ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು, ಚಿಕ್ಕಮಗಳೂರಿನಲ್ಲಿ ಮುಂಗಾರು ಚುರುಕು

ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನಮಟ್ಟ ಹೆಚ್ಚಳ
Last Updated 5 ಜುಲೈ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮುಂಗಾರು ಚುರುಕಾಗಿದೆ. ಕರಾವಳಿ, ಶಿವಮೊಗ್ಗ, ಉತ್ತರ ಕನ್ನತ ಮತ್ತು ಉತ್ತರ ಕರ್ನಾಟಕ ಭಾಗದ ಕೆಲವು ಭಾಗಗಳಲ್ಲಿ ಶುಕ್ರವಾರ ಸಾಧಾರಣ ಮಳೆಯಾಗಿದೆ.

ಕೊಡಗು ಜಿಲ್ಲೆಯಾದ್ಯಂತ ಗಾಳಿ ಸಹಿತ ಧಾರಾಕಾರ ಮಳೆಯಾಗುತ್ತಿದ್ದು, ನದಿ, ಹಳ್ಳ– ಕೊಳ್ಳಗಳು ಮೈದುಂಬಿಕೊಳ್ಳುತ್ತಿವೆ. ಬ್ರಹ್ಮಗಿರಿ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಮಳೆಯಿಂದ ಭಾಗಮಂಡಲದ ತ್ರಿವೇಣಿ ಸಂಗಮವು ಬಹುತೇಕ ಭರ್ತಿಯಾಗಿದೆ. ಇನ್ನೆರಡು ದಿನ ನಿರಂತರ ಮಳೆಯಾದರೆ ತ್ರಿವೇಣಿ ಸಂಗಮ ಜಲಾವೃತವಾಗಲಿದೆ. ಕಾವೇರಿ ನದಿಯಲ್ಲೂ ನೀರಿನ ಮಟ್ಟ ಏರಿಕೆ ಕಂಡಿದೆ.

ವಿರಾಜಪೇಟೆ, ನಾಪೋಕ್ಲು, ಸುಂಟಿಕೊಪ್ಪ, ಕುಶಾಲನಗರ ವ್ಯಾಪ್ತಿಯಲ್ಲೂ ಬಿಡುವು ಕೊಟ್ಟು ಮಳೆ ಅಬ್ಬರಿಸುತ್ತಿದೆ. ಸೋಮವಾರಪೇಟೆ, ಶನಿವಾರಸಂಜೆ ಸುತ್ತಮುತ್ತ ಸಾಧಾರಣ ಮಳೆ ಸುರಿಯುತ್ತಿದೆ. ಮಡಿಕೇರಿ, ಮುಕ್ಕೋಡ್ಲು, ಹಟ್ಟಿಹೊಳೆ, ಮಾದಾಪುರ ಭಾಗದಲ್ಲೂ ನಿರಂತರ ಮಳೆಯಿಂದ ಹಾರಂಗಿ ಜಲಾಶಯದ ಒಳಹರಿವು 432 ಕ್ಯುಸೆಕ್‌ಗೆ ಏರಿಕೆಯಾಗಿದೆ.

ಮೈಸೂರು ಸೇರಿದಂತೆ ಜಿಲ್ಲೆಯ ಹಲವೆಡೆ ಸಾಧಾರಣ ಮಳೆಯಾಗಿದೆ.

ಶಾಲಾ–ಕಾಲೇಜುಗಳಿಗೆ ರಜೆ

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಮುಂಗಾರು ಚುರುಕಾಗಿದ್ದು, ವಿವಿಧೆಡೆ ಉತ್ತಮ ಮಳೆಯಾಗಿದೆ. ಹೆಚ್ಚಿದ ಮಳೆ ಹಿನ್ನೆಲೆಯಲ್ಲಿ ಮೂಡಿಗೆರೆ ತಾಲ್ಲೂಕಿನಲ್ಲಿ ಜು. 6ರಂದು ಶಾಲೆ ಹಾಗೂ ಪಿ.ಯು ಕಾಲೇಜುಗಳಿಗೆ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌ ರಜೆ ಘೋಷಿಸಿದ್ದಾರೆ.

ಆಲ್ದೂರು, ಮೂಡಿಗೆರೆ, ಕೊಟ್ಟಿಗೆಹಾರ, ಚಾರ್ಮಾಡಿಘಟ್ಟ ಪ್ರದೇಶ, ಕಳಸ, ಕೊಪ್ಪ, ಎನ್‌.ಆರ್‌.ಪುರ, ಶೃಂಗೇರಿ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಗಾಳಿಯ ಅಬ್ಬರವೂ ಇತ್ತು. ಬೆಳಿಗ್ಗೆಯಿಂದ ಬಿಟ್ಟುಬಿಟ್ಟು ಮಳೆಯಾಗಿದೆ. ಬೆಳೆಗಾರರಲ್ಲಿ ಸಂತಸ ಮೂಡಿಸಿದೆ. ಹೇಮಾವತಿ, ಭದ್ರಾ, ತುಂಗಾ ನದಿಗಳ ಹರಿವಿನಲ್ಲಿ ಕೊಂಚ ಏರಿಕೆಯಾಗಿದೆ. ಜಲಪಾತಗಳು ಮೈದುಂಬಿಕೊಳ್ಳುತ್ತಿವೆ.

ಮೂಡಿಗೆರೆ ತಾಲ್ಲೂಕಿನ ಭೈರಾಪುರ, ಗುತ್ತಿ, ಮೂಲರಹಳ್ಳಿ, ದೇವರುಂದ, ಹೊಸ್ಕೆರೆ, ಮೇಕನಗದ್ದೆ ಭಾಗಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದರಿಂದ ಬೆಳಿಗ್ಗೆ ವೇಳೆಗೆ ಭತ್ತದ ಗದ್ದೆಗಳೆಲ್ಲವೂ ಜಲಾವೃತವಾಗಿದ್ದವು. ತತ್ಕೊಳ ಗ್ರಾಮದಲ್ಲಿ ಶುಂಠಿ ಗದ್ದೆಗೆ ಮಳೆ ನೀರು ನುಗ್ಗಿ ಹಾನಿ ಸಂಭವಿಸಿದೆ.

ಚಾರ್ಮಾಡಿ ಘಾಟ್‌ನಲ್ಲಿ ಮಂಜುಮುಸುಕಿನ ವಾತಾವರಣ ಇದ್ದುದರಿಂದ, ವಾಹನ ಚಲಾಯಿಸಲು ಚಾಲಕರು ಪ್ರಯಾಸಪಟ್ಟರು. ಕಳಸ ತಾಲ್ಲೂಕಿನಾದ್ಯಂತ ಗುರುವಾರ ರಾತ್ರಿಯಿಂದ ಜಡಿಮಳೆ ಆರಂಭವಾಗಿದೆ.

ಕರಾವಳಿಯಲ್ಲಿ ಸಾಧಾರಣ ಮಳೆ

ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಶುಕ್ರವಾರ ಸಾಧಾರಣ ಮಳೆಯಾಗಿದೆ. ಕಾರ್ಕಳ ತಾಲ್ಲೂಕಿನಲ್ಲಿ ರೈತರು ಭತ್ತದ ಸಸಿ ನಾಟಿ ಆರಂಭಿಸಿದ್ದಾರೆ.

ಶಿವಮೊಗ್ಗ: ಜಿಲ್ಲೆಯ ವಿವಿಧೆಡೆ ಶುಕ್ರವಾರ ಉತ್ತಮ ಮಳೆಯಾಗಿದೆ. ಸಾಗರ, ಕೋಣಂದೂರು, ಶಿಕಾರಿಪುರ, ರಿಪ್ಪನ್‌ಪೇಟೆ, ತೀರ್ಥಹಳ್ಳಿ ಹಾಗೂ ಆನವಟ್ಟಿಯಲ್ಲಿ ಮಳೆ ಸುರಿದಿದೆ.

ದಾವಣಗೆರೆಯಲ್ಲಿ ನಗರದಲ್ಲಿ ಸಾಧಾರಣ ಮಳೆಯಾಗಿದೆ. ಮಲೇಬೆನ್ನೂರಿನಲ್ಲಿ ಜಡಿ ಮಳೆ ಹಾಗೂ ಸಂತೇಬೆನ್ನೂರಿನಲ್ಲಿ ತುಂತುರು ಮಳೆಯಾಗಿದೆ.

ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗುರುವಾರ ರಾತ್ರಿಯಿಂದ ಮತ್ತೆ ಬಿರುಸಿನ ಮಳೆ ಆರಂಭವಾಗಿದೆ. ಮಲಪ್ರಭಾ ಉಗಮ ಸ್ಥಳವಾದ ಕಣಕುಂಬಿ ಹಾಗೂ ಪಶ್ಚಿಮ ಘಟ್ಟದ ಅಂಚಿನಲ್ಲಿರುವ ಖಾನಾಪುರದ ಸುತ್ತಲಿನ ಪ್ರದೇಶಗಳಲ್ಲಿ ಮಳೆಯಾಗಿದೆ. ಮಲಪ್ರಭಾ ನದಿಗೆ ಹೆಚ್ಚಿನ ಹರಿವು ಬರುತ್ತಿದೆ. ಅಥಣಿ ತಾಲ್ಲೂಕಿನ ನಂದೇಶ್ವರ ಗ್ರಾಮದ ಬಳಿ ಕೃಷ್ಣೆ ರಭಸದಿಂದ ಹರಿಯುತ್ತಿದ್ದು, ನದಿ ದಡದಲ್ಲಿ ಮೇಯುತ್ತಿದ್ದ ಜೋಡೆತ್ತುಗಳು ಕೊಚ್ಚಿ ಹೋಗಿ ಸಾವಿಗೀಡಾಗಿವೆ.

ಕಾರವಾರ ಬಳಿಯಅರಗಾದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ವೇಳೆ ಚರಂಡಿ ಮುಚ್ಚಿದ್ದರಿಂದ ಮೇಲಿನಕೇರಿಯ ಮನೆಗಳಿಗೆ ನೀರು ನುಗ್ಗಿದೆ. ಹೆದ್ದಾರಿಯಲ್ಲೂ ಅರ್ಧ ಅಡಿಯಷ್ಟು ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾಯಿತು.

ಹುಬ್ಬಳ್ಳಿ, ಧಾರವಾಡ ನಗರಗಳಲ್ಲಿ ತುಂತುರು ಮಳೆಯಾಗಿದೆ.

ಹೆದ್ದಾರಿಯಲ್ಲಿ ಬಿರುಕು: ಕುಸಿಯುವ ಆತಂಕ

ಮಡಿಕೇರಿ: ಎರಡು ದಿನ ಸುರಿದ ಮಳೆಗೆ ಮಡಿಕೇರಿ–ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ರ ಕಾಟಕೇರಿ ಜಂಕ್ಷನ್‌ ಬಳಿ ಹೆದ್ದಾರಿಯಲ್ಲಿ ದೊಡ್ಡ ಬಿರುಕು ಕಾಣಿಸಿಕೊಂಡಿದ್ದು ಮತ್ತೆ ಕುಸಿಯುವ ಆತಂಕ ಎದುರಾಗಿದೆ.

ಕಳೆದ ವರ್ಷ ಭೂಕುಸಿತವಾಗಿದ್ದ ಸ್ಥಳದಲ್ಲಿ ಮರಳಿನ ಚೀಲ ಇಟ್ಟು, ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಮಾಡಲಾಗಿತ್ತು. ಈಗ ಅದೇ ಸ್ಥಳದಲ್ಲಿ ಬಿರುಕು ಕಾಣಿಸಿಕೊಂಡಿದೆ. ಬ್ಯಾರಿಕೇಡ್‌ ಹಾಕಿ, ಆ ಬದಿಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಒಂದು ಬದಿಯಲ್ಲಿ ಮಾತ್ರ ಲಘು ವಾಹನಗಳು ಸಂಚರಿಸುತ್ತಿವೆ. ಸರಕು ಸಾಗಣೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್‌ ಹಾಗೂ ಕೆ.ಜಿ.ಬೋಪಯ್ಯ ಅವರು ಶುಕ್ರವಾರ ಸ್ಥಳಕ್ಕೆ ಭೇಟಿ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ಗಳಿಗೆ ಸೂಚಿಸಿದರು.

ಶುಕ್ರವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಭಾಗಮಂಡಲದಲ್ಲಿ 101 ಮಿ.ಮೀ, ಮಡಿಕೇರಿಯಲ್ಲಿ 46 ಮಿ.ಮೀ, ಸಂಪಾಜೆಯಲ್ಲಿ 34 ಮಿ.ಮೀ, ಶಾಂತಳ್ಳಿಯಲ್ಲಿ 43 ಮಿ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT