ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೈತ್ರಿ’ ಮತಕ್ಕೆ ಕಮಲ ತಂತ್ರ

ಬಿಜೆಪಿಯಲ್ಲಿ ಬಗೆಹರಿಯದ ಅಭ್ಯರ್ಥಿ ಆಯ್ಕೆ ಕಗ್ಗಂಟು
Last Updated 3 ಮೇ 2019, 17:09 IST
ಅಕ್ಷರ ಗಾತ್ರ

ಚಿತ್ರದುರ್ಗ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಅಭ್ಯರ್ಥಿಯನ್ನು ಮಣಿಸಿ ಚಿತ್ರದುರ್ಗ ಕ್ಷೇತ್ರವನ್ನು ಮರಳಿ ಪಡೆಯುವ ಉಮೇದಿನಲ್ಲಿರುವ ಬಿಜೆಪಿ, ಪ್ರಬಲ ಅಭ್ಯರ್ಥಿಯ ಹುಡುಕಾಟದಲ್ಲಿ ತಲ್ಲೀನವಾಗಿದೆ. ಮಿತ್ರಪಕ್ಷಗಳು ಒಂದಾಗಿರುವುದರಿಂದ ಕ್ಷೇತ್ರದಲ್ಲಿ ಸೋಲು–ಗೆಲುವಿನ ಲೆಕ್ಕಾಚಾರಗಳೂ ಬದಲಾಗಿವೆ.

ಮೈತ್ರಿ ಪಕ್ಷದ ಸೀಟು ಹಂಚಿಕೆ ಮುಕ್ತಾಯದವರೆಗೂ ಕಾದು ಕುಳಿತಿದ್ದ ಬಿಜೆಪಿ ಪಾಳೆಯದಲ್ಲೀಗ ರಾಜಕೀಯ ಚಟುವಟಿಕೆ ಬಿರುಸು ಪಡೆದಿವೆ. ಒಂದೂವರೆ ಡಜನ್‌ ಆಕಾಂಕ್ಷಿಗಳಲ್ಲಿ ಸಮರ್ಥ ಅಭ್ಯರ್ಥಿಯ ಆಯ್ಕೆ ಬಿಡಿಸಲಾರದ ಕಗ್ಗಂಟಾಗಿದೆ. ಕಾಂಗ್ರೆಸ್‌ ಅಭ್ಯರ್ಥಿಯಾಗಲಿರುವ ಸಂಸದ ಬಿ.ಎನ್‌.ಚಂದ್ರಪ್ಪ ವಿರುದ್ಧ ಸಮರ್ಥರನ್ನು ಕಣಕ್ಕೆ ಇಳಿಸಲು ಜಾತಿ–ಉಪಜಾತಿ ಆಧಾರಿತ ವಿಶ್ಲೇಷಣೆಗಳು ಚಾಲ್ತಿಗೆ ಬಂದಿವೆ.

ಚಿತ್ರದುರ್ಗದ ಆರು ವಿಧಾನಸಭಾ ಕ್ಷೇತ್ರಗಳು ಹಾಗೂ ತುಮಕೂರು ಜಿಲ್ಲೆಯ ಶಿರಾ, ‍ಪಾವಗಡ ವ್ಯಾಪ್ತಿಯಲ್ಲಿ ಲೋಕಸಭಾ ಕ್ಷೇತ್ರ ಹರಡಿಕೊಂಡಿದೆ. ಈವರೆಗೆ ಬಿಜೆಪಿ ಒಮ್ಮೆ ಮಾತ್ರ ಚಿತ್ರದುರ್ಗವನ್ನು ಪ್ರತಿನಿಧಿಸಿದೆ. ಕಾಂಗ್ರೆಸ್‌ ಭದ್ರಕೋಟೆಯಂತಿದ್ದ ಈ ಕ್ಷೇತ್ರ ವಿಧಾನಸಭಾ ಚುನಾವಣೆಯಲ್ಲಿ ಛಿದ್ರವಾಗಿದೆ. ವಿಧಾನಸಭಾ ಕ್ಷೇತ್ರವಾರು ಬಲಾಬಲದಲ್ಲಿ ಬಿಜೆಪಿ ಮುಂದಿದೆ. ಆದರೆ, ಕಾಂಗ್ರೆಸ್‌–ಜೆಡಿಎಸ್‌ ಒಂದಾಗಿರುವುದು ಮೈತ್ರಿ ಪಕ್ಷಕ್ಕೆ ಬಲ ತಂದಿದೆ.

ವರ್ಷದ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶಿರಾ ಕ್ಷೇತ್ರವನ್ನು ಜೆಡಿಎಸ್‌ ಗೆದ್ದಿದೆ. ಪಾವಗಡ, ಚಳ್ಳಕೆರೆ ಹಾಗೂ ಚಿತ್ರದುರ್ಗ ವಿಧಾನಸಭಾ ಕ್ಷೇತ್ರಗಳಲ್ಲಿ ಎರಡನೇ ಸ್ಥಾನದಲ್ಲಿತ್ತು. ಜೆಡಿಎಸ್‌ ಪಕ್ಷದ ಮತಗಳನ್ನು ಕಾಂಗ್ರೆಸ್‌ ಅಭ್ಯರ್ಥಿಯತ್ತ ತಿರುಗಿಸುವ ಪ್ರಯತ್ನ ಆರಂಭವಾಗಿದೆ. ಮೈತ್ರಿ ಪಕ್ಷದ ನಿರೀಕ್ಷೆಯಂತೆ ಮತಗಳು ಒಗ್ಗೂಡಿದರೆ ಬಿಜೆಪಿಗೆ ಪ್ರಬಲ ಸ್ಪರ್ಧೆ ಎದುರಾಗಲಿದೆ.

ಜನತಾ ದಳದ ಬೇರುಗಳು ಈ ಕ್ಷೇತ್ರದಲ್ಲಿ ಹಾಗೇ ಉಳಿದಿವೆ. 1999ರಿಂದ 2014ರವರೆಗೆ ನಡೆದ ನಾಲ್ಕು ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಒಂದೂವರೆ ಲಕ್ಷದಿಂದ ಮೂರು ಲಕ್ಷದವರೆಗೂ ಮತಗಳನ್ನು ಪಡೆದಿದೆ. ಲಕ್ಷಕ್ಕೂ ಮಿಗಿಲಾದ ಮತಗಳು ಈ ಪಕ್ಷದ ಬುಟ್ಟಿಯಲ್ಲಿವೆ. ಇವು ಮೈತ್ರಿ ಪಕ್ಷದ ಅಭ್ಯರ್ಥಿ ಪರವಾಗಿ ಚಲಾವಣೆಯಾಗುತ್ತವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ.

ಎರಡೂ ಪಕ್ಷಗಳ ಮತಗಳನ್ನು ಭೇದಿಸಲು ಬಿಜೆಪಿ ಕಾರ್ಯತಂತ್ರ ಹೆಣೆಯುವಲ್ಲಿ ಮಗ್ನವಾಗಿದೆ. ಪಕ್ಷದ ಟಿಕೆಟ್ ಕೇಳಿ 18 ಜನ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಮಾಜಿ ಸಚಿವ ಎ. ನಾರಾಯಣಸ್ವಾಮಿ, ನಿವೃತ್ತ ಐಎಎಸ್‌ ಅಧಿಕಾರಿ ಲಕ್ಷ್ಮಿನಾರಾಯಣ, ಲಿಂಗಸಗೂರು ಮಾಜಿ ಶಾಸಕ ಮಾನಪ್ಪ ಡಿ.ವಜ್ಜಲ್‌, ಮಾಜಿ ಸಂಸದ ಜನಾರ್ದನಸ್ವಾಮಿ ಮುಂಚೂಣಿಯಲ್ಲಿದ್ದಾರೆ. ಭೋವಿ ಹಾಗೂ ಎಡಗೈ ಸಮುದಾಯದ ನಾಯಕರಲ್ಲಿ ಯಾರಿಗೆ ಅವಕಾಶ ನೀಡಬೇಕು ಎಂಬ ಲೆಕ್ಕಾಚಾರಗಳು ಜೋರಾಗಿ ನಡೆಯುತ್ತಿವೆ.

ಸ್ಥಳೀಯ ಅಭ್ಯರ್ಥಿ ಅಸ್ತ್ರ

ಲೋಕಸಭಾ ಚುನಾವಣೆಗೆ ‘ಸ್ಥಳೀಯ ಅಭ್ಯರ್ಥಿ’ಯನ್ನು ಕಣಕ್ಕೆ ಇಳಿಸುವಂತೆ ರಾಜಕೀಯ ಪಕ್ಷಗಳಿಗೆ ಮೊರೆ ಇಡುವ ಆಂದೋಲನ ಕ್ಷೇತ್ರ ವ್ಯಾಪ್ತಿಯಲ್ಲಿ ಬಿರುಸು ಪಡೆದಿದೆ. ಮೈತ್ರಿ ಪಕ್ಷದ ಅಭ್ಯರ್ಥಿ ಬಹುತೇಕ ಖಚಿತವಾಗಿರುವುದರಿಂದ ಬಿಜೆಪಿ ಮೇಲೆ ಒತ್ತಡ ಹೆಚ್ಚಾಗಿದೆ.

1996ರಿಂದ 2014ರವರೆಗೆ ನಡೆದ ಆರು ಚುನಾವಣೆಯ ಪೈಕಿ ನಾಲ್ಕರಲ್ಲಿ ಹೊರಗಿನಿಂದ ಬಂದವರನ್ನು ಮತದಾರರು ಕೈಹಿಡಿದಿದ್ದಾರೆ. ಸ್ಥಳೀಯ ನಾಯಕರನ್ನೇ ಕಣಕ್ಕೆ ಇಳಿಸಬೇಕು ಎಂಬ ಕೋರಿಕೆ ಎಲ್ಲ ಪಕ್ಷಗಳಲ್ಲಿ ಮುನ್ನೆಲೆಗೆ ಬಂದಿದೆ. ಈ ಮನವಿಯನ್ನು ರಾಜಕೀಯ ಪಕ್ಷಗಳು ಪುರಸ್ಕರಿಸುವ ಸಾಧ್ಯತೆ ಕಡಿಮೆ.

ಲೋಕಸಭೆಯ ಮತ ಹಂಚಿಕೆ

ಚುನಾವಣೆ ಜೆಡಿಎಸ್‌– ಕಾಂಗ್ರೆಸ್‌ ಬಿಜೆಪಿ

1999 4,61,014 –

2004 6,07,758 2,41,164

2009 3,81,777 3,70,920

2014 6,69,619 3,66,220

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT