಯೇ’ ಎಂದು ಪ್ರಶ್ನಿಸಿದರು.

ಮಂಡವಳ್ಳಿಯ ಪಾರ್ಶ್ವನಾಥ ಜೈನ್, ವಾಟೇಮಕ್ಕಿಯ ಕೃಷ್ಣಪ್ಪ, ಕಂಚೀಕೈನ ಮಂಜುನಾಥ, ಅವರ ತಾಯಿ ಸಾಕಮ್ಮ, ಲೋಕರಾಜ್‌, ಶ್ವೇತಾ ಜೈನ್‌, ವಾಟೇಮಕ್ಕಿಯ ಸವಿತಾ, ನಂದೋಡಿಯ ಲಕ್ಷ್ಮಿದೇವಮ್ಮ, ಕಾಳಮಂಜಿ ಮಜಿರೆಯ ಪಾರ್ಶ್ವನಾಥ ಜೈನ್, ನಂದೋಡಿಯ ಪೂರ್ಣಿಮಾ, ಸೀತಮ್ಮ ಪೂಜಾರಿ ಮಂಗನ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಆದರೆ, ಅವರ ಕುಟುಂಬದವರಿಗೆ ಪರಿಹಾರವನ್ನು ಘೋಷಣೆ ಮಾಡಿಲ್ಲ.

ಚುಚ್ಚುಮದ್ದು ಪಡೆದವರೂ ಅಸುನೀಗಿದರು: ಅರಲಗೋಡು ಭಾಗದಲ್ಲಿ ಎರಡು ಸುತ್ತಿನ ಚುಚ್ಚುಮದ್ದು ಪಡೆದವರೂ ಮಂಗನ ಕಾಯಿಲೆಯಿಂದ ಸಾವನ್ನಪ್ಪಿರುವುದು ನಿಜಕ್ಕೂ ಆತಂಕಕಾರಿ. ಸರ್ಕಾರ ಕೂಡಲೇ ವಿಶೇಷ ವಿಜ್ಞಾನಿಗಳನ್ನು ನೇಮಿಸಿ ಕಾರಣ ಕಂಡುಹಿಡಿಯಬೇಕು. ಮೃತರ ಕುಟುಂಬಗಳಿಗೆ ಕೂಡಲೇ ₹ 10 ಲಕ್ಷ ಪರಿಹಾರ ನೀಡುವಂತೆ ಕೆಡಿಪಿ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸಾಗರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಪ್ರತಿಕ್ರಿಯಿಸಿದರು.

11ನೇ ಬಲಿ

ಅರಲಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಗನ ಕಾಯಿಲೆಗೆ ಸೀತಮ್ಮ ಪೂಜಾರಿ ಭಾನುವಾರ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಈ ಕಾಯಿಲೆಯಿಂದ ಸತ್ತವರ ಸಂಖ್ಯೆ 11ಕ್ಕೆ ಏರಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !