ಅಪ್ಪನಿಗೆ ಹುಟ್ಟಿದ ಮಗನಾಗಿದ್ದರೆ ಎದುರಿಸಲಿ: ಪ್ರತಾಪಸಿಂಹಗೆ ಎಂ.ಬಿ.ದೇವಯ್ಯ ಸವಾಲು

7
ಬಿಜೆಪಿ ಮುಖಂಡ ಎಂ.ಬಿ. ದೇವಯ್ಯ, ಪ್ರತಾಪಸಿಂಹ ಮಾತಿನ ಸಮರ

ಅಪ್ಪನಿಗೆ ಹುಟ್ಟಿದ ಮಗನಾಗಿದ್ದರೆ ಎದುರಿಸಲಿ: ಪ್ರತಾಪಸಿಂಹಗೆ ಎಂ.ಬಿ.ದೇವಯ್ಯ ಸವಾಲು

Published:
Updated:

ಮಡಿಕೇರಿ: ಬಿಜೆಪಿ ಹಿರಿಯ ಮುಖಂಡ ಎಂ.ಬಿ. ದೇವಯ್ಯ ಹಾಗೂ ಸಂಸದ ಪ್ರತಾಪಸಿಂಹ ನಡುವೆ ಮಾತಿನ ಸಮರ ಮುಂದುವರಿದಿದ್ದು ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.

‍ಪ್ರತಾಪಸಿಂಹ ಅವರ ಫೇಸ್‌ಬುಕ್ ಹೇಳಿಕೆಗೆ ದೇವಯ್ಯ ಶನಿವಾರ ನಗರದಲ್ಲಿ ಪ್ರತಿಕ್ರಿಯಿಸಿ, ‘ಜಿಲ್ಲೆಯ ನೊಂದ ಜನರ ಪರವಾಗಿ ಮಾತನಾಡಿದ್ದಕ್ಕೆ ಸಂಸದರ ತದುಕುವ ಹೇಳಿಕೆ ಬಾಲಿಶವಾದದ್ದು. ಅದು ಅವರ ನಾಲಿಗೆಯ ಕುಲವನ್ನು ಹೇಳುತ್ತದೆ’ ಎಂದು ತಿರುಗೇಟು ನೀಡಿದರು.

‘ಯಾರದ್ದೋ ಕೃಪೆಯಿಂದ ಟಿಕೆಟ್‌ ಪಡೆದು ಗೆದ್ದಿದ್ದಾರೆ ಅಷ್ಟೇ. ಅದು ಬಿಟ್ಟರೆ ಅವರ ಸಮಾಜ ಸೇವೆ ಏನು’ ಎಂದು ಪ್ರಶ್ನಿಸಿದರು.

‘ಆತನ ಕೈಯಲ್ಲಿ ಹೊಡೆಸಿಕೊಳ್ಳುವ ಮುಟ್ಟಾಳ ನಾನಲ್ಲ. ಗಾಂಧಿವಾದಿಯೂ ಅಲ್ಲ. ಮತ್ತೊಂದು ಕೆನ್ನೆ ತೋರಿಸುವ ಹೇಡಿಯೂ ಅಲ್ಲ. ತಾಕತ್ತಿದ್ದರೆ ಮುಟ್ಟಿ ನೋಡಲಿ. ಆಗ ದೇವಯ್ಯ, ಕೊಡಗಿನ ಜನರು ಯಾರೆಂದು ಗೊತ್ತಾಗಲಿದೆ. ಆತ ಅಪ್ಪನಿಗೆ ಹುಟ್ಟಿದ ಮಗನಾಗಿದ್ದರೆ ಜಿಲ್ಲೆಗೆ ಬಂದು ಎದುರಿಸಲಿ’ ಎಂದು ದೇವಯ್ಯ ಸವಾಲು ಹಾಕಿದರು.

‘ನನಗೆ 68 ವರ್ಷ. ಆತನಿಗೆ ನನ್ನ ಮಗನ ವಯಸ್ಸು. ಪಕ್ಷದ ಸಂಸದ ಬೇಜವಾಬ್ದಾರಿಯಿಂದ ಮಾತನಾಡಿದಾಗ ಸರಿದಾರಿಗೆ ತರುವುದು ನನ್ನ ಕರ್ತವ್ಯ. ಹೆಬ್ಬಟ್ಟಗೇರಿ ಗ್ರಾಮದಲ್ಲಿ ಕೆಟ್ಟ ಶಬ್ದಗಳನ್ನು ನಾನು ಬಳಸಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಆತ ಆರೋಪ ಮುಂದುವರಿಸಿದರೆ ನಾನೂ ಆ ದಾರಿ ತುಳಿಯುತ್ತೇನೆ. ಇಲ್ಲಿಗೆ ಬಿಟ್ಟರೆ ಆತನ ಬೆಳವಣಿಗೆ ದೃಷ್ಟಿಯಿಂದ ಒಳ್ಳೆಯದು’ ಎಂದು ಕಿವಿಮಾತು ಹೇಳಿದರು.

ವಿವಾದಕ್ಕೆ ಏನು ಕಾರಣ: ಭೂಕುಸಿತದ ಅಧ್ಯಯನಕ್ಕೆ ಬಂದಿದ್ದ ಕೇಂದ್ರ ತಂಡಕ್ಕೆ ಭೂಪರಿವರ್ತನೆ ಕುರಿತು ತಪ್ಪು ಮಾಹಿತಿ ನೀಡಿದ್ದಾರೆಂದು ದೇವಯ್ಯ ಅವರು ಹೆಬ್ಬಟ್ಟಗೇರಿಯಲ್ಲಿ ಸಂಸದರನ್ನು ತರಾಟೆಗೆ ತೆಗೆದುಕೊಂಡಿದ್ದರು. ‘ನಿಮ್ಮನ್ನು ಗೆಲ್ಲಿಸಿದ್ದೇ ಕೊಡಗಿನ ದುರಂತ’ವೆಂದೂ ಹೇಳಿದ್ದರು.

ಅದಕ್ಕೆ ಪ್ರತಾಪಸಿಂಹ ಅವರು ‘ನಾನು ಸಾರ್ವಜನಿಕ ಜೀವನದಲ್ಲಿ ಇರೋ ವ್ಯಕ್ತಿ. ಇಂತಹ ಹುಚ್ಚಾಟಗಳನ್ನು ಸಹಿಸಿಕೊಳ್ಳಬೇಕು. ಸಣ್ಣ ಪ್ರಾಯವಾಗಿದ್ದರೆ ಕರೆದು ಬುದ್ಧಿ ಹೇಳಬಹುದಿತ್ತು. ಅವರದ್ದು ಮುದಿ ಪ್ರಾಯ’ ಎಂದು ಲೇವಡಿ ಮಾಡಿ ‘ಅವರ ವಯಸ್ಸಿಗೆ ಗೌರವ ನೀಡಿ ಸುಮ್ಮನಾಗಿದ್ದೆ’ ಎಂದೂ ಎಚ್ಚರಿಸಿದ್ದರು. 

‘ಆ ವಯೋವೃದ್ಧರ ಬಗ್ಗೆ ಜಿಲ್ಲೆಯ ಜನರಿಗೆ ತಿಳಿದಿದೆ. ಕೊಡಗಿನಲ್ಲಿ ಕೆಟ್ಟದ್ದಾಗಿ ಮಾತನಾಡುವ ವ್ಯಕ್ತಿಗೆ ಒಳ್ಳೆಯದ್ದೇ ಆಗಲಿದೆ. ವಿಧಾನಸಭೆ  ಚುನಾವಣೆಗೂ ಮೊದಲು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್‌ ಅವರನ್ನು ಇದೇ ವ್ಯಕ್ತಿ ಟೀಕಿಸಿದ್ದರು. ಭಾರೀ ಅಂತರದಿಂದ ಗೆದ್ದ ಬಳಿಕ ‘ರಂಜನ್‌ ಅಣ್ಣಾ’ ಎಂದು ಕೈಮುಗಿದರು’ ಎಂದು ಸಂಸದರು ಹೇಳಿಕೊಂಡಿದ್ದರು.    

 

 

ಬರಹ ಇಷ್ಟವಾಯಿತೆ?

 • 21

  Happy
 • 0

  Amused
 • 1

  Sad
 • 0

  Frustrated
 • 5

  Angry

Comments:

0 comments

Write the first review for this !