ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವಿಎಂ ರ‍್ಯಾಂಡಮೈಸೇಷನ್ ಪೂರ್ಣ

ವಿಧಾನಸಭೆ ಚುನಾವಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ
Last Updated 17 ಏಪ್ರಿಲ್ 2018, 8:15 IST
ಅಕ್ಷರ ಗಾತ್ರ

ಹಾಸನ: ವಿಧಾನಸಭೆ ಚುನಾವಣೆಗೆ ಸಕಲ ತಯಾರಿ ಮಾಡಿಕೊಂಡಿರುವ ಜಿಲ್ಲಾಡಳಿತ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಜಿಲ್ಲಾ ಮಟ್ಟದ ಮೊದಲ ಹಂತದ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ರ‍್ಯಾಂಡಮೈಸೇಷನ್ ಕಾರ್ಯ ಪೂರ್ಣಗೊಳಿಸಿತು.

ಸಹಾಯಕ ಚುನಾವಣಾಧಿಕಾರಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್.ಪೂರ್ಣಿಮಾ ಕ್ಷೇತ್ರವಾರು ರಾಂಡಮೈಸೇಷನ್ ಪರಿಶೀಲಿಸಿದರು.
ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯುನ್ಮಾನ ಮತಯಂತ್ರ, ವಿ.ವಿ ಪ್ಯಾಟ್ ಗಳನ್ನು ಸಂಗ್ರಹಿಸಿಡಲಾಗಿದೆ. ಏ. 17ರಿಂದ ಮತಯಂತ್ರಗಳ ವ್ಯವಸ್ಥಿತ ಜೋಡಣೆ ಕಾರ್ಯ ಆರಂಭವಾಗಲಿದೆ. ಆಯಾ ಮತಗಟ್ಟೆಗೆ ಒಂದೊಂದು ಕ್ರಮಸಂಖ್ಯೆ ನೀಡಲಾಗಿದ್ದು, ಅದರ ಆಧಾರದ ಮೇಲೆ ಮತಯಂತ್ರಗಳನ್ನು ಪರಿಶೀಲಿಸಿ ವಿಂಗಡಿಸಿ, ಕ್ರಮಬದ್ಧವಾಗಿ ಜೋಡಿಸಲಾಗುವುದು. ನಂತರ ಇನ್ನು ಮೂರು ದಿನದಲ್ಲಿ ಆಯಾ ವಿಧಾನಸಭಾ ಕ್ಷೇತ್ರಗಳಿಗೆ ವಿದ್ಯುನ್ಮಾನ ಮತಯಂತ್ರಗಳನ್ನು ಕಳುಹಿಸಿಕೊಡಲಾಗುವುದು ಎಂದು ಪೂರ್ಣಿಮಾ ತಿಳಿಸಿದರು.

ಎರಡನೇ ಹಂತದ ರ‍್ಯಾಂಡಮೈಸೇಷನ್ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ನಡೆಯಲಿದ್ದು, ಆ ಬಳಿಕ ಮತಗಟ್ಟೆಗಳಿಗೆ ವಿದ್ಯುನ್ಮಾನ ಮತಯಂತ್ರಗಳನ್ನು ರವಾನೆ ಮಾಡಲಾಗುತ್ತದೆ. ಪಾರದರ್ಶಕ ಚುನಾವಣೆಗಾಗಿ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ ಎಂದರು.

ಜಿಲ್ಲೆಯಲ್ಲಿ ಮತಗಟ್ಟೆಗಳ ಸಂಖ್ಯೆ ಹೆಚ್ಚಿಸುವಂತೆ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಮನವಿಗೆ ಸ್ಪಂದನೆ ದೊರೆತಿದ್ದು, 1966 ರಿಂದ 1978ಕ್ಕೆ ಹೆಚ್ಚಿಸಲಾಗಿದೆ. ಶ್ರವಣಬೆಳಗೊಳ 271, ಅರಸೀಕೆರೆ 276 (1– ತಾತ್ಕಾಲಿಕ ಮತಗಟ್ಟೆ), ಬೇಲೂರು 272 (2), ಹಾಸನ 272 (6), ಹೊಳೆನರಸೀಪುರ 317, ಅರಕಲಗೂಡು 287 (2), ಸಕಲೇಶಪುರ 283 (1) ಮತಗಟ್ಟೆ ತೆರೆಯಲಾಗಿದೆ. ಜಿಲ್ಲೆಯಲ್ಲಿ ಒಟ್ಟು 1978 ಮತಗಟ್ಟೆಗಳಿದ್ದು, 2705 ಬ್ಯಾಲೆಟ್ ಯುನಿಟ್‌, 2440 ಕಂಟ್ರೋಲ್‌ ಯುನಿಟ್‌ ಮತ್ತು 2,499 ವಿ.ವಿ. ಪ್ಯಾಟ್‌ಗಳು ಲಭ್ಯವಿದೆ ಎಂದು ಹೇಳಿದರು.

ಮತದಾರರ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೂತ್ ಮಟ್ಟದ ಅಧಿಕಾರಿಗಳು ಮತದಾರರ ನೋಂದಣಿ, ಸೇರ್ಪಡೆ ಹಾಗೂ ಲೋಪದೋಷಗಳ ತಿದ್ದುಪಡಿ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಜೆಡಿಎಸ್‌ ಹಾಸನ ತಾಲ್ಲೂಕು ಘಟಕದ ಅಧ್ಯಕ್ಷ ದ್ಯಾವೇಗೌಡ, ಕಾಂಗ್ರೆಸ್‌ ಜಿಲ್ಲಾ ಘಟಕದ ಉಪಾಧ್ಯಕ್ಷ ನಾರಾಯಣ್‌ಗೌಡ ಇದ್ದರು.

ಸಹಾಯವಾಣಿ (ಶುಲ್ಕ ರಹಿತ) 1077

ಜಿಲ್ಲೆಯಲ್ಲಿ ಸಾರ್ವಜನಿಕರು ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದಲ್ಲಿ ದೂರವಾಣಿ ಮೂಲಕ ದೂರುಗಳನ್ನು 1077 (ಶುಲ್ಕ ರಹಿತ)ಗೆ ಸಲ್ಲಿಸಬಹುದಾಗಿದೆ. ಇದು ದಿನದ 24 ಗಂಟೆಗಳೂ ಕಾರ್ಯ ನಿರ್ವಹಿಸಲಿದೆ. ಇದರಲ್ಲಿ ದಾಖಲಾದ ದೂರುಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಮೂಲಕ ಶೀಘ್ರ ಕ್ರಮ ಕೈಗೊಳ್ಳಲಾಗುವುದು. ದೂರು ನೀಡುವವರ ಮಾಹಿತಿಯನ್ನು ಗೌಪ್ಯವಾಗಿರಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ರೋಹಿಣಿ ಸಿಂಧೂರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT