ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಮಹಿಳೆ ನಳಿನಿಗೌಡಗೆ ನೈತಿಕ ಧೈರ್ಯ ತುಂಬಿದ ಮುಖಂಡರು

ರೈತ ಮಹಿಳೆಗೆ ಡಿಕೆಶಿ– ಸಿದ್ದರಾಮಯ್ಯ ದೂರವಾಣಿ ಕರೆ
Last Updated 25 ಮೇ 2020, 13:40 IST
ಅಕ್ಷರ ಗಾತ್ರ

ಕೋಲಾರ: ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌ ಅವರು ತಾಲ್ಲೂಕಿನ ಹೊಸಮಟ್ನಹಳ್ಳಿಯಲ್ಲಿರುವ ರೈತ ಮಹಿಳೆ ನಳಿನಿಗೌಡ ಅವರ ಮನೆಗೆ ಸೋಮವಾರ ಭೇಟಿ ನೀಡಿ ನೈತಿಕ ಸ್ಥೈರ್ಯ ತುಂಬಿದರು.

ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನಳಿನಿಗೌಡ ಅವರಿಗೆ ದೂರವಾಣಿ ಕರೆ ಮಾಡಿ, ‘ನಿಮ್ಮ ಜನಪರ, ರೈತಪರ ಹೋರಾಟ ಮುಂದುವರಿಸಿ. ನಾವು ನಿಮ್ಮ ಜತೆಗಿದ್ದೇವೆ. ಯಾವುದಕ್ಕೂ ಧೃತಿಗೆಡಬೇಡಿ’ ಎಂದು ಧೈರ್ಯ ಹೇಳಿದರು.

‘ಹೋರಾಟ ಮಾಡುವುದು ದೇಶದ ಪ್ರತಿ ನಾಗರೀಕನ ಹಕ್ಕು. ನೀವು ವೈಯಕ್ತಿಕ ಅನುಕೂಲಕ್ಕೆ ಹೋರಾಟ ಮಾಡಿಲ್ಲ. ಜಿಲ್ಲೆಯ ಕೆರೆಗಳ ರಕ್ಷಣೆಗಾಗಿ ಹೋರಾಟ ನಡೆಸಿದ್ದೀರಿ. ಯಾವುದೇ ಬೆದರಿಕೆಗೆ ಬಗ್ಗದಿರಿ’ ಎಂದು ಸಲಹೆ ನೀಡಿದರು.

‘ನಿಮ್ಮ ಹೋರಾಟದ ಉದ್ದೇಶ ಒಳ್ಳೆಯದಿದೆ. ಕೆರೆಗಳ ಒತ್ತುವರಿ ತೆರವಿಗೆ ನಡೆಸಿರುವ ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಮುಂದೆ ನಮ್ಮ ಪಕ್ಷದ ಸರ್ಕಾರವೇ ಅಧಿಕಾರಕ್ಕೆ ಬಂದರೂ ನಿಮ್ಮ ಹೋರಾಟ ಮುಂದುವರಿಸಿ. ಹೋರಾಟಗಾರರಾಗಿ ಪ್ರಶ್ನಿಸುವ ಹಕ್ಕು ಕಳೆದುಕೊಳ್ಳದಿರಿ’ ಎಂದು ಸುದರ್ಶನ್‌ ಹೇಳಿದರು.

ಇತ್ತೀಚೆಗೆ ಜಿಲ್ಲೆಗೆ ಬಂದಿದ್ದ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ನಳಿನಿಗೌಡರ ವಿರುದ್ಧ, ‘ಹೇ, ರಾಸ್ಕಲ್‌‌. ಬಾಯಿ ಮುಚ್ಚು’ ಎಂದು ಕಟು ಪದ ಬಳಕೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದರು. ಸಚಿವರ ವರ್ತನೆಗೆ ರಾಜ್ಯದೆಲ್ಲೆಡೆ ವಿರೋಧ ವ್ಯಕ್ತವಾಗಿತ್ತು.

ನಡವಳಿಕೆ ಬದಲಾಗಬಾರದು: ಸುದ್ದಿಗಾರರೊಂದಿಗೆ ಮಾತನಾಡಿದ ಸುದರ್ಶನ್, ‘ಹೋರಾಟದ ಹಿನ್ನೆಲೆಯಿಂದ ಬಂದಿರುವ ಮಾಧುಸ್ವಾಮಿ ಅವರು ಬುದ್ಧಿವಂತ ಸಚಿವರಾಗಿದ್ದಾರೆ. ಅಧಿಕಾರ ಬಂದಾಗ ನಡವಳಿಕೆ ಬದಲಾಗಬಾರದು’ ಎಂದು ಸಲಹೆ ನೀಡಿದರು.

‘ಸಚಿವರಿಗೆ ತಾಳ್ಮೆ ಇರಬೇಕು. ಮತ್ತೆ ಮತ್ತೆ ಇಂತಹ ತಪ್ಪು ಮಾಡುತ್ತಿದ್ದರೆ ಅದು ಜನರಲ್ಲಿ ಋಣಾತ್ಮಕ ಭಾವನೆ ಗಟ್ಟಿಗೊಳಿಸುತ್ತದೆ. ಮಾಧುಸ್ವಾಮಿ ಅವರು ಇನ್ನಾದರೂ ತಪ್ಪು ಸರಿಪಡಿಸಿಕೊಂಡು ಮುನ್ನಡೆಯುವ ಜವಾಬ್ದಾರಿ ತೋರಬೇಕು’ ಎಂದು ಕಿವಿಮಾತು ಹೇಳಿದರು.

‘ನಳಿನಿಗೌಡರ ವಿರುದ್ದ ಬಿಜೆಪಿಯ ಐಟಿ ಸೆಲ್ ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಮಾಡಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಬಿಜೆಪಿ ಮುಖಂಡರು ತಮ್ಮ ಗುಣ ಬದಲಿಸಿಕೊಳ್ಳದಿದ್ದರೆ ಜನ ಸುಮ್ಮನೆ ನೋಡಿಕೊಂಡು ಕೂರುವುದಿಲ್ಲ. ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ’ ಎಂದರು.

ಜಿಲ್ಲಾ ಕಾಂಗ್ರೆಸ್ ಘಟಕದ ಉಪಾಧ್ಯಕ್ಷ ಮುರಳಿಗೌಡ, ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕದ ಸಂಚಾಲಕ ಕೆ.ಶ್ರೀನಿವಾಸಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT