ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗನಕಾಯಿಲೆ: ಲಸಿಕೆ ಹಾಕಿದರೂ ನಿಲ್ಲದ ಸಾವಿನ ಸರಣಿ

6 ದಶಕಗಳ ಹಿಂದೆ ಕಂಡುಬಂದ ಕಾಯಿಲೆ, ಹತೋಟಿಗೆ 29 ವರ್ಷಗಳಿಂದ ನಿರಂತರ ಪರಿಶ್ರಮ
Last Updated 4 ಜನವರಿ 2019, 20:15 IST
ಅಕ್ಷರ ಗಾತ್ರ

ಶಿವಮೊಗ್ಗ:ಪ್ರತಿವರ್ಷ ಸರಾಸರಿ 50 ಸಾವಿರದಿಂದ 60 ಸಾವಿರ ಜನರಿಗೆ ರೋಗ ನಿರೋಧಕ ಲಸಿಕೆ ಹಾಕುತ್ತಿದ್ದರೂ ಮಂಗನ ಕಾಯಿಲೆ ಮಲೆನಾಡಿಗರ ನಿದ್ದೆಗೆಡಿಸುತ್ತಲೇ ಸಾಗಿದೆ.

ಸಾಗರ ತಾಲ್ಲೂಕು ಕ್ಯಾಸನೂರು ಅರಣ್ಯ ಪ್ರದೇಶದಲ್ಲಿ1956ರಲ್ಲಿ ಮೊದಲ ಬಾರಿ ಈ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಂಡಿದ್ದವು. ಇದು ಮಂಗನ ಕಾಯಿಲೆ ಎಂದು ಮರು ವರ್ಷ ದೃಢಪಟ್ಟಿತ್ತು. ಅಂದಿನಿಂದ ಈ ಕಾಯಿಲೆಯನ್ನು ಕ್ಯಾಸನೂರು ಫಾರೆಸ್ಟ್ ಡಿಸೀಸ್ (ಕೆಎಫ್‌ಡಿ) ಎಂದೇ ಕರೆಯಲಾಗುತ್ತಿದೆ.

ಆರಂಭದ ವರ್ಷಗಳಲ್ಲಿ ಸಾಕಷ್ಟು ಜನರು ಮಂಗನಕಾಯಿಲೆಗೆ ಬಲಿಯಾಗಿದ್ದರು. 1990ರಿಂದ ಆರೋಗ್ಯ ಇಲಾಖೆ ರೋಗ ನಿಯಂತ್ರಣಕ್ಕೆ ಲಸಿಕೆ ಹಾಕಲು ಆರಂಭಿಸಿತು. ಅಂದಿನಿಂದ ತೀರ್ಥಹಳ್ಳಿ, ಹೊಸನಗರ, ಸಾಗರ, ಸೊರಬ ತಾಲ್ಲೂಕು ವ್ಯಾಪ್ತಿಯ ಗ್ರಾಮಗಳ ಜನರಿಗೆ ಲಸಿಕೆ ಹಾಕುತ್ತಾ ಬರಲಾಗುತ್ತಿದೆ. ಜಾಗೃತಿ ಮೂಡಿಸಲಾಗುತ್ತಿದೆ. ಇಷ್ಟೆಲ್ಲ ಮುಂಜಾಗ್ರತಾ ಕ್ರಮಗಳ ಮಧ್ಯೆಯೂ ಆರು ದಶಕಗಳಲ್ಲಿ ಸುಮಾರು 800 ಜನರು ಜೀವ ಕಳೆದುಕೊಂಡಿದ್ದಾರೆ.

ಮಲೆನಾಡಿನ ಅರಣ್ಯ ಪ್ರದೇಶಗಳ ಗ್ರಾಮಗಳಲ್ಲಿ ಈ ಕಾಯಿಲೆ ಸಾಮಾನ್ಯವಾಗಿ ಬೇಸಿಗೆ ಆರಂಭದಲ್ಲಿ (ಮಾರ್ಚ್‌, ಏಪ್ರಿಲ್‌) ಕಾಣಿಸಿಕೊಂಡು ಮಳೆ ಆರಂಭವಾಗುತ್ತಿದ್ದಂತೆ ಕಡಿಮೆಯಾಗುತ್ತದೆ. ಆದರೆ, ಮೂರು ವರ್ಷಗಳಿಂದ ಚಳಿಗಾಲದ ಆರಂಭದಲ್ಲೇ ಹಬ್ಬುತ್ತಿರುವುದು ಜನರ ನೆಮ್ಮದಿ ಕೆಡಿಸಿದೆ.

ಹಿಂದಿನ ವರ್ಷ ತೀರ್ಥಹಳ್ಳಿ ತಾಲ್ಲೂಕು ವಿವಿಧ ಗ್ರಾಮಗಳಲ್ಲಿ ಕಾಣಿಸಿಕೊಂಡಿತ್ತು. ಎರಡು ವರ್ಷಗಳ ಹಿಂದೆ ಸೊರಬತಾಲ್ಲೂಕಿನಲ್ಲಿ ಕಾಣಿಸಿಕೊಂಡಿತ್ತು. ಈ ಬಾರಿ ಸಾಗರ ತಾಲ್ಲೂಕಿನಲ್ಲಿ ರೋಗ ಹಬ್ಬುತ್ತಿದೆ. ಅರಳಗೋಡು ಪಂಚಾಯಿತಿ ವ್ಯಾಪ್ತಿಯಲ್ಲೇ 10 ದಿನಗಳ ಅಂತರದಲ್ಲಿ 4 ಜನರು ಮೃತಪಟ್ಟಿದ್ದಾರೆ.

ಕಾಯಿಲೆಗೆ ಔಷಧವೇಇಲ್ಲ:

ಕಾಯಿಲೆಗೆ ಇದುವರೆಗೂ ನಿರ್ದಿಷ್ಟ ಔಷಧ ಕಂಡು ಹಿಡಿದಿಲ್ಲ. ಕಾಯಿಲೆಗೆ ಕಾರಣವಾಗುವ ಈ ವೈರಸ್‌ ಝೈಕಾ ಮತ್ತು ಡೆಂಗಿ ಪ್ರಭೇದಕ್ಕೆ ಸೇರಿದೆ. ಈ ಆಧಾರದ ಮೇಲೆ ಬೆಂಗಳೂರಿನ ಹೆಬ್ಬಾಳದಲ್ಲಿರುವ ಪ್ರಯೋಗಾಲಯದಲ್ಲಿ ಕೆಎಫ್‌ಡಿ ನಿರೋಧಕ ಲಸಿಕೆ ಅಭಿವೃದ್ಧಿಪಡಿಸಲಾಗಿದೆ. ಈ ಲಸಿಕೆಯನ್ನು ಮಲೆನಾಡು ಭಾಗದ ಜಿಲ್ಲೆಗಳಿಗೆ ಕಳುಹಿಸಲಾಗುತ್ತಿದೆ.

ಮೂರು ಬಾರಿ ಲಸಿಕೆ:

ರೋಗ ನಿಯಂತ್ರಣಕ್ಕೆ ನಾಲ್ಕು ವಾರಗಳ ಅಂತರದಲ್ಲಿ ಎರಡು ರೋಗ ನಿರೋಧಕ ಚುಚ್ಚುಮದ್ದು ಹಾಕಿಸಿಕೊಳ್ಳಬೇಕು. ನಂತರ 6ರಿಂದ 9 ತಿಂಗಳ ಅಂತರದಲ್ಲಿ ಮತ್ತೊಂದು ಚುಚ್ಚುಮದ್ದು ಹಾಕಿಸಿಕೊಳ್ಳಬೇಕು.

‘6 ವರ್ಷದ ಕೆಳಗಿನ ಮಕ್ಕಳಿಗೆ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕುವುದು ನಿಷಿದ್ಧ. ಒಂದು ಬಾರಿ ತೆಗೆದುಕೊಂಡರೆ ಅವರಲ್ಲಿ ರೋಗ ನಿರೋಧಕಶಕ್ತಿ ವೃದ್ಧಿಸಲು ಕನಿಷ್ಠ 60 ದಿನ ಬೇಕು. ಅಷ್ಟರ ಒಳಗೆ ಸತ್ತ ಮಂಗಗಳ ಮೇಲಿದ್ದ ಉಣ್ಣೆ ಕಚ್ಚಿದರೆ ಚುಚ್ಚುಮದ್ದು ಪಡೆದಿದ್ದರೂ ಕಾಯಿಲೆಗೆ ಒಳಗಾಗುತ್ತಾರೆ’ ಎಂದು ವಿವರ ನೀಡುತ್ತಾರೆ ತೀರ್ಥಹಳ್ಳಿ ತಾಲ್ಲೂಕು ವೈದ್ಯಾಧಿಕಾರಿ ಡಾ.ಕಿರಣ್.

‘ರೋಗಿಗಳ ರಕ್ತದ ಮಾದರಿ ತಪಾಸಣೆ ಸೇರಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗಿದೆ. ಸತ್ತ ಮಂಗನ ದೇಹ ಕಂಡು ಬಂದಲ್ಲಿ ಮಾಹಿತಿ ನೀಡುವಂತೆ ಅರಣ್ಯ ಇಲಾಖೆ ಮತ್ತು ಗ್ರಾಮಸ್ಥರದಲ್ಲಿ ಮನವಿ ಮಾಡಲಾಗಿದೆ. ಕಾಡಿಗೆ ನಿತ್ಯದ ಕಾರ್ಯಕ್ಕೆ ಹೋಗುವ ಗ್ರಾಮಸ್ಥರು ವ್ಯಾಕ್ಸಿನೇಷನ್ ಮಾಡಿಸಿಕೊಳ್ಳಬೇಕು ಮತ್ತು ಸರ್ಕಾರ ನೀಡುವ ಎಣ್ಣೆಯನ್ನು ಮೈಗೆ ಹಚ್ಚಿಕೊಳ್ಳಬೇಕು’ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ನಿರಂತರ ಸಂಶೋಧನೆ:

ಮಂಗನ ಕಾಯಿಲೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಆರೋಗ್ಯ ಇಲಾಖೆ, ಇಂಡಿಯನ್‌ ಕೌನ್ಸಿಲ್‌ ಆಫ್‌ ರಿಸರ್ಚ್‌, ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಫಾರ್‌ ವೆಟನರಿ ಇನ್ಫರ್‌ಮ್ಯಾಟಿಕ್‌ ಹಾಗೂ ಖಾಸಗಿ ಸಂಸ್ಥೆಗಳು ಮಂಗನ ಕಾಯಿಲೆ ಕುರಿತು ಸಂಶೋಧನೆಯಲ್ಲಿ ತೊಡಗಿವೆ. ಬ್ರಿಟನ್‌ ಸರ್ಕಾರದ ಅಧೀನ ಸಂಸ್ಥೆ ಯುಕೆ ಮೆಡಿಕಲ್‌ ರಿಸರ್ಚ್ ಕೌನ್ಸಿಲ್‌ ಸಹ ಮಲೆನಾಡಿನ ಭಾಗಗಳಲ್ಲಿ ಬೀಡುಬಿಟ್ಟು ಸಂಶೋಧನೆಗೆ ಮುಂದಾಗಿದೆ.

ರೋಗ ಹರಡುವುದು ಹೀಗೆ...

ಮಂಗಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಂಚರಿಸುತ್ತವೆ. ಸತ್ತು ಬಿದ್ದ ತಕ್ಷಣ ಮಂಗನ ದೇಹದ ಮೇಲಿದ್ದ ವೈರಸ್‌ ಹೊತ್ತ ಉಣ್ಣೆಗಳು (ಒಣಗು) ಕಾಡಿನಲ್ಲಿ ಓಡಾಡುವ ಜನರಿಗೆ ಕಚ್ಚಿದರೆ ರೋಗ ಹರಡುತ್ತವೆ. ಸಾಯುವುದಕ್ಕೂ ಮೊದಲು ಮಂಗಗಳು ವಿಪರೀತ ನರಳಾಡುತ್ತವೆ. ಬಾಯಿ, ಜನನಾಂಗಗಳಿಂದ ರಕ್ತಸ್ರಾವವಾಗುತ್ತದೆ. ಮೊಲ, ಹೆಗ್ಗಣ, ಜಾನುವಾರು ಮೂಲಕವೂ ಉಣ್ಣೆಗಳು ಸಾಗಿ ಕಾಯಿಲೆ ಹರಡುತ್ತವೆ.ರೋಗ ಲಕ್ಷಣ ಕಾಣಿಸಿಕೊಂಡವರು ಚಿಕಿತ್ಸೆ ಪಡೆಯದೇ ಇದ್ದರೆ ಎರಡನೇ ಹಂತದಲ್ಲಿ ಮೆದುಳು ಜ್ವರ, ರಕ್ತಸ್ರಾವ ಸಂಭವಿಸುತ್ತದೆ. ಸಾವು ಎದುರಾಗುತ್ತದೆ.

ವಾರದ ಒಳಗೆ ಸಂಶೋಧನೆ ಆರಂಭ

ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಬಳಿ ₹ 4 ಕೋಟಿ ವೆಚ್ಚದಲ್ಲಿ ಕ್ರಿಮಿ ಸಂಶೋಧನಾಲಯ ಆರಂಭಿಸಲಾಗಿದೆ. ಆದರೂ, ಮಂಗನ ಕಾಯಿಲೆ ಖಚಿತಪಡಿಸಲು ಮಣಿಪಾಲ, ಪುಣೆಗೆ ರಕ್ತದ ಮಾದರಿ ಕಳುಹಿಸಲಾಗುತ್ತಿದೆ.

‘ತಾಂತ್ರಿಕ ಸಮಸ್ಯೆಯ ಕಾರಣ ವೈರಾಣು ಆಧಾರಿತ ಕಾಯಿಲೆಗಳನ್ನು ಪತ್ತೆಹಚ್ಚುವ ಕಾರ್ಯ ಆರಂಭಿಸಿರಲಿಲ್ಲ. ವಾರದ ಒಳಗೆ ಮಂಗನಕಾಯಿಲೆ ಪತ್ತೆ ಪರೀಕ್ಷೆ ಆರಂಭಿಸಲಾಗುವುದು’ ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ ವೆಂಕಟೇಶ್.

***

ಮಂಗನಕಾಯಿಲೆಯಿಂದ ಮೃತಪಟ್ಟವರ ಸಂಖ್ಯೆ

ವರ್ಷ ಸಾವು

2015 1

2016 2

2017 3

2018 4

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT