ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ಯಾಗೋರ್ ಕಿನಾರೆಗೆ ಬರಲಿದೆ ‘ಟುಪಲೇವ್’

ಕಾರವಾರದಲ್ಲಿ ಯುದ್ಧ ವಿಮಾನ ವಸ್ತು ಸಂಗ್ರಹಾಲಯ ಸ್ಥಾಪನೆ ಒಪ್ಪಂದಕ್ಕೆ ಸಹಿ
Last Updated 3 ಮಾರ್ಚ್ 2020, 12:43 IST
ಅಕ್ಷರ ಗಾತ್ರ

ಕಾರವಾರ: ಬಹುನಿರೀಕ್ಷಿತ ‘ಟುಪಲೇವ್ 142 ಎಂ’ ಯುದ್ಧ ವಿಮಾನದ ವಸ್ತು ಸಂಗ್ರಹಾಲಯದ ಸ್ಥಾಪನೆಗೆ ಇದ್ದ ತೊಡಕುಗಳು ನಿವಾರಣೆಯಾಗಿವೆ. ಈ ಸಂಬಂಧರಾಜ್ಯ ಸರ್ಕಾರ ಮತ್ತು ನೌಕಾಪಡೆಯ ನಡುವೆ ಒಪ್ಪಂದ ಏರ್ಪಟ್ಟಿದೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಸರಳ ಸಮಾರಂಭದಲ್ಲಿ, ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಮತ್ತು ನೌಕಾನೆಲೆಯ ಕರ್ನಾಟಕ ಫ್ಲ್ಯಾಗ್ ಆಫೀಸರ್ ರಿಯರ್ ಅಡ್ಮಿರಲ್ ಮಹೇಶ್ ಸಿಂಗ್ ಕರಾರು ಪತ್ರಗಳಿಗೆ ಸಹಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ‘ಯುದ್ಧ ವಿಮಾನ ವಸ್ತು ಸಂಗ್ರಹಾಲಯದ ಸ್ಥಾಪನೆಗೆ ಒಪ್ಪಂದದ ಪ್ರಕಾರ ತಲಾ ಶೇ 50ರಷ್ಟು ಖರ್ಚನ್ನು ರಾಜ್ಯ ಸರ್ಕಾರ ಹಾಗೂ ನೌಕಾಪಡೆ ಭರಿಸಲಿವೆ. ಈ ಹಿಂದೆ ₹ 4 ಕೋಟಿ ವೆಚ್ಚ ತಗಲುವ ಅಂದಾಜು ಮಾಡಲಾಗಿತ್ತು.ಅದರಂತೆ ರಾಜ್ಯ ಸರ್ಕಾರದಿಂದ ಈಗಾಗಲೇ ₹ 2 ಕೋಟಿ ಬಿಡುಗಡೆಯಾಗಿದೆ. ಈಗ ವೆಚ್ಚ ಹೆಚ್ಚಾಗಿದ್ದು, ₹ 10 ಕೋಟಿ ಬೇಕಾಗಲಿದೆ. ಹೆಚ್ಚುವರಿ ಮೊತ್ತವನ್ನು ಕೂಡ ನೀಡಲು ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದು ತಿಳಿಸಿದರು.

‘ನೌಕಾನೆಲೆ ಸ್ಥಾಪನೆಗೆ ದೇಶದಲ್ಲೇ ಅತ್ಯಂತ ಸರಳವಾಗಿ ಭೂಸ್ವಾಧೀನ ಪ್ರಕ್ರಿಯೆ ಇಲ್ಲಿ ನಡೆದಿದೆ. ಸೀಬರ್ಡ್ ದೊಡ್ಡ ನೌಕಾನೆಲೆಯಾಗಿರುವ ಕಾರಣ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಬೇಕು. ವಸ್ತು ಸಂಗ್ರಹಾಲಯದ ಸ್ಥಾಪನೆಯ ಖರ್ಚನ್ನು ಭರಿಸಬೇಕು ಎಂದು ನೌಕಾನೆಲೆ ಮನವಿ ಮಾಡಲಾಗಿತ್ತು. ಅದಕ್ಕೆ ಪೂರಕವಾಗಿ ಸ್ಪಂದನೆ ಸಿಕ್ಕಿದೆ’ ಎಂದರು.

ಮಹೇಶ್ ಸಿಂಗ್ ಮಾತನಾಡಿ, ‘ಟುಪಲೇವ್ ವಸ್ತು ಸಂಗ್ರಹಾಲಯವು ಅತ್ಯಂತ ವಿಶಿಷ್ಟವಾಗಿರಲಿದೆ. ಟರ್ಬೊ ಪ್ರೊಪೆಲ್ಲರ್ ಹೊಂದಿದ ಪ್ರಪಂಚದ ಅತ್ಯಂತ ವೇಗದ ವಿಮಾನವಿದು. ಮೂರು ವಿಮಾನಗಳನ್ನು ಮಾತ್ರ ವಸ್ತು ಸಂಗ್ರಹಾಲಯ ಮಾಡಲಾಗುತ್ತಿದೆ. ಸದ್ಯಕ್ಕೆ ಎರಡು ವರ್ಷಗಳ ಭೋಗ್ಯಕ್ಕೆ ನೀಡಲಾಗುತ್ತಿದ್ದು, ಕಾಗದ ಪತ್ರಗಳ ಕೆಲಸ ಪೂರ್ಣಗೊಂಡ ಬಳಿಕ ವಿಮಾನವನ್ನು ಸಂಪೂರ್ಣವಾಗಿ ರಾಜ್ಯ ಸರ್ಕಾರಕ್ಕೇ ಹಸ್ತಾಂತರಿಸಲಾಗುತ್ತದೆ’ ಎಂದು ತಿಳಿಸಿದರು.

ನಿರ್ವಹಣೆಯ ಹೊಣೆ: ‘ಯುದ್ಧ ವಿಮಾನ ವಸ್ತು ಸಂಗ್ರಹಾಲಯಕ್ಕೆಪ್ರತಿ ತಿಂಗಳಿಗೆ ₹ 5 ಲಕ್ಷದಷ್ಟುನಿರ್ವಹಣಾ ವೆಚ್ಚವಿರುತ್ತದೆ. ಅದನ್ನು ರಾಜ್ಯ ಸರ್ಕಾರ ಭರಿಸಲಿದೆ. ಸಮೀಪದಲ್ಲೇ ಇರುವ ಚಾಪೆಲ್ ಯುದ್ಧನೌಕೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯನ್ನು ಪರಿಗಣಿಸಿದರೆ, ಪ್ರವೇಶ ಶುಲ್ಕದ ಮೂಲಕ ಈ ಮೊತ್ತ ಸಂಗ್ರಹಿಸುವುದು ಕಷ್ಟವಲ್ಲ’ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದರು.

ಪ್ರವಾಸಿಗರು ಎರಡೂ ವಸ್ತು ಸಂಗ್ರಹಾಲಯಗಳನ್ನು ನೋಡಿ ತೆರಳುವಂತೆ ವ್ಯವಸ್ಥೆ ಮಾಡಲಾಗುವುದು. ಸಾಮಾನ್ಯ ಜನರಿಗೂ ಅನುಕೂಲವಾಗುವಂತೆ‍ಪ್ರವೇಶ ಶುಲ್ಕ ಪಡೆಯಲು ಚಿಂತಿಸಲಾಗಿದೆ ಎಂದೂ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT