ಮಂಗಳವಾರ, ಏಪ್ರಿಲ್ 13, 2021
24 °C

ರಾಜ್ಯದ ಹಲವೆಡೆ ಬಿರುಸು ಪಡೆದ ಮುಂಗಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹವಾಮಾನ ಇಲಾಖೆ ಕರಾವಳಿ ಜಿಲ್ಲೆಗಳು ಹಾಗೂ ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ ಮುನ್ಸೂಚನೆ ನೀಡಿ ‘ರೆಡ್‌ ಅಲರ್ಟ್‌’ ಘೋಷಣೆ ಮಾಡಿದ್ದರೂ ಸಹ ಶನಿವಾರ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗಿಲ್ಲ. ಹಾಗಾಗಿ ಈಗ ಕೊಡಗು ಜಿಲ್ಲೆಯಲ್ಲಿ ‘ಆರೆಂಜ್‌ ಅಲರ್ಟ್‌’ ಘೋಷಿಸಲಾಗಿದೆ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಶುಕ್ರವಾರ ರಾತ್ರಿ ಬಿರುಸಿನ ಮಳೆ ಸುರಿದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟಾರೆ 79.4 ಮಿ.ಮೀ. ಮಳೆ ದಾಖಲಾಗಿದೆ. ಬಂಟ್ವಾಳ ತಾಲ್ಲೂಕಿನಲ್ಲಿ ಅತಿ ಹೆಚ್ಚು 108.7 ಮಿ.ಮೀ. ಮಳೆ ಸುರಿದಿದೆ. ಮಳೆಯಿಂದಾಗಿ ಅಡ್ಡೂರು ಬಳಿ ರಸ್ತೆಗೆ ಮರ ಬಿದ್ದಿದ್ದರಿಂದ ಬಿ.ಸಿ.ರೋಡ್‌–ಗುರುಪುರ ನಡುವಿನ ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕು ಪಡೆದುಕೊಂಡಿದೆ. ಭಾಗಮಂಡಲ, ತಲಕಾವೇರಿ, ಬ್ರಹ್ಮಗಿರಿ, ನಾಪೋಕ್ಲು, ಚೇರಂಬಾಣೆ, ಶಾಂತಳ್ಳಿ, ಕರಿಕೆ, ಕುಟ್ಟ, ಮಾಕುಟ್ಟ ಭಾಗದಲ್ಲಿ ನಿರಂತರ ಸುರಿಯುತ್ತಿದ್ದು, ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನಮಟ್ಟ ಕೊಂಚ ಏರಿಕೆಯಾಗಿದೆ. ಶನಿವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಯ ಅವಧಿಯಲ್ಲಿ ಸಂಪಾಜೆ 80 ಮಿ.ಮೀ, ಭಾಗಮಂಡಲ 70 ಮಿ.ಮೀ, ವಿರಾಜಪೇಟೆ 22, ನಾಪೋಕ್ಲು 22, ಮಡಿಕೇರಿಯಲ್ಲಿ 30 ಮಿ.ಮೀ ಮಳೆಯಾಗಿದೆ. 

ನಿರೀಕ್ಷಿತ ಮಳೆಯಾಗದ ಪರಿಣಾಮ, ಭಾರತೀಯ ಹವಾಮಾನ ಇಲಾಖೆಯು ‘ರೆಡ್‌ ಅಲರ್ಟ್‌’ ಅನ್ನು ಹಿಂಪಡೆದು ‘ಆರೆಂಜ್‌ ಅಲರ್ಟ್‌’ ಘೋಷಿಸಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕು ಹೊರತುಪಡಿಸಿದರೆ ಜಿಲ್ಲೆಯ ಎಲ್ಲೆಡೆ ಶನಿವಾರ ಸಂಜೆಯ ಬಳಿಕ ತುಂತುರು ಮಳೆಯಾಗಿದೆ. ಹೊಸನಗರ ತಾಲ್ಲೂಕಿನ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣ ಸೇರಿ ತಾಲ್ಲೂಕಿನ ವಿವಿಧೆಡೆ ಶನಿವಾರ ಮಧ್ಯಾಹ್ನ ಮತ್ತು ಸಂಜೆ ಮಳೆ ಸುರಿಯಿತು.

ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಕುಂಚಾವರಂ, ಗಾರಂಪಳ್ಳಿ, ಬಸಂತಪುರ ಮತ್ತಿತರೆಡೆ ಉತ್ತಮ ಮಳೆ ಸುರಿಯಿತು.  ಬೀದರ್‌ ನಗರ, ಬಗದಲ್, ಜನವಾಡ, ಕಮಠಾಣ, ಹಲಬರ್ಗಾ, ನಿಟ್ಟೂರ, ಹಳ್ಳಿಖೇಡ, ನಿರ್ಣಾ, ಹಲಸೂರ, ಅಷ್ಟೂರ, ಚಿಮಕೋಡದಲ್ಲಿಯೂ ಒಳ್ಳೆಯ ಮಳೆಯಾಯಿತು.

ರಾಯಚೂರು ಜಿಲ್ಲೆಯ  ಮಸ್ಕಿ, ಸಂತೆಕೆಲ್ಲೂರು, ಅಂಕುಶದೊಡ್ಡಿ ಸೇರಿ ವಿವಿಧೆಡೆ ಶುಕ್ರವಾರ ರಾತ್ರಿ ಭಾರಿ ಪ್ರಮಾಣದ ಮಳೆಯಾಗಿದೆ. ಬೀದರ್‌–ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ 150 (ಎ)ಯಲ್ಲಿ ಸಂತೆಕೆಲ್ಲೂರು ಗಡ್ಡಿ ಹಳ್ಳಕ್ಕೆ ನಿರ್ಮಿಸಿರುವ ತಾತ್ಕಾಲಿಕ ಸೇತುವೆ ಹಳ್ಳದ ಪ್ರವಾಹಕ್ಕೆ ಮತ್ತೆ ಕೊಚ್ಚಿ ಹೋಗಿದೆ. ಕೆಲ ದಿನಗಳ ಹಿಂದೆ ಕೊಚ್ಚಿಹೋಗಿದ್ದ ಇದನ್ನು ಶುಕ್ರವಾರ ಬೆಳಿಗ್ಗೆಯಷ್ಟೆ ದುರಸ್ತಿ ಮಾಡಲಾಗಿತ್ತು. 

ವೃದ್ಧ ಬಲಿ: ಮಳೆ ನೀರಿನ ರಭಸಕ್ಕೆ ಸಿಕ್ಕಿ ಬಾದಾಮಿ ತಾಲ್ಲೂಕಿನ ಬೇಲೂರು ಗ್ರಾಮದ ರಾಚಪ್ಪ ಮಡ್ಡಿ (70) ಎಂಬುವವರು ಶುಕ್ರವಾರ ತಡರಾತ್ರಿ ಮೃತಪಟ್ಟಿದ್ದಾರೆ. ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಧಾರಾಕಾರ ಮಳೆಯಾಗಿದೆ. ಮಳೆಯಿಂದ ಹಳ್ಳಗಳು ತುಂಬಿ ಹರಿದು ಚೆಕ್‌ ಡ್ಯಾಂಗಳು ಭರ್ತಿಯಾಗಿವೆ.

3 ದಿನ ರೈಲು ಸಂಚಾರ ಸ್ಥಗಿತ
ಮಂಗಳೂರು: ಮಳೆಯಿಂದಾಗಿ ಶಿರಾಡಿ ಘಾಟ್‌ ರೈಲು ಮಾರ್ಗದ ಸಿರಿಬಾಗಿಲು ಮಣಿಭಂಡ ಬಳಿ ಅಪಾಯಕಾರಿ ಬಂಡೆಯೊಂದು ಹಳಿಗೆ ವಾಲಿದ್ದು, ಹಳಿ ಮೇಲೆ ಮಣ್ಣು ಬಿದ್ದಿದೆ. ಅದನ್ನು ತೆರವುಗೊಳಿಸುವ ಕಾರ್ಯ ನಡೆಸಲಾಗುತ್ತಿದ್ದು, ಈ ಮಾರ್ಗವಾಗಿ ಮಂಗಳೂರು– ಬೆಂಗಳೂರು ನಡುವಿನ ರೈಲು ಓಡಾಟವನ್ನು ಇದೇ 22 ರವರೆಗೆ ಸ್ಥಗಿತಗೊಳಿಸಲಾಗಿದೆ.

ಬಂಡೆಗಳು ಜಾರುವ ಸ್ಥಿತಿಯಲ್ಲಿದ್ದು, ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ರೈಲು ಹಳಿಯ ಮೇಲೆ ಬೀಳುವ ಸಾಧ್ಯತೆ ಇದೆ. ಮುನ್ನೆಚ್ಚರಿಕೆ ಕ್ರಮವಾಗಿ ಬಂಡೆಗಳನ್ನು ಸ್ಫೋಟಿಸಿ, ತೆರವುಗೊಳಿಸಲಾಗುತ್ತಿದೆ. ಹೀಗಾಗಿ ಮೂರು ದಿನ ಈ ಮಾರ್ಗದಲ್ಲಿ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ದಕ್ಷಿಣ ರೈಲ್ವೆ ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು